ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಶೋರ ಯಕ್ಷಗಾನ ಸಂಭ್ರಮ 27ರಿಂದ

ಯಕ್ಷ ಶಿಕ್ಷಣ ಟ್ರಸ್ಟ್‌ನಿಂದ ತರಬೇತಿ ಪಡೆದ 1400 ವಿದ್ಯಾರ್ಥಿಗಳಿಂದ 45 ಯಕ್ಷಗಾನ ಪ್ರದರ್ಶನ
Last Updated 26 ನವೆಂಬರ್ 2022, 14:04 IST
ಅಕ್ಷರ ಗಾತ್ರ

ಉಡುಪಿ: ಯಕ್ಷ ಶಿಕ್ಷಣ ಟ್ರಸ್ಟ್‌ನಿಂದ ತರಬೇತಿ ಪಡೆದ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 44 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ 45 ಯಕ್ಷಗಾನ ಪ್ರದರ್ಶನಗಳನ್ನೊಳಗೊಂಡ ‘ಕಿಶೋರ ಯಕ್ಷಗಾನ ಸಂಭ್ರಮ–2022’ ಕಾರ್ಯಕ್ರಮ ಉಡುಪಿ ಹಾಗೂ ಬ್ರಹ್ಮಾವರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಹಾಗೂ ಶಾಸಕರೂ ಆಗಿರುವ ಕೆ.ರಘುಪತಿ ಭಟ್‌ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.27ರಿಂದ ಡಿ.12ರವರೆಗೆ ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಹಾಗೂ ಡಿ.13ರಿಂದ 20ರವರೆಗೆ ಬ್ರಹ್ಮಾವರ ಪೇಟೆಯ ಬಂಟರ ಭವನದಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ 2 ಯಕ್ಷಗಾನ ಪ್ರದರ್ಶನಗಳು ನಡೆಯಲಿದೆ. ಪರ್ಯಾಯ ಕೃಷ್ಣಾಪುರ ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಗಾನ ಕಲಾರಂಗದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.

ಯುವ ಸಮುದಾಯವನ್ನು ಯಕ್ಷಗಾನದತ್ತ ಆಕರ್ಷಿಸಲು ವಿದ್ಯಾರ್ಥಿ ದಿಸೆಯಿಂದಲೇ ಯಕ್ಷಗಾನದ ಅಭಿರುಚಿ ಮೂಡಿಸಲು ಹಾಗೂ ಕರಾವಳಿಯ ನೆಲದ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ 2007ರಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್‌ ಆರಂಭಿಸಲಾಯಿತು. ಒಂದೂವರೆ ದಶಕದಲ್ಲಿ ಸಹಸ್ರಾರು ಪ್ರೌಢಶಾಲಾ ವಿದ್ಯಾರ್ಥಿಗಳು ಯಕ್ಷಗಾನ ಕಲಿತಿದ್ದಾರೆ. ಕೆಲವರು ಪ್ರಸಿದ್ಧ ಮೇಳಗಳಲ್ಲಿ ಕಲಾವಿದರಾಗಿದ್ದಾರೆ, ಯಕ್ಷಗಾನ ಗುರುಗಳಾಗಿ ಬೆಳೆದಿದ್ದಾರೆ ಎಂದರು.

ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕಿನ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿ 44 ಶಾಲೆಗಳಲ್ಲಿ 1,400 ವಿದ್ಯಾರ್ಥಿಗಳಿಗೆ 19 ಪರಿಣತ ಯಕ್ಷಗಾನ ಗುರುಗಳಿಂದ ತೆಂಕು ತಿಟ್ಟು ಹಾಗೂ ಬಡಗುತಿಟ್ಟು ಯಕ್ಷಗಾನ ಕಲಿಸಲಾಗಿದೆ.

ಜೂನ್‌ನಿಂದ ಡಿಸೆಂಬರ್‌ವರೆಗೆ 7 ತಿಂಗಳ ಕಾಲ ವಾರದಲ್ಲಿ ಒಂದೂವರೆ ಗಂಟೆಯ 2 ತರಗತಿಗಳಂತೆ ತರಬೇತಿ ನೀಡಲಾಗಿದೆ. ಟ್ರಸ್ಟ್‌ ಅಡಿ ತರಬೇತಿ ಪಡೆದ ಮಕ್ಕಳು 45 ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ.

ಕೇವಲ ಕರಾವಳಿಯ ವಿದ್ಯಾರ್ಥಿಗಳು ಮಾತ್ರವಲ್ಲ; ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಯಕ್ಷಗಾನ ಕಲಿತು ಪ್ರದರ್ಶನ ನೀಡುತ್ತಿರುವುದು ವಿಶೇಷ. ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆ ಆರಂಭಿಸಿದ ಮೇಲೆ ಓದಿನಲ್ಲಿ ಪ್ರಗತಿ ಸಾಧಿಸಿರುವುದು ಕಂಡುಬಂದಿದೆ. ಭಾಷಾಜ್ಞಾನ, ವಿಷಯಗಳ ಮೇಲಿನ ಹಿಡಿತ, ಶುದ್ಧ ಮಾತುಗಾರಿಕೆ, ಏಕಾಗ್ರತೆ ಹೆಚ್ಚಾಗಿದೆ. ಯಕ್ಷ ಶಿಕ್ಷಣ ಪಡೆದ ಯಾವ ವಿದ್ಯಾರ್ಥಿಯೂ ಅನುತೀರ್ಣವಾಗಿಲ್ಲ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಯಕ್ಷಗಾನ ಕಲಾರಂಗದ ಪ್ರಧಾನ ಕಾರ್ಯದರ್ಶಿ ಮುರಳಿ ಕಡೇಕಾರ್ ಮಾತನಾಡಿ ‘ಯಕ್ಷ ಶಿಕ್ಷಣ ಟ್ರಸ್ಟ್‌’ ನಿರಾತಂಕವಾಗಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಟ್ರಸ್ಟ್‌ ಗೌರವಾಧ್ಯಕ್ಷರನ್ನಾಗಿ ಪರ್ಯಾಯ ಮಠಾಧೀಶರನ್ನು ಹಾಗೂ ಅಂದಿನ ಅವಧಿಯ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಂಡು ಬರಲಾಗುತ್ತಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳ ದೇವಳಗಳ ಒಕ್ಕೂಟದ ಅಧ್ಯಕ್ಷರು, ಪರ್ಯಾಯ ಮಠದ ದಿವಾನರನ್ನು ಉಪಾಧ್ಯಕ್ಷರನ್ನಾಗಿ ಹಾಗೂ 7 ಮಂದಿ ವಿಶ್ವಸ್ಥರನ್ನು ನೇಮಿಸಲಾಗಿದೆ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT