ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲೆಟಿನ್ ಸ್ಫೋಟ ನೆಪ: ಕಲ್ಲು ಪರವಾನಗಿ ಸ್ಥಗಿತ

ಕಟ್ಟಡ ಸಾಮಗ್ರಿ ಸಾಗಾಟ ಲಾರಿ–ಟೆಂಪೊ ಮಾಲೀಕರ ಸಂಘ ಅಸಮಾಧಾನ
Last Updated 21 ಮಾರ್ಚ್ 2021, 15:41 IST
ಅಕ್ಷರ ಗಾತ್ರ

ಉಡುಪಿ: ಶಿವಮೊಗ್ಗದಲ್ಲಿ ಈಚೆಗೆ ನಡೆದ ಜಿಲೆಟಿನ್ ಸ್ಫೋಟವನ್ನು ನೆಪವಾಗಿಸಿಕೊಂಡು ‌ಜಿಲ್ಲೆಯಲ್ಲಿ ಕಪ್ಪುಶಿಲೆ ಮತ್ತು ಜಲ್ಲಿ ಕಲ್ಲು ಸಾಗಾಟ ಪರವಾನಗಿ ಸ್ಥಗಿತಗೊಳಿಸಲಾಗಿದೆ. ಪರಿಣಾಮ ನಿರ್ಮಾಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಕ್ರಷರ್ ಮಾಲೀಕರು, ಲಾರಿ, ಟೆಂಪೊ, ಟಿಪ್ಪರ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಟ್ಟಡ ಸಾಮಗ್ರಿ ಸಾಗಾಟ ಲಾರಿ–ಟೆಂಪೊ ಮಾಲೀಕರ ಸಂಘದ ಕಾಪು–ಕಟಪಾಡಿ ವಲಯ ಅಧ್ಯಕ್ಷ ಚಂದ್ರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಯಾವುದೇ ಮುನ್ಸೂಚನೆ ನೀಡದೆ ಮಾರ್ಚ್‌ 11ರಿಂದ ಕಲ್ಲು ಸಾಗಾಟ ಪರವಾನಗಿ ನೀಡುವುದನ್ನು ನಿಲ್ಲಿಸಿದೆ. ಪರಿಣಾಮ ಸರ್ಕಾರದ ಕಾಮಗಾರಿಗಳಿಗೆ, ರಸ್ತೆ ನಿರ್ಮಾಣಕ್ಕೆ, ಸಾರ್ವಜನಿಕರ ಮನೆ ಕಾಮಗಾರಿಗೆ ಹಾಗೂ ವಸತಿ ಯೋಜನೆಗಳಿಗೆ ಜಲ್ಲಿಕಲ್ಲು ಪೂರೈಸಲು ಸಾಧ್ಯವಾಗದೆ ಕಾಮಗಾರಿಗಳು ನಿಂತಿವೆ ಎಂದರು.

ಕೋವಿಡ್‌ನಿಂದಾಗಿ ಕಟ್ಟಡ ಸಾಮಗ್ರಿ ಸಾಗಿಸುವ ಲಾರಿ-ಟೆಂಪೋ, ಟಿಪ್ಪರ್ ಮಾಲೀಕರು, ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮರಳಿನ ಸಮಸ್ಯೆಯೂ ಗಂಭೀರವಾಗಿ ನಷ್ಟ ಅನುಭವಿಸಬೇಕಾಯಿತು. ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವಾಗಲೇ ಶಿಲೆ ಹಾಗೂ ಜಲ್ಲಿಕಲ್ಲು ಸಾಗಟ ಪರವಾನಗಿ ಸ್ಥಗಿತಗೊಳಿಸಿರುವುದು ಗಾಯದ ಮೇಲೆ ಬರೆ ಎಳೆದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರಾವಳಿಯ ಕಲ್ಲುಗಣಿಗಾರಿಕೆ ರಾಜ್ಯದ ಇತರೆ ಭಾಗಗಳಲ್ಲಿ ನಡೆಯುವ ಗಣಿಗಾರಿಕೆಗಿಂತ ಭಿನ್ನವಾಗಿದೆ. ಅನ್ಯ ಜಿಲ್ಲೆಗಳಲ್ಲಿ ನೂರಾರು ಎಕರೆಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಕ್ವಾರಿಯ 50 ಅಡಿಗೂ ಹೆಚ್ಚಿನ ಆಳದಲ್ಲಿ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತದೆ. ಆದರೆ ಜಿಲ್ಲೆಯಲ್ಲಿ 1 ರಿಂದ 5 ಎಕರೆಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತದೆ. ಹೆಚ್ಚು ಸ್ಫೋಟಕ ಬಳಕೆ ಕೂಡ ಮಾಡುವುದಿಲ್ಲ. ಆದರೂ ಸರ್ಕಾರ ಎಲ್ಲ ಜಿಲ್ಲೆಗಳನ್ನು ಒಂದೇ ದೃಷ್ಟಿಯಲ್ಲಿಟ್ಟು ಪರವಾನಗಿ ಸ್ಥಗಿತಗೊಳಿಸಿರುವುದು ಖಂಡನೀಯ ಎಂದರು.

