ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿಗೆ ಒಲಿದ ಟಿಕೆಟ್‌

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ
Published 14 ಮಾರ್ಚ್ 2024, 6:33 IST
Last Updated 14 ಮಾರ್ಚ್ 2024, 6:33 IST
ಅಕ್ಷರ ಗಾತ್ರ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್‌ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಒಮ್ಮೆಯೂ ಸ್ಪರ್ಧಿಸದ ಕೋಟ ಅವರನ್ನು ಸ್ಪರ್ಧೆಗಿಳಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ.

ಟಿಕೆಟ್ ಹಿಂದೆ ಜಾತಿ ಲೆಕ್ಕಾಚಾರ:

ಕೋಟ ಶ್ರೀನಿವಾಸ ಪೂಜಾರಿ ಕರಾವಳಿಯ ಪ್ರಬಲ ಬಿಲ್ಲವ ಸಮುದಾಯಕ್ಕೆ ಸೇರಿದವರು. ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಬಿಲ್ಲವ ಮತದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂಜಾರಿ ಅವರಿಗೆ ಮಣೆ ಹಾಕಿರಬಹುದು ಎನ್ನುತ್ತಾರೆ ಪಕ್ಷದ ಹಿರಿಯರು.

ಸಂಘ ಪರಿವಾರದೊಂದಿಗೆ ಆಪ್ತತೆ:

ಆರ್‌ಎಸ್‌ಎಸ್‌ ತತ್ವ ಸಿದ್ಧಾಂತಗಳ ಪ್ರಬಲ ಪ್ರತಿಪಾದಕರಾಗಿ ಹಾಗೂ ನಿಷ್ಠರಾಗಿ ಗುರುತಿಸಿಕೊಂಡಿರುವುದು, ಸಂಘದ ಪ್ರಮುಖರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿರುವುದು ಟಿಕೆಟ್‌ ಗಿಟ್ಟಿಸಲು ಪ್ರಮುಖ ಕಾರಣ ಇರಬಹುದು. ಕೋಟ ಅವರಿಗೆ ಮೀನುಗಾರಿಕೆ, ಸಮಾಜ ಕಲ್ಯಾಣ ಇಲಾಖೆಯಂತಹ ಮಹತ್ವದ ಖಾತೆಗಳನ್ನು ನೀಡಲಾಗಿತ್ತು. ಈಗ ಅವರಿಗೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕನಾನ ಸ್ಥಾನವೂ ದಕ್ಕಿತ್ತು ಎನ್ನುತ್ತಾರೆ ಅವರ ಆಪ್ತರು.

ಕೋಟ ರಾಜಕೀಯ ಹಾದಿ:

ಕೋಟ ತಳಮಟ್ಟದಿಂದ ಹಂತ ಹಂತವಾಗಿ ಬೆಳೆದು ಉನ್ನತ ಹುದ್ದೆಗಳನ್ನು ಪಡೆದುಕೊಂಡ ರಾಜಕಾರಣಿ. 1992ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ವೃತ್ತಿಜೀವನ ಆರಂಭಿಸಿದ ಕೋಟ 1996ರಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಗೆದ್ದರು. 2005ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು.

2009ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್‌ ಸದಸ್ಯರಾದರು. 2010ರಲ್ಲಿ ದ್ವಿತೀಯ, 2016ರಲ್ಲಿ ತೃತೀಯ ಹಾಗೂ 2022ರಲ್ಲಿ ನಾಲ್ಕನೇ ಬಾರಿ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 2019ರಲ್ಲಿ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಕೋಟ ಒಬಿಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರಾಗಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರಾಗಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ.

ಮುಜರಾಯಿ ಸಚಿವರಾಗಿದ್ದಾಗ ಆರಂಭಿಸಿದ ಸಪ್ತಪದಿ ಯೋಜನೆ, ದೇವಸ್ಥಾನಗಳ ವರ್ಗೀಕರಣ, ಹಣ ಬಿಡುಗಡೆಯಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದು, ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಹಾಸ್ಟೆಲ್‌ಗಳ ನಿರ್ಮಾಣ, ಶುಚಿತ್ವಕ್ಕೆ ಒತ್ತು, ಅನುದಾನ ಸೋರಿಕೆ ತಡೆಗೆ ಕ್ರಮ ಕೈಗೊಳ್ಳುವ ಮೂಲಕ ಕೋಟ ಸದ್ದು ಮಾಡಿದ್ದರು. 

ವೃತ್ತಿ ಜೀವನದಲ್ಲಿ ಕಳಂಕ ರಹಿತ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಕೋಟಗೆ ರಾಜಕೀಯ ಜಾಣ್ಮೆ ಹಾಗೂ ಮಾತುಗಾರಿಕೆ ಪ್ರಬಲ ಅಸ್ತ್ರ. ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಹಾಗೂ ಅಧಿಕಾರದಲ್ಲಿದ್ದಾಗ ಸರ್ಕಾರದ ನಡೆಗಳನ್ನು ಸಮರ್ಥಿಸಿಕೊಳ್ಳುವ ಕಲೆ ಕರಗತವಾಗಿದೆ.

ಫೊಟೊಗ್ರಾಫರ್:

ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಛಾಯಾಗ್ರಾಹಕರಾಗಿದ್ದ ಕೋಟ ಸ್ವಂತ ಸ್ಟುಡಿಯೋವನ್ನೂ ಹೊಂದಿದ್ದರು. ಆರಂಭದಲ್ಲಿ ಪತ್ರಿಕೆಗಳಿಗೆ ಛಾಯಾಚಿತ್ರ ಕಳಿಸುತ್ತಿದ್ದ ಕೋಟ ಬಳಿಕ ಪತ್ರಿಕೆಗಳಿಗೆ ಅಂಕಣ ಬರೆಯುವ ಮೂಲಕ ಗುರುತಿಸಿಕೊಂಡಿದ್ದರು.

7ನೇ ತರಗತಿ ವ್ಯಾಸಂಗ

7ನೇ ತರಗತಿ ಓದಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಇಬ್ಬರು ಪುತ್ರಿಯರು ಓರ್ವ ಪುತ್ರ ಹಾಗೂ ಪತ್ನಿ ಶಾಂತಾ ಇದ್ದಾರೆ. ಕೋಟದಲ್ಲಿ ಕುಟುಂಬ ಸದಸ್ಯರೊಂದಿಗೆ ನೆಲೆಸಿದ್ದು ಕಾರ್ಯಕರ್ತರ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ.

‘ಹಿಂದುತ್ವ ರಾಷ್ಟ್ರೀಯತೆ ಅಭಿವೃದ್ಧಿ ಮಂತ್ರ’

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಘಟಕದ ಅಧ್ಯಕ್ಷರು ನನ್ನ ಮೇಲೆ ವಿಶ್ವಾಸವಿಟ್ಟು ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡಿದ್ದಾರೆ. ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡಿದ್ದೇನೆ.  ಹಿಂದುತ್ವ ರಾಷ್ಟ್ರೀಯತೆ ಹಾಗೂ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮತದಾರರ ಮುಂದಿಟ್ಟು ಮತಯಾಚನೆ ಮಾಡುತ್ತೇನೆ. ಮೋದಿ ಅವರ 10 ವರ್ಷಗಳ ಆಡಳಿತ ವಿಶ್ವದ ಮೆಚ್ಚುಗೆ ಪಡೆದಿದ್ದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮತದಾರರ ವಿಶ್ವಾಸ ಪಡೆಯುವಲ್ಲಿ ಸಂಶಯವಿಲ್ಲ. –ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT