ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಶೌಚಾಲಯಗಳ ಅಧ್ವಾನ; ಮಲಮೂತ್ರ ವಿಸರ್ಜನೆಗೆ ಸಂಕಟ

ಸ್ಥಳೀಯ ಆಡಳಿತ ಹಾಗೂ ಸಂಘ ಸಂಸ್ಥೆಗಳ ನಿರ್ವಹಣೆ ಕೊರತೆ
Published 22 ಏಪ್ರಿಲ್ 2024, 7:35 IST
Last Updated 22 ಏಪ್ರಿಲ್ 2024, 7:35 IST
ಅಕ್ಷರ ಗಾತ್ರ

ಉಡುಪಿ: ನಗರಸಭೆ, ಸ್ಥಳೀಯ ಸಂಸ್ಥೆ ಹಾಗೂ ಖಾಸಗಿ ಸಂಘ–ಸಂಸ್ಥೆಗಳ ನಿರ್ವಹಣೆಗೊಳಪಟ್ಟಿರುವ ಸಾರ್ವಜನಿಕ ಶೌಚಾಲಯಗಳು ದುಃಸ್ಥಿತಿಯಲ್ಲಿದ್ದು ನಿರ್ವಹಣೆ ಕೊರತೆಯಿಂದ ನರಳುತ್ತಿವೆ. ಸಮರ್ಪಕ ನೀರಿನ ವ್ಯವಸ್ಥೆ, ಶುಚಿತ್ವ ಇಲ್ಲದೆ, ಸಿಬ್ಬಂದಿ ಕೊರತೆಯಿಂದ ಬಾಗಿಲು ಮುಚ್ಚಿವೆ. ಪರಿಣಾಮ ಸಾರ್ವಜನಿಕರು ಮಲಮೂತ್ರ ವಿಸರ್ಜನೆಗೆ ಶೌಚಾಲಯಗಳನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚು ಜನದಟ್ಟಣೆ ಇರುವ ಜಾಗಗಳಲ್ಲಿ 22 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ನಗರಸಭೆ, ಪ್ರವಾಸೋದ್ಯಮ ಇಲಾಖೆ ಹಾಗೂ ಖಾಸಗಿ ಸಂಘ–ಸಂಸ್ಥೆಗಳು ನಿರ್ವಹಣೆಯ ಹೊಣೆಯನ್ನು ವಹಿಸಿಕೊಂಡಿವೆ. ಆದರೆ, ನಿರ್ವಹಣೆ ಕೊರತೆಯಿಂದ ಶೌಚಾಲಯಗಳು ಗಬ್ಬು ನಾರುತ್ತಿವೆ.

ಎಲ್ಲೆಲ್ಲಿ ಸಮಸ್ಯೆ: ಮಣಿಪಾಲದ ಟೈಗರ್‌ ಸರ್ಕಲ್‌ ಬಳಿಯ ಉದ್ಯಾನದ ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯ ಬಂದ್ ಆಗಿದೆ. ಮಣಿಪಾಲ ಅತ್ಯಂತ ಜನನಿಬಿಡ ಪ್ರದೇಶವಾಗಿದ್ದು ಸಮೀಪದಲ್ಲಿ ಕೆಎಂಸಿ ಆಸ್ಪತ್ರೆ, ಬಸ್‌ ನಿಲ್ದಾಣ, ಆಟೊ ನಿಲ್ದಾಣ ಇದೆ. ಸಾವಿರಾರು ಮಂದಿ ಓಡಾಡುವ ಜಾಗದಲ್ಲಿ ಶೌಚಾಲಯವನ್ನು ಸಮರ್ಪಕವಾಗಿ ತೆರೆಯದ ಪರಿಣಾಮ ಸಾರ್ವಜನಿಕರು ಉದ್ಯಾನದ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದು ಪರಿಸರ ಅಸಹನೀಯವಾಗಿದೆ.

ಕೃಷ್ಣಮಠಕ್ಕೆ ಸಂಪರ್ಕ ಕಲ್ಪಿಸುವ ಬಡಗುಪೇಟೆಯಲ್ಲಿ ಖಾಸಗಿ ಸಂಸ್ಥೆಯ ನಿರ್ವಹಣೆಗೊಳಪಟ್ಟಿರುವ ಸಾರ್ವಜನಿಕ ಶೌಚಾಲಯದಲ್ಲಿ ಶುಚಿತ್ವ ಇಲ್ಲ. ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಶೌಚಾಲಯಗಳಿದ್ದರೂ ಒಂದೇ ಶೌಚಾಲಯ ಮಾತ್ರ ಕಾರ್ಯ ನಿರ್ವಹಿಸುತ್ತಿದೆ.  ಶೌಚಾಲಯದೊಳಗೆ ಸ್ವಚ್ಛತೆ ಇಲ್ಲವಾಗಿದೆ.

ಮತ್ತೊಂದೆಡೆ, ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿರುವ ಸಾರ್ವಜನಿಕ ಶೌಚಾಲಯ ಕೂಡ ಮೋಟಾರ್‌ ದುರಸ್ತಿ ಕಾರಣಕ್ಕೆ ಹಲವು ದಿನಗಳಿಂದ ಮುಚ್ಚಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗಿರುವ ಶೌಚಾಲಯ ಮುಚ್ಚಿರುವುದರಿಂದ ಪ್ರವಾಸಿಗರಿಗೆ ತೊಂದರೆಯಾಗಿದೆ. 

ಕೃಷ್ಣಮಠಕ್ಕೆ ಪ್ರತಿದಿನ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ 4 ರಿಂದ 5 ಸಾವಿರ ಭಕ್ತರು ಭೇಟಿ ನೀಡುತ್ತಿದ್ದು ಭಕ್ತರ ಸಂಖ್ಯೆಗೆ ಅನುಗುಣವಾಗಿ ಸಮುದಾಯ ಶೌಚಾಲಯಗಳ ಕೊರತೆ ಕಾಡುತ್ತಿದೆ. ಪಾರ್ಕಿಂಗ್ ಪ್ರದೇಶದಲ್ಲಿದ್ದ ಎರಡು ಶೌಚಾಲಯಗಳ ಪೈಕಿ ಒಂದು ಮುಚ್ಚಿರುವುದರಿಂದ ಪ್ರವಾಸಿಗರು ಸರದಿಯಲ್ಲಿ ಶೌಚಕ್ಕೆ ಹೋಗಬೇಕಾಗಿದೆ.

ಜಿಲ್ಲಾ ಖಜಾನೆ ಬಳಿಯ ಸಾರ್ವಜನಿಕ ಶೌಚಾಲಯವನ್ನು ದುರಸ್ತಿ ಕಾರಣಕ್ಕೆ ಮುಚ್ಚಲಾಗಿದೆ. ಸಮೀಪದಲ್ಲೇ ಬಸ್ ನಿಲ್ದಾಣ, ಡಾ.ಟಿಎಂಎ ಪೈ ಆಸ್ಪತ್ರೆ, ಬ್ಯಾಂಕ್‌, ಶಾಪಿಂಗ್ ಮಾಲ್‌ ಸಹಿತ ಹಲವು ವಾಣಿಜ್ಯ ಮಳಿಗೆಗಳಿದ್ದು ಸದಾ ಜನಜಂಗುಳಿ ಇರುವ ಪ್ರದೇಶದಲ್ಲಿ ಶೌಚಾಲಯ ಮುಚ್ಚಿರುವುದರಿಂದ ನಾಗರಿಕರಿಗೆ ಸಮಸ್ಯೆಯಾಗಿದೆ.

ಅಜ್ಜರಕಾಡು ಉದ್ಯಾನದಲ್ಲಿ ಸ್ಕೇಟಿಂಗ್‌ ಅಂಗಳದ ಬಳಿ ಇರುವ ಶೌಚಾಲಯ ಮುಚ್ಚಿ ವರ್ಷಗಳು ಕಳೆದರೂ ಬಾಗಿಲು ತೆರೆದಿಲ್ಲ. ನಿತ್ಯ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರು, ಸ್ಕೇಟಿಂಗ್ ಕಲಿಕೆಗೆ ಹಾಗೂ ಆಟವಾಡಲು ಬರುವ ಮಕ್ಕಳು ಮಲ, ಮೂತ್ರ ವಿಸರ್ಜನೆ ಮಾಡಲು ಸಮೀಪದ ಮತ್ತೊಂದು ಉದ್ಯಾನಕ್ಕೆ ಹೋಗಬೇಕಾಗಿದೆ. ಕೆಲವು ಮಕ್ಕಳು ಉದ್ಯಾನದಲ್ಲಿಯೇ ಮೂತ್ರ ವಿಸರ್ಜಿಸುತ್ತಿದ್ದಾರೆ.

‘ಇ’ ಶೌಚಾಲಯಗಳ ಸ್ಥಿತಿ ಶೋಚನೀಯ: ಹೆಚ್ಚು ಜನದಟ್ಟಣೆ ಇರುವ ಕಡೆಗಳಲ್ಲಿ ಬಯಲು ಶೌಚ ಸಮಸ್ಯೆಗೆ ಪರಿಹಾರವಾಗಿ 3 ವರ್ಷಗಳ ಹಿಂದೆ ನಗರಸಭೆ ವತಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪರಿಸರ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಆರಂಭದ ಕೆಲವು ತಿಂಗಳು ಕಾರ್ಯ ನಿರ್ವಹಿಸಿದ ‘ಇ’ ಶೌಚಾಲಯಗಳು ಬಾಗಿಲು ಮುಚ್ಚಿ ವರ್ಷಗಳು ಕಳೆದಿವೆ. 

ಉಡುಪಿ ನಗರದ ಬೋರ್ಡ್‌ ಹೈಸ್ಕೂಲ್ ಹಾಗೂ ಖಾಸಗಿ ನಗರ ಸಾರಿಗೆ ನಿಲ್ದಾಣದ ಬಳಿಯ ಎರಡೂ ಶೌಚಾಲಯಗಳು ಕೆಟ್ಟುನಿಂತಿವೆ. ನರ್ಮ್‌ ಬಸ್ ನಿಲ್ದಾಣ, ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ‘ಇ’ ಶೌಚಾಲಯಗಳು ಇದ್ದೂ ಇಲ್ಲದಂತಾಗಿವೆ.