ಜಿಲ್ಲೆಯಲ್ಲಿ 40 ಕ್ರಷರ್‌ಗಳಿದ್ದು ಎಲ್ಲವೂ ಸ್ಥಗಿತಗೊಂಡಿವೆ. ಸಾವಿರಾರು ಕಾರ್ಮಿಕರು ಉದ್ಯೋಗವಿಲ್ಲದೆ ಅತಂತ್ರರಾಗಿದ್ದಾರೆ. ಕ್ವಾರಿಯನ್ನು ಅವಲಂಬಿಸಿದ್ದ ಸಾವಿರಾರು ಟೆಂಪೊ-ಲಾರಿಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಬ್ಯಾಂಕ್ ಲೋನ್‌ ಕಟ್ಟಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರ್ಕಾರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಘವೇಂದ್ರ ಶೆಟ್ಟಿ, ವಿಜಯಕುಮಾರ್, ಹರೀಶ್ ಕೋಟ್ಯಾನ್, ಉಮೇಶ್ ಶೆಟ್ಟಿ ಇದ್ದರು.

‘ಗುಜರಿ ನೀತಿಯಲ್ಲ; ಹಣಮಾಡುವ ದಂಧೆ’
ಕೇಂದ್ರ ಸರ್ಕಾರದ ಉದ್ದೇಶಿಸಿ ಗುಜರಿ ನೀತಿ ಸರಕು ಸಾಗಣೆ ವಾಹನ ಮಾಲೀಕರ ಪರವಾಗಿಲ್ಲ. ಬದಲಾಗಿ ಹಳೆಯ ವಾಹನಗಳ ಜತೆಗೆ, ಮಾಲೀಕರನ್ನು ಗುಜರಿಗೆ ಹಾಕುವ ಹುನ್ನಾರವಾಗಿದೆ. ವಾಯುಮಾಲಿನ್ಯದ ಹೆಸರಿನಲ್ಲಿ 15 ವರ್ಷ ಹಳೆಯ ವಾಹನಗಳ ಮೇಲಿನ ಎಫ್‌ಸಿ ಶುಲ್ಕವನ್ನು ಮೂರುಪಟ್ಟು ಹೆಚ್ಚಿಸಲಾಗಿದೆ. ಇದು ಸರ್ಕಾರದ ಹಣ ಮಾಡುವ ದಂಧೆಯೇ ಹೊರತು ಪರಿಸರ ಕಾಳಜಿಯಲ್ಲ. ಮೂರು ಪಟ್ಟು ಹಣ ಕಟ್ಟಿ ಎಫ್‌ಸಿ ಪಡೆದು ವಾಹನ ಓಡಿಸಿದರೆ ಪರಿಸರಕ್ಕೆ ಹಾನಿ ಇಲ್ಲವೇ ಎಂದು ಪ್ರಶ್ನಿಸಿದ ರಾಘವೇಂದ್ರ ಶೆಟ್ಟಿ, ಗುಜರಿ ನೀತಿಯಲ್ಲಿ 15 ವರ್ಷದ ಹಳೆಯ ವಾಹನಗಳ ಬದಲು 25 ವರ್ಷಗಳ ಹಳೆಯ ವಾಹನ ಎಂದು ಬದಲಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT