ಸೋಮವಾರ, ಜೂನ್ 21, 2021
27 °C
ಗ್ರಂಥ ಪಾಲಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಆನ್‌ಲೈನ್‌ನಲ್ಲಿ ಮನೆಬಾಗಿಲಿಗೆ ಗ್ರಂಥಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್ ಸೋಂಕಿನಿಂದಾಗಿ ಗ್ರಂಥಾಲಯದ ಸದುಪಯೋಗ ಪಡೆಯಲು ಸಾರ್ವಜನಿಕರಿಗೆ ಅನಾನುಕೂಲವಾಗಿರುವ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಓದುಗರಿಗೆ ಪುಸ್ತಕ ಓದಲು ಅನುವು ಮಾಡಿಕೊಟ್ಟಿರುವ ಗ್ರಂಥಾಲಯ ಇಲಾಖೆಯ ಕಾರ್ಯ ಪ್ರಶಂಸನೀಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಬುಧವಾರ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಗೂಗಲ್ ಮೀಟ್‌ನಲ್ಲಿ ನಡೆದ ಗ್ರಂಥ ಪಾಲಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶೀಘ್ರ ಗ್ರಂಥಾಲಯದಲ್ಲಿ ಸಾರ್ವಜನಿಕರಿಗೆ ಓದುವ ಅವಕಾಶ ನೀಡಲಾಗುವುದು. ಕೋವಿಡ್–19 ಮಾರ್ಗಸೂಚಿಯನ್ವಯ ಗ್ರಂಥಾಲಯವನ್ನು ಸ್ಯಾನಿಟೈಸ್ ಮಾಡಿ, ಓದಲು ಬರುವವರ ದೇಹದ ಉಷ್ಣಾಂಶ ಪರೀಕ್ಷಿಸಿ ಸೇವೆ ಪಡೆಯಲು ಅನುಮತಿ ನೀಡಲಾಗುವುದು ಎಂದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ನಿರ್ದೇಶಕ ಡಾ.ಸತೀಶ ಕುಮಾರ ಎಸ್.ಹೊಸಮನಿ ಮಾತನಾಡಿ, ಕಳೆದ ಫೆಬ್ರುವರಿಯಲ್ಲಿ ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಪೋರ್ಟಲ್‌ ಅನ್ನು ಸಚಿವ ಸುರೇಶ್ ‌ಕುಮಾರ್ ಅವರು ಉದ್ಘಾಟಿಸಿದ್ದು, ಇದುವರೆಗೆ ಮೂರು ಲಕ್ಷಕ್ಕೂ ಅಧಿಕ ಮಂದಿ ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದರು.

ಪೋರ್ಟಲ್‌ನಲ್ಲಿ ಲಕ್ಷಕ್ಕೂ ಅಧಿಕ ಸಾರ್ವಜನಿಕರು ಪುಸ್ತಕಗಳನ್ನು ಓದುತ್ತಿದ್ದಾರೆ. ಸಾರ್ವಜನಿಕರು ಆನ್‌ಲೈನ್‌ ಓದಿನ ಪ್ರಯೋಜನ ಪಡೆದುಕೊಳ್ಳಬೇಕು. ಮೊಬೈಲ್ ಆ್ಯಪ್‌ ಮೂಲಕವೂ ಗ್ರಂಥಾಲಯ ಪೋರ್ಟಲ್‌ ಬಳಸಬಹುದು ಎಂದರು.

ಉಪ ಮುಖ್ಯ ಗ್ರಂಥಾಲಯ ಅಧಿಕಾರಿ ಮಹಾಬಲೇಶ್ವರ ರಾವ್ ಮಾತನಾಡಿ ಕೋವಿಡ್ ಇರುವುದರಿಂದ ಸಾರ್ವಜನಿಕರು ಮನೆಯಲ್ಲಿ ಕುಳಿತು ಡಿಜಿಟಲ್ ಗ್ರಂಥಾಲಯಗಳ ಮೂಲಕ ಪುಸ್ತಕಗಳನ್ನು ಓದಬಹುದು. ಇ-ಮ್ಯಾಗಜೀನ್, ಇ-ಪುಸ್ತಕಗಳ ಉಪಯೋಗ ಪಡೆಯಬಹುದು ಎಂದರು.

ಡಾ. ಸುಬ್ರಹ್ಮಣ್ಯ ಭಟ್‌ ಉಪನ್ಯಾಸ ನೀಡಿ, ಕೋವಿಡ್ ಸೋಂಕಿಗೆ ಜನ ಹೆದರುವ ಅಗತ್ಯವಿಲ್ಲ. ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡಿಕೊಂಡರೆ ಸಾಕು. ಯಾವ ಔಷಧಿಯ ಅಗತ್ಯವಿಲ್ಲ. ಸಾಧ್ಯವಾದಷ್ಟು ಮನೆಯ ತಿಂಡಿಗಳನ್ನು ತಿನ್ನಿ. ಜಂಕ್ ಫುಡ್‌ಗಳ ಹವ್ಯಾಸ ಬಿಟ್ಟು, ಆರೋಗ್ಯದ ಕಡೆ ಗಮನಹರಿಸಿದರೆ ಕೊರೊನಾದಿಂದ ದೂರವಿರಬಹುದು ಎಂದರು.

ಜಿಲ್ಲಾ ಗ್ರಂಥಾಲಯ ಅಧಿಕಾರಿ ಜಿ.ಐ. ನಳಿನಿ ಕಾರ್ಯಕ್ರಮ ನಿರೂಪಿಸಿದರು, ಜಗದೀಶ್ ಭಟ್ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.