ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕೋಟ್ಯಂತರ ಜನರ ಬದುಕಿಗೆ ಬೆಂಗಳೂರು ಆಸರೆ’

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಣ್ಣನೆ
Published 28 ಜೂನ್ 2024, 3:20 IST
Last Updated 28 ಜೂನ್ 2024, 3:20 IST
ಅಕ್ಷರ ಗಾತ್ರ

ಉಡುಪಿ: ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ನಿರ್ಮಿಸಿದ ಬೆಂಗಳೂರು ನಗರ ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಳ್ಳಲು ಆಶ್ರಯ ಆಗುವುದರ ಜೊತೆಗೆ, ವಿಶ್ವವಿಖ್ಯಾತಿ ಪಡೆದಿದೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ನಗರವನ್ನು ಅಭಿವೃದ್ಧಿಪಡಿಸುವ ದೂರದೃಷ್ಟಿ ಇಟ್ಟುಕೊಂಡು ನಗರವನ್ನು ಅತ್ಯುತ್ತಮವಾಗಿ ನಿರ್ಮಾಣ ಮಾಡಿದ ಮಹಾನ್ ವ್ಯಕ್ತಿತ್ವ ಕೆಂಪೇಗೌಡರ ಅವರದ್ದಾಗಿದೆ ಎಂದರು.

ನಗರ ನಿರ್ಮಾಣ ಮಾಡುವಾಗಲೇ ಸಮಾಜದಲ್ಲಿನ ಪ್ರತಿಯೊಂದು ಜನಾಂಗದ ಕುಲಕಸುಬು ಹಾಗೂ ವೃತ್ತಿ ಆಧಾರಿತವಾಗಿ ಜನರ ಆರ್ಥಿಕ ಅಭಿವೃದ್ಧಿಗೆ ಅನೇಕ ಪೇಟೆಗಳನ್ನು ಕೆಂಪೇಗೌಡರು ನಿರ್ಮಿಸಿದರು. ಈಗಲೂ ಸಹ ಬೆಂಗಳೂರಿನಲ್ಲಿ ಚಿಕ್ಕಪೇಟೆ, ಕಾಟನ್ ಪೇಟೆ, ಕುಂಬಾರ ಪೇಟೆ, ಅಕ್ಕಿಪೇಟೆ, ಬಳೆಪೇಟೆ ಸೇರಿದಂತೆ ಅನೇಕ ಪೇಟೆಗಳು ಇರುವುದನ್ನು ಕಾಣಬಹುದಾಗಿದೆ ಎಂದರು.

ನಾಗರಿಕ ಸಮಾಜಕ್ಕೆ ಅಗತ್ಯವಿರುವ ನೀರಿನ ಸವಲತ್ತುಗಳನ್ನು ಕಲ್ಪಿಸಲು ನಗರದಲ್ಲಿ ಅನೇಕ ಕೆರೆ ನಿರ್ಮಾಣ ಮಾಡುವುದರ ಜೊತೆಗೆ, ಒಂದು ಕೆರೆಯಲ್ಲಿ ನೀರು ತುಂಬಿ ಮತ್ತೊಂದು ಕೆರೆಗೆ ಸಾಗಲು ಕಾಲುವೆ ನಿರ್ಮಾಣ ಯೋಜನೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದರು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ದೇಶದಲ್ಲಿ ಬಹಳಷ್ಟು ನಗರಗಳು ನದಿ ತೀರದಲ್ಲಿ ಸ್ಥಾಪನೆಗೊಂಡಿದ್ದು, ಬೆಂಗಳೂರು ನಗರಕ್ಕೆ ಯಾವುದೇ ನದಿ ತೀರವಿಲ್ಲ. ಬದಲಿಗೆ ಕೆರೆ-ಕಟ್ಟೆಗಳನ್ನು ನಿರ್ಮಾಣ ಮಾಡಿ, ಕುಡಿಯುವ ನೀರು, ವಸತಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಸಾವಿರಾರು ಜನರಿಗೆ ಬದುಕು ಕಟ್ಟಿಕೊಟ್ಟ ಬೆಂಗಳೂರು ಎಂಬ ಸುಂದರ ನಗರವನ್ನು ನಿರ್ಮಿಸಿದ ಹೆಗ್ಗಳಿಕೆಗೆ ಕೆಂಪೇಗೌಡರದ್ದು. ಸಮಾಜದ ಏಳಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ ಅವರ ದೂರದೃಷ್ಟಿಯಿಂದ ಇಂದು ಇಡೀ ವಿಶ್ವವೇ ಬೆಂಗಳೂರಿನತ್ತ ತಿರುಗಿ ನೋಡುವಂತಾಗಿದೆ ಎಂದರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರಕಾಶ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಎರಡು ತರಹದ ವ್ಯಕ್ತಿತ್ವ ಹೊಂದಿರುವವರನ್ನು ಕಾಣಬಹುದಾಗಿದೆ. ಒಬ್ಬರು ತಮ್ಮ ಬದುಕನ್ನು ಕಟ್ಟಿಕೊಂಡು ಶ್ರೀಮಂತರಾಗುತ್ತಾರೆ. ಇನ್ನೊಬ್ಬರು ಸಮಾಜದಲ್ಲಿರುವ ಜನರ ಬದುಕನ್ನು ಕಟ್ಟಿಕೊಡಲು ಮುಂದಾಗುತ್ತಾರೆ. ನಾಡಪ್ರಭು ಕೆಂಪೇಗೌಡರು ಸಮಾಜದ ಎಲ್ಲಾ ಜನರ ಅಭಿವೃದ್ಧಿಗೆ ಮುಂದಾಗಿ ಇಂದಿಗೂ ಪ್ರತಿಯೊಬ್ಬರಿಗೂ ಅವಿಸ್ಮರಣೀಯ ವ್ಯಕ್ತಿಯಾಗಿದ್ದಾರೆ ಎಂದರು.

ಎಲ್ಲರನ್ನು ಸಮಾನ ಮನೋಭಾವದಿಂದ ಕಾಣುತ್ತಿದ್ದ ಅವರು ಯಾವುದೇ ಜಾತಿ, ಮತ, ಧರ್ಮ, ಬೇಧವಿಲ್ಲದೆ ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸಿದ್ದರು. ಬೆಂಗಳೂರು ನಿರ್ಮಾಣ ಕೆಂಪೇಗೌಡರ ಅತಿದೊಡ್ಡ ಕನಸಾಗಿತ್ತು. ನಗರಕ್ಕೆ ಬೇಕಾದ ಅಗತ್ಯತೆಗಳ ಬಗ್ಗೆ ಸ್ಪಷ್ಟತೆ ಹೊಂದಿದ್ದ ಅವರು, ನಗರಕ್ಕೆ ಬೇಕಾದ ಪ್ರತಿಯೊಂದು ಮೂಲ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಬೆಂಗಳೂರಿನ ಇಂದಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು ಎಂದರು.

ಕೇವಲ ಒಂದೇ ಜಾತಿಗೆ ಸೀಮಿತವಾಗಿರದೇ ಸರ್ವಧರ್ಮೀಯರನ್ನೂ ಸಮಾನವಾಗಿ ಕಾಣುತ್ತಿದ್ದ ಕೆಂಪೇಗೌಡರ ಆದರ್ಶಗಳು ನಮ್ಮೆಲ್ಲರಿಗೂ ಹಾಗೂ ಮುಂದಿನ ಪೀಳಿಗೆಗೂ ಮಾರ್ಗದರ್ಶನವಾಗಲಿ ಎಂದರು.

ಕೆಂಪೇಗೌಡರ ಜಯಂತಿ ಅಂಗವಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಜಿಲ್ಲಾ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಎ., ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಇಂದಿರಾ, ಒಕ್ಕಲಿಗ ಸಂಘದ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾನಂದ ನಿರೂಪಿಸಿದರು. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಮಾ ಎಸ್. ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT