ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮಹಿಳೆಯ ಮೂತ್ರಕೋಶದಲ್ಲಿ 672 ಗ್ರಾಂ ಕಲ್ಲು

ದೊಡ್ಡ ಗಾತ್ರದ ಕಲ್ಲು ಪತ್ತೆಯಾಗಿದ್ದು ವಿಶ್ವದಲ್ಲಿಯೇ ಮೊದಲು: ಕೆಎಂಸಿ
Last Updated 25 ನವೆಂಬರ್ 2022, 14:28 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಈಚೆಗೆ ರೋಗಿಯೊಬ್ಬರ ಮೂತ್ರಕೋಶದಿಂದ ದೊಡ್ಡ ಗಾತ್ರದ ಮೂತ್ರಕೋಶದ ಕಲ್ಲನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ಮಹಿಳಾ ರೋಗಿಯೊಬ್ಬರ ಮೂತ್ರಕೋಶದಿಂದ ಹೊರತೆಗೆಯಲಾಗಿರುವ ಅತಿದೊಡ್ಡ ಕಲ್ಲು ಇದಾಗಿದೆ ಎಂದು ಕೆಎಂಸಿ ವೈದ್ಯರು ತಿಳಿಸಿದ್ದಾರೆ.

60 ವರ್ಷದ ಮಹಿಳೆ ಕಳೆದ 6 ವರ್ಷಗಳಿಂದ ಉರಿ ಮೂತ್ರ ಸಮಸ್ಯೆಯಿಂದ ಬಳಲುತ್ತಿದ್ದು ಮೂತ್ರನಾಳದ ಸೋಂಕಿಗೆ ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ. ಸಮಸ್ಯೆ ಉಲ್ಭಣಗೊಂಡು ಈಚೆಗೆ ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು.

ರೋಗಿಗೆ ಸರಳ ಸಿ.ಟಿ ಸ್ಕ್ಯಾನ್ ಮಾಡಿದಾಗ ಮೂತ್ರಕೋಶವನ್ನು ಆವರಿಸಿಕೊಂಡಿರುವ ದೊಡ್ಡ ಕಲ್ಲು ಪತ್ತೆಯಾಯಿತು. ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ ಪದ್ಮರಾಜ್ ಹೆಗ್ಡೆ ಮಾರ್ಗದರ್ಶನದಲ್ಲಿ 11.5 x 7.5 ಸೆಂ.ಮೀ ಅಳತೆಯ 672 ಗ್ರಾಂ ತೂಕದ ಮೂತ್ರಕೋಶದ ಕಲ್ಲನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.

ಡಾ.ಅಂಶುಮನ್, ಡಾ.ಕಾಶಿ ವಿಶ್ವನಾಥ್, ಡಾ.ನಿಶಾ, ಡಾ.ವಿವೇಕ್ ಪೈ ಮತ್ತು ಡಾ.ಕೃಷ್ಣ ಅವರನ್ನೊಳಗೊಂಡ ತಂಡ ತೆರೆದ ಸಿಸ್ಟೊಲಿಥೊಟಮಿ ಶಸ್ತ್ರಚಿಕಿತ್ಸೆ ಮೂಲಕ ಕಲ್ಲನ್ನು ಹೊರತೆಗೆದಿದ್ದು ರೋಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಮಹಿಳಾ ರೋಗಿಯಲ್ಲಿ 672 ಗ್ರಾಂ ತೂಕದ ಮೂತ್ರಕೋಶದ ಕಲ್ಲು ಪತ್ತೆಯಾಗಿರುವುದು ವಿಶ್ವದಲ್ಲಿ ಇದೇ ಮೊದಲು. ಹಿಂದೆ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ 528 ಗ್ರಾಂ ಮೂತ್ರಕೋಶದ ಕಲ್ಲು ಪತ್ತೆಯಾಗಿತ್ತು ಎಂದು ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಅಪರೂಪದ ಕ್ಲಿಷ್ಟಕರ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದ ತಂಡಕ್ಕೆ ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT