ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ: ತರಕಾರಿಗಳ ದರ ಏರಿಕೆ

ಸಾಂಬಾರ್ ಸೌತೆ ಕೆ.ಜಿಗೆ ₹ 60, ಶತಕದ ಗಡಿಯಲ್ಲಿ ಕ್ಯಾರೆಟ್‌ ಬೀನ್ಸ್‌
Last Updated 29 ಸೆಪ್ಟೆಂಬರ್ 2022, 15:49 IST
ಅಕ್ಷರ ಗಾತ್ರ

ಉಡುಪಿ: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ದರ ಹೆಚ್ಚಳದ ಬಿಸಿ ತಟ್ಟಿದೆ. ಕ್ಯಾರೆಟ್‌, ಬೀನ್ಸ್‌ ದರ ಶತಕದ ಗಡಿ ತಲುಪಿದರೆ, ನುಗ್ಗೆ ಶತಕ ಬಾರಿಸಿ ಮುನ್ನುಗಿದೆ.

ತರಕಾರಿಗಿಂತ ಮೀನು ಅಗ್ಗ:ಮಾರುಕಟ್ಟೆಯಲ್ಲಿ ಮೀನಿಗಿಂತ ತರಕಾರಿಗಳ ದರವೇ ಹೆಚ್ಚಾಗಿದೆ. ಕೆ.ಜಿ ಕ್ಯಾರೆಟ್‌ಗೆ ₹ 90 ದರ ಇದ್ದರೆ, ₹ 100ಕ್ಕೆ ಮಧ್ಯಮ ಗಾತ್ರದ 15 ಬಂಗುಡೆ ಮೀನುಗಳು ಸಿಗುತ್ತಿವೆ. ತರಕಾರಿಗಿಂತ ಹೆಚ್ಚಿನ ತೂಕದಲ್ಲಿ ಬೂತಾಯಿ ಮೀನುಗಳು ದೊರೆಯುತ್ತಿವೆ. ಧಕ್ಕೆಯಲ್ಲಿ ಖರೀದಿಸಿದರೆ ತರಹೇವಾರಿ ಮೀನುಗಳ ದರ ಇನ್ನೂ ಕಡಿಮೆಯಾಗಲಿದೆ.

ನವರಾತ್ರಿಯ ಸಂದರ್ಭದಲ್ಲಿ ತರಕಾರಿ ಖಾದ್ಯಗಳ ತಯಾರಿ ಅನಿವಾರ್ಯವಾಗಿರುವುದರಿಂದ ಬೆಲೆ ಹೆಚ್ಚಾದರೂ ಗ್ರಾಹಕರು ಖರೀದಿ ಮಾಡಬೇಕಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೀನ್ಸ್‌ ಕೆ.ಜಿಗೆ ₹ 80 ರಿಂದ ₹ 100 ದರ ಇದೆ. ಈರೇಕಾಯಿ ₹ 50 ರಿಂದ 60, ಹಾಗಲಕಾಯಿ 60 ರಿಂದ 70, ಚಪ್ಪಟೆ ಹುರುಳಿಕಾಯಿ 90ರಿಂದ 100, ಸೋರೆಕಾಯಿ ₹ 50, ಕ್ಯಾಪ್ಸಿಕಂ 80 ರಿಂದ 100 ದರದಲ್ಲಿ ಮಾರಾಟವಾಗುತ್ತಿದೆ.

ತೊಂಡೆಕಾಯಿ ಕೆ.ಜಿಗೆ 70. ಬೆಂಗಳೂರು ಬದನೆ ಕೆ.ಜಿಗೆ 40, ಗೆಣಸು ₹ 50, ಹೂಕೋಸು ₹ 50, ಎಲೆಕೋಸು 30, ಬೀಟ್‌ರೂಡ್‌ 60 ರಿಂದ 70, ಮೂಲಂಗಿ 60 ರಿಂದ 70, ಬದನೆಕಾಯಿ 40 ರಿಂದ 50, ಬೆಂಡೆ 50 ರಿಂದ 60 ದರ ಇದೆ.

ಸಾಮಾನ್ಯವಾಗಿ ಸಾಂಬಾರ್ ಸೌತೆ ಕೆ.ಜಿಗೆ 15 ರಿಂದ ₹ 20 ದರ ಇರುತ್ತಿತ್ತು. ಸದ್ಯ ಕೆ.ಜಿಗೆ ₹ 60ಕ್ಕೆ ಹೆಚ್ಚಾಗಿದೆ. ನವರಾತ್ರಿಯ ಸಂದರ್ಭ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಅನ್ನ ಸಂತರ್ಪಣೆಗೆ ಸಾಂಬಾರ್ ಸೌತೆಯ ಖಾದ್ಯಗಳನ್ನು ಹೆಚ್ಚಾಗಿ ಬಳಸುವ ಕಾರಣ ದರ ಗಗನಕ್ಕೇರಿದೆ ಎನ್ನುತ್ತಾರೆ ವ್ಯಾಪಾರಿಗಳು.

ಮಳೆಗೆ ಸೌತೆ ಬಳ್ಳಿ ಹಾಳಾಗಿರುವ ಕಾರಣ ಜಿಲ್ಲೆಗೆ ಬೇಡಿಕೆಯಷ್ಟು ಸಾಂಬಾರ್ ಸೌತೆ ಬಂದಿಲ್ಲ. ಪರಿಣಾಮ ದರ ಗಗನಕ್ಕೇರಿದೆ. ಸಾಲು ಸಾಲು ಹಬ್ಬಗಳು ಇರುವ ಕಾರಣ ಸದ್ಯಕ್ಕೆ ದರ ಇಳಿಕೆಯಾಗುವ ಸಾದ್ಯತೆ ಕಡಿಮೆ ಎನ್ನುತ್ತಾರೆ ವ್ಯಾಪಾರಿಗಳು.

ಟೊಮೆಟೊ ದರ ಸ್ಥಿರತೆ ಕಾಯ್ದುಕೊಂಡಿದ್ದು ಕೆ.ಜಿಗೆ ₹ 35 ರಿಂದ 40ಕ್ಕೆ ಮಾರಾಟವಾಗುತ್ತಿದೆ. ಈರುಳ್ಳಿ ಕೆ.ಜಿಗೆ 25 ರಿಂದ ₹ 30 ದರ ಇದೆ. ನುಗ್ಗೆ ಕೆ.ಜಿಗೆ ₹ 120ರಿಂದ 130 ಬೆಲೆ ಇದೆ.

ಕೆ.ಜಿಗೆ 200ರ ಗಡಿ ದಾಟಿದ್ದ ಕೊತ್ತಮರಿ ಸೊಪ್ಪಿನ ದರ ಸ್ವಲ್ಪ ಇಳಿಕೆಯಾಗಿದ್ದು ಕೆ.ಜಿಗೆ ₹ 150 ರಿಂದ 170ಕ್ಕೆ ಮಾರಾಟವಾಗುತ್ತಿದೆ. ಒಂದು ಕಟ್ಟಿಗೆ ₹ 10 ಬೆಲೆ ಇದೆ. ಮೆಂತೆ, ಪಾಲಕ್‌, ಅರಿವೆ, ದಂಟು, ಸಬ್ಬಸ್ಸಿಗೆ ಸೊಪ್ಪಿನ ದರ ಕಟ್ಟಿಗೆ 12 ರಿಂದ 15 ಇದೆ.

ಹಬ್ಬದ ಹಿನ್ನೆಲೆಯಲ್ಲಿ ಹಣ್ಣಿನ ದರ ಕೂಡ ಗಗನಮುಖಿಯಾಗಿದೆ. ಕೆ.ಜಿ ಏಲಕ್ಕಿ ಬಾಳೆಹಣ್ಣು ₹ 80, ಸಪೋಟ 100, ಕರ್ಬೂಜ 60, ಪಪ್ಪಾಯ 40, ಪೈನಾಪಲ್‌ 80, ಕಿತ್ತಳೆ 80, ಸೇಬಿಗೆ ಗುಣಮಟ್ಟದ ಆಧಾರದ ಮೇಲೆ 110 ರಿಂದ ₹ 250ರವರೆಗೆ ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT