ಭಾನುವಾರ, ಸೆಪ್ಟೆಂಬರ್ 26, 2021
24 °C
ಉಡುಪಿಯಲ್ಲಿ ಪ್ರಾಯೋಗಿಕ; ಬಳಿಕ ರಾಜ್ಯಕ್ಕೆ ವಿಸ್ತರಣೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

8ರಂದು ಅಂತ್ಯೋದಯ ಮಾಹಿತಿ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ‘ಅಂತ್ಯೋದಯ’ ಮಾಹಿತಿ ಕಾರ್ಯಾಗಾರ ಸೆ.8ರಂದು ಬೆಳಿಗ್ಗೆ 10ಕ್ಕೆ ಉಡುಪಿಯ ಅಂಬಾಗಿಲಿನ ಅಮೃತ್‌ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ, ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಇದರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಲಿದ್ದಾರೆ. ಕಾರ್ಯಾಗಾರದ ಯಶಸ್ಸು ಆಧರಿಸಿ ರಾಜ್ಯಕ್ಕೆ ಅಂತ್ಯೋದಯ ಮಾಹಿತಿ ಕಾರ್ಯಾಗಾರವನ್ನು ವಿಸ್ತರಿಸಲಾಗುವುದು ಎಂದರು.

ಜನಪ್ರತಿನಿಧಿಗಳಿಗೆ ಮೊದಲು ಸರ್ಕಾರದ ಇಲಾಖೆಗಳ ಕಾರ್ಯವೈಖರಿ ಹಾಗೂ ಯೋಜನೆಗಳ ಬಗ್ಗೆ ಅರಿವು ಮೂಡಿದರೆ, ಸರ್ಕಾರದ ಸೌಲಭ್ಯಗಳನ್ನು ಸುಲಭವಾಗಿ ಜನರಿಗೆ ತಲುಪಿಸಬಹುದು ಎಂಬುದು ಅಂತ್ಯೋದಯ ಕಾರ್ಯಾಗಾರದ ಉದ್ದೇಶ ಎಂದು ಕೋಟ ಹೇಳಿದರು.

ಕಾರ್ಯಾಗಾರವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಉದ್ಘಾಟಿಸಲಿದ್ದಾರೆ. ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ವಿ.ಸುನಿಲ್ ಕುಮಾರ್, ಬಿ.ಶ್ರೀರಾಮುಲು ಭಾಗವಹಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

750 ವಾರ್ಡನ್ಸ್ ನೇಮಕಾತಿಗೆ ಪ್ರಸ್ತಾವ:

ರಾಜ್ಯದಲ್ಲಿ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ಶೀಘ್ರ 750 ವಾರ್ಡನ್ಸ್‌ಗಳನ್ನು ನೇಮಕ ಮಾಡಲಾಗುವುದು. ಈ ಸಂಬಂಧ ಲೋಕ ಸೇವಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಶಾಲೆಗಳು ಆರಂಭವಾಗುತ್ತಿದ್ದಂತೆ ಎಲ್ಲ ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳನ್ನು ತೆರೆಯಲು ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ ಎಂದರು.

ಸಮಗ್ರ ಗಿರಿಜನ ಯೋಜನೆ ಸಮನ್ವಯ ಅಧಿಕಾರಿ ಪಿ.ದೂದ್‌ಪೀರ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ದೇವಿಂದ್ರ ಎಸ್.ಬಿರಾದಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೋಶನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

‘ನಗರಗಳಲ್ಲಿ ಬಿಜೆಪಿ ಪ್ರಾಬಲ್ಯ’

ಪಾಲಿಕೆ ಹಾಗೂ ನಗರಾಡಳಿತ ಚುನಾವಣೆಯ ಫಲಿತಾಂಶ ಬಿಜೆಪಿ ಪರವಾಗಿರುತ್ತದೆ ಎಂಬ ಜನರ ಮಾತು ಸತ್ಯವಾಗಿದೆ. ರಾಜ್ಯದೆಲ್ಲೆಡೆ ಬಿಜೆಪಿ ಪರವಾದ ವಾತಾವರಣ ಇದ್ದು, ನಗರ ಪ್ರದೇಶಗಳ ಸಮಸ್ಯೆಗಳಿಗೆ ಬಿಜೆಪಿ ಮಾತ್ರ ಪರಿಹಾರವಾಗಬಲ್ಲದು ಎಂಬುದನ್ನು ಮತದಾರರು ತೋರಿಸಿಕೊಟ್ಟಿದ್ದಾರೆ. ಅತಂತ್ರ ಫಲಿತಾಂಶ ಇರುವ ಕಡೆಗಳಲ್ಲಿ ಬಿಜೆಪಿಯೇ ಅಧಿಕಾರ ಹಿಡಿಯಲಿದೆ. ಜೆಡಿಎಸ್‌ ಸ್ಪರ್ಧೆ ಮಾಡದ ಕಡೆಗಳಲ್ಲಿ ಬಿಜೆಪಿ ಪರವಾದ ಒಲವು ಇರುವುದು ಕಂಡಬರುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಕಾಂಗ್ರೆಸ್‌ ಅಪಪ್ರಚಾರಕ್ಕೆ ಜನ ಕಿವಿಗೊಡುತ್ತಿಲ್ಲ’

ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯು ಅಂತರರಾಷ್ಟ್ರೀಯ ಮಾರುಕಟ್ಟೆಯ ದರದ ಮೇಲೆ ಅವಲಂಬಿತವಾಗಿರುತ್ತದೆ ಎಂಬ ಸತ್ಯ ಜನರಿಗೆ ಅರಿವಾಗಿದೆ. ಹಾಗಾಗಿ, ಕಾಂಗ್ರೆಸ್‌ ಅಪಪ್ರಚಾರಕ್ಕೆ ಮತದಾರರು ಕಿವಿಗೊಡುತ್ತಿಲ್ಲ. ಗಣೇಶ ಹಬ್ಬವನ್ನು ಕೋವಿಡ್‌ ಮಾರ್ಗಸೂಚಿಯಂತೆ ಆಚರಿಸಬೇಕು ಎಂದು ಸರ್ಕಾರ ನಿರ್ಧರಿಸಿದ್ದು, ಜನರು ಸಹಕರಿಸಲಿದ್ದಾರೆ ಎಂದು ಸಚಿವ ಕೋಟ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.