ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಶ್ ಫ್ಯಾಕ್ಟರಿ; ಮೀನಿನ ಖಾದ್ಯ ಸೂಪರ್ ರ್ರೀ..

ಮಡಿಕೆಯಲ್ಲಿ ತಿಳಿಗಂಜಿ, ತಾಮ್ರದ ಲೋಟದಲ್ಲಿ ನೀರು ಪೂರೈಕೆ; ಸಾಂಪ್ರದಾಯಿಕ ಶೈಲಿಯ ಅಡುಗೆ
Last Updated 24 ಜುಲೈ 2019, 9:04 IST
ಅಕ್ಷರ ಗಾತ್ರ

ಉಡುಪಿಯಲ್ಲಿ ಮೀನೂಟದ ಹೋಟೆಲ್‌ಗಳಿಗೆ ಬರವಿಲ್ಲ. ಆದರೆ, ಶುಚಿ, ರುಚಿ ಹಾಗೂ ಸಾಂಪ್ರದಾಯಿಕ ಶೈಲಿಯ ಮೀನಿನ ಖಾದ್ಯಗಳನ್ನು ತಯಾರಿಸುವ ಹೋಟೆಲ್‌ಗಳ ಸಾಲಿನಲ್ಲಿ ಅಂಗ್ರಪಂಕ್ತಿಯಲ್ಲಿ ನಿಲ್ಲುವುದು ಫಿಶ್ ಫ್ಯಾಕ್ಟರಿ.

ಉಡಪಿಯ ಅಲಂಕಾರ್ ಚಿತ್ರಮಂದಿರ ಪಕ್ಕದ ರಸ್ತೆಯಲ್ಲಿ ಸಾಗಿದರೆ ಬಲಗಡೆ ಫಿಶ್‌ ಫ್ಯಾಕ್ಟರಿ ಹೋಟೆಲ್‌ ಕಾಣುತ್ತದೆ. ಮೆಟ್ಟಿಲುಗಳನ್ನು ಹತ್ತುತ್ತಾ 2ನೇ ಮಹಡಿ ತಲುಪುವಷ್ಟರಲ್ಲಿ, ಮೀನಿನ ಖಾದ್ಯಗಳ ಘಮಲು ಗ್ರಾಹಕರನ್ನು ಹೋಟೆಲ್‌ಗೆ ಸ್ವಾಗತಿಸುತ್ತದೆ.

ಮೊದಲಸಲ ಹೋಟೆಲ್‌ಗೆ ಭೇಟಿನೀಡುವ ಗ್ರಾಹಕರಿಗೆ ಅಲ್ಲಿ ವಿಭಿನ್ನ ಹಾಗೂ ವಿಶಿಷ್ಟ ಅನುಭವವಾಗುವುದು ಖಚಿತ. ಕಾರಣ, ಫಿಶ್ ಫ್ಯಾಕ್ಟರಿಯಲ್ಲಿ ಮೀನೂಟ ಮಾತ್ರವಲ್ಲ; ಕರಾವಳಿಯ ಶ್ರೀಮಂತ ಸಂಸ್ಕೃತಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಕರಾವಳಿಯ ಗಂಡುಕಲೆ ಯಕ್ಷಗಾನ, ಭೂತ ಕೋಲ, ಕಂಬಳದ ಚಿತ್ರಣ ಮನಸ್ಸಿಗೆ ಮುದ ನೀಡುತ್ತದೆ. ಇನ್ನೂ ಹೋಟೆಲ್‌ನ ಪ್ರಮುಖ ಆಕರ್ಷಣೆ ಸಾಂಪ್ರದಾಯಿಕ ಶೈಲಿಯ ಊಟದ ವಿಧಾನ. ಮಣ್ಣಿನ ಮಡಿಕೆಯಲ್ಲಿ ನೀಡುವ ತಿಳಿಗಂಜಿ ಫಿಶ್‌ ಫ್ಯಾಕ್ಟರಿಯ ವಿಶೇಷ.

ಹಿಂದಿನ ಕಾಲದ ಆರೋಗ್ಯಕರ ಆಹಾರ