ಉಡುಪಿ ನಗರದ ಕ್ಲಾಕ್ ಟವರ್ ಬಳಿ ಹಾಳಾಗಿರುವ ಎಲೆಕ್ಟ್ರಾನಿಕ್ ಸಾರ್ವಜನಿಕ ಶೌಚಾಲಯ
ಉಡುಪಿ ನಗರದ ಕ್ಲಾಕ್ ಟವರ್ ಬಳಿ ಹಾಳಾಗಿರುವ ಎಲೆಕ್ಟ್ರಾನಿಕ್ ಸಾರ್ವಜನಿಕ ಶೌಚಾಲಯ
ನಗರಸಭೆಯ ನಿರ್ವಹಣೆಯಲ್ಲಿರುವ ಶೌಚಾಲಯಗಳು ಸುಸ್ಥಿತಿಯಲ್ಲಿವೆ. ಸಮಸ್ಯೆ ಇರುವ ಕಡೆಗಳಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು.
ರಾಯಪ್ಪ ಪೌರಾಯುಕ್ತ
ಸಮಾಜದ ಎಲ್ಲ ವರ್ಗಗಳಿಗೂ ಅನುಕೂಲವಾಗುವಂತೆ ಹೆಚ್ಚು ಜನದಟ್ಟಣೆ ಇರುವ ಕಡೆಗಳಲ್ಲಿ ಸಾರ್ವಜನಿಕ ಸಮುದಾಯ ಶೌಚಾಲಯಗಳನ್ನು ನಿರ್ಮಿಸಬೇಕು.
ವಿಶ್ವನಾಥ್‌ ಸುವರ್ಣ ಸ್ಥಳೀಯ
ಉಡುಪಿ ಬಸ್ ನಿಲ್ದಾಣದ ಸುತ್ತಮುತ್ತಲಿರುವ ಶೌಚಾಲಯಗಳಲ್ಲಿ ನೀರಿನ ಕೊರತೆ ಇದೆ ಸ್ವಚ್ಛತೆ ಇಲ್ಲದೆ ಗಬ್ಬು ವಾಸನೆಯಲ್ಲಿ ಮಲಮೂತ್ರ ವಿಸರ್ಜಿಸಬೇಕು. ‘ಇ’ ಶೌಚಾಲಯಗಳು ದೃಷ್ಟಿಗೊಂಬೆಗಳಂತೆ ನಿಂತಿದ್ದು ಯಾವ ಪ್ರಯೋಜನ ಇಲ್ಲವಾಗಿದೆ.
–ರಾಘವೇಂದ್ರ ಸ್ಥಳೀಯರು
ಸಮುದಾಯ ಶೌಚಾಲಯಗಳ ಕೊರತೆ
ಉಡುಪಿ ಜಿಲ್ಲೆ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವುದರಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಜಿಲ್ಲೆಯಲ್ಲಿ ಸಮುದಾಯ ಶೌಚಾಲಯಗಳ ಕೊರತೆ ಕಾಡುತ್ತಿದೆ. ತೀರ್ಥ ಕ್ಷೇತ್ರಗಳ ದರ್ಶನ ಮಾಡಲು ಬರುವವರು ಪ್ರವಾಸಿತಾಣಗಳನ್ನು ನೋಡಲು ಬರುವವರು ಹೋಟೆಲ್‌ ಮಾಲ್‌ಗಳಿಗೆ ತೆರಳಿ ಮಲಮೂತ್ರ ವಿಸರ್ಜಿಸಬೇಕಾಗಿದೆ. ನಿರ್ಗತಿಕರು ಭಿಕ್ಷುಕರು ಬಸ್ ನಿಲ್ದಾಣದ ಸಮೀಪದ ಖಾಲಿ ಜಾಗಗಳಲ್ಲಿ ಮಲಮೂತ್ರ ಮಾಡುತ್ತಿದ್ದು ಪರಿಸರ ಗಬ್ಬು ವಾಸನೆ ಬೀರುತ್ತಿದೆ.
‘ದುಬಾರಿ ದರ ನಿಗದಿ’
ಮಲ್ಪೆ ಬೀಚ್‌ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಖಾಸಗಿ ಸಂಘ–ಸಂಸ್ಥೆಗಳು ನಿರ್ವಹಣೆ ಮಾಡುತ್ತಿರುವ ಶೌಚಾಲಯಗಳಲ್ಲಿ ದರ ದುಬಾರಿ ಎಂಬ ಟೀಕೆಗಳು ಕೇಳಿಬಂದಿವೆ. ಮೂತ್ರ ವಿಸರ್ಜನೆಗೆ ₹10 ಮಲ ವಿಸರ್ಜನೆಗೆ ₹20 ನಿಗದಿಪಡಿಸಲಾಗಿದೆ. ಶಾಲೆಗಳಿಂದ ಪ್ರವಾಸಕ್ಕೆ ಬರುವ ಮಕ್ಕಳು ದರ ಪಾವತಿಸಲಾಗದೆ ಬೀಚ್‌ನ ಪರಿಸರದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿರುವ ಶೌಚಾಲಯಗಳ ನಿರ್ವಹಣೆಯನ್ನು ಸ್ಥಳೀಯ ಆಡಳಿತ ಅಥವಾ ಕಾರ್ಪೊರೆಟ್‌ ಸಂಸ್ಥೆಗಳ ನಿರ್ವಹಣೆಯ ಮೂಲಕ ಉಚಿತವಾಗಿ ಶೌಚಾಲಯ ಸೇವೆ ಒದಗಿಸಬೇಕು ಎಂಬ ಆಗ್ರಹ ಪ್ರವಾಸಿಗರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT