ಭಾನುವಾರ, ಸೆಪ್ಟೆಂಬರ್ 19, 2021
29 °C
ತಾ.ಪಂ. ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಸುನಿಲ್‌ ಕುಮಾರ್‌

ಕೈಗಾರಿಕಾ ವಲಯ, ಕನ್ನಡ ಭವನ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ‘ತಾಲ್ಲೂಕಿನಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನೂರು ಎಕರೆ ಪ್ರದೇಶವನ್ನು ಗುರುತಿಸುವಂತೆ ಅಧಿಕಾರಿಗಳಿಗೆ’ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಕಳದಲ್ಲಿ ಕನ್ನಡ ಭವನ ನಿರ್ಮಿಸಲು ಪುರಸಭಾ ವ್ಯಾಪ್ತಿಯಲ್ಲಿ ಎರಡು ಎಕರೆ ನಿವೇಶನವನ್ನು ಗುರುತಿಸಿ. ರಾಜ್ಯದ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು ಒಳ್ಳೆಯ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದರು.

ಈತನಕ ತಾಲ್ಲೂಕಿನ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಎಲ್ಲ ಇಲಾಖೆ ಅಧಿಕಾರಿಗಳು ಕೈಜೋಡಿಸಿದ್ದೀರಿ. ಸ್ವರ್ಣ ಕಾರ್ಕಳ ಕೇವಲ ಭಾಷಣದ ವಸ್ತುವಲ್ಲ, ಕಾರ್ಯದ ವಸ್ತುವಾಗಬೇಕು. ಅದರ ಪರಿಕಲ್ಪನೆ ಇನ್ನಷ್ಟು ಉತ್ತಮವಾಗಿ ಮುಂದುವರಿಸಲು ಎಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಸಾರ್ವಜನಿಕರ ಯಾವುದೇ ದೂರು ನನ್ನಲಿಗೆ ಬರುವಂತೆ ಮಾಡಬೇಡಿ. ಸ್ಥಳೀಯ ಮಟ್ಟದಲ್ಲಿಯೇ ಪರಿಹಾರ ಮಾಡಬೇಕು. ಎಲ್ಲ ಜನಪ್ರತಿನಿಧಿಗಳ ಜತೆಗೆ ಸೌಹಾರ್ದ ಬೆಳೆಸಿಕೊಂಡು ಸಹಕಾರ ನೀಡಬೇಕು ಎಂದು ಹೇಳಿದರು.

ತಾಲ್ಲೂಕಿನಲ್ಲಿ ಎಲ್ಲಿಯೂ ಭ್ರಷ್ಟಾಚಾರದ ದೂರು ಬರಕೂಡದು. ಭ್ರಷ್ಟಾಚಾರದ ವಿಷಯ ನನ್ನ ಕಿವಿಗೆ ಬಿದ್ದರೆ ನಿಷ್ಠುರವಾಗಿ ನಡೆದುಕೊಳ್ಳಬೇಕಾಗುತ್ತದೆ. ಸಾರ್ವನಿಕ ರೊಂದಿಗೆ ಚೆನ್ನಾಗಿ ನಡೆದುಕೊಳ್ಳಬೇಕು. ಸಮಸ್ಯೆ ಇದ್ದರೆ ನಿಮ್ಮ ಜತೆಗೆ ಇರುತ್ತೇನೆ. ತಾಲ್ಲೂಕಿಗೂ ಸರ್ಕಾರಕ್ಕೂ ಒಳ್ಳೆ ಹೆಸರು ಬರಬೇಕು ಸೂಚನೆ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಮಾತನಾಡಿ, ತಾಲ್ಲೂಕಿನಲ್ಲಿ 269 ಕೋವಿಡ್ ಸೋಂಕು ಪ್ರಕರಣಗಳು ಸಕ್ರಿಯವಾಗಿವೆ. ತಾಲ್ಲೂಕಿನಲ್ಲಿ 92,502 ಮಂದಿಗೆ ಮೊದಲ ಹಂತದಲ್ಲಿ ಲಸಿಕೆ ಹಾಕಲಾಗಿದೆ. 35074 ಮಂದಿಗೆ ಎರಡನೇ ಹಂತದ ಲಸಿಕೆ ನೀಡಲಾಗಿದೆ. ಆ. 15 ರ ನಂತರ ತಾಲ್ಲೂಕಿಗೆ ಅಧಿಕ ಲಸಿಕೆ ಲಭ್ಯ ಆಗಿರುವುದರಿಂದ ಆದ್ಯತೆ ಮೇರೆಗೆ ಅಧಿಕ ಪ್ರಕರಣಗಳಿರುವಲ್ಲಿ ಮೊದಲು ನೀಡಲಾಗುವುದು ಎಂದರು.

ಹೆಚ್ಚು ಜನ ಗುಂಪಾಗಿ ಕೆಲಸ ನಿರ್ವಹಿಸುತ್ತಿರುವ ಕೈಗಾರಿಕೆಗಳಲ್ಲಿ ಶಾಲಾ ಕಾಲೇಜುಗಳ ಶಿಕ್ಷಕ ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ ಮೊದಲು ಲಸಿಕೆ ನೀಡಬೇಕು ಎಂದು ಸಚಿವರು ತಿಳಿಸಿದರು.

ಹೆಬ್ರಿ ತಹಶೀಲ್ದಾರ್ ಪುರಂದರ ಮಾತನಾಡಿ, ತಾಲ್ಲೂಕಿನ ಹೆಚ್ಚಿನ ಪ್ರಕರಣಗಳು ಡೀಮ್ಡ್ ಫಾರೆಸ್ಟ್‌ ಅಡಿ ಬರುವುದರಿಂದ ಬಾಕಿ ಇವೆ ಎಂದರು.

ಇದಕ್ಕೆ ಸಚಿವರು ಪ್ರತಿಕ್ರಿಯಿಸಿ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಸರ್ಕಾರ ಪರಿಹರಿಸಲು ಸಿದ್ಧವಿದೆ. ತಾವು ನಕ್ಷೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಮಳೆಯಿಂದ ಹಾನಿ ಉಂಟಾದದವರಿಗೆ ಶೀಘ್ರವೇ ಪರಿಹಾರ ನೀಡಬೇಕು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ವಿದ್ಯುತ್‌ಯಿಲ್ಲದ ಮನೆ ಎಷ್ಟಿವೆ ಎನ್ನುವುದನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗುರುತಿಸಿ ವಿದ್ಯುತ್ ಸಂಪರ್ಕ ನೀಡುವ ವ್ಯವಸ್ಥೆ ಮಾಡಲು ಸೂಚಿಸಿದರು.

ಕಾರ್ಕಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುದತ್ತ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ

ಶಶಿಧರ್, ಪುರಸಭಾ ಮುಖ್ಯಾಧಿ ಕಾರಿ ರೂಪಾ ಟಿ.ಶೆಟ್ಟಿ ಉಪಸ್ಥಿತರಿದ್ದರು.

‘ಅಧಿಕಾರಿಗೆ ಬಿಸಿ’
ಸಭೆಯಲ್ಲಿ ಜಲಜೀವನ್ ಮಿಶನ್ ಯೋಜನೆ ಕುರಿತು ಸಚಿವರು ಮಾಹಿತಿ ಕೇಳಿದಾಗ ಇಲಾಖೆ ಅಧಿಕಾರಿ ಸಭೆಗೆ ಬಂದಿರಲಿಲ್ಲ. ತಡವಾಗಿ ಸಭೆಗೆ ಬಂದ ಅಧಿಕಾರಿಯನ್ನು ಹೊರ ಹೋಗುವಂತೆ ಸಚಿವ ಸುನಿಲ್‌ ಕುಮಾರ್‌ ಸೂಚನೆ ನೀಡಿದರು.

‘186 ಸರ್ವೆ ಕಾರ್ಯ ಪೂರ್ಣ’
‘ವರ್ಷದ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮುಗ್ಗೇರ್ಕಳ ಧಾರ್ಮಿಕ ನಿವೇಶನಗಳಲ್ಲಿ 186 ಸರ್ವೆ ಕಾರ್ಯ ಪೂರ್ಣಗೊಳಿಸಲಾಗಿದೆ. ಆ.5 ರ ನಂತರ ಪ್ರತಿ ಗ್ರಾಮಕ್ಕೆ ದಿನಾಂಕ ನಿಗದಿ ಪಡಿಸಿ ಸರ್ವೆ ಕಾರ್ಯ ನಡೆಸಲಾಗುತ್ತದೆ. 94 ಸಿ ಮತ್ತು 94 ಸಿಸಿಯಲ್ಲಿ 53 ಪ್ರಕರಣಗಳು ಬೇರೆ ಬೇರೆ ಕಾರಣಗಳಿಂದ ಬಾಕಿಯಿವೆ. ತಾಲ್ಲೂಕಿನ 27,430 ಮಂದಿ ಪಿಂಚಣಿ ಪಡೆಯುತ್ತಿದ್ದಾರೆ’ ಎಂದು ಕಾರ್ಕಳ ತಹಶೀಲ್ದಾರ್ ಪ್ರಕಾಶ ಎಸ್. ಮರಬಳ್ಳಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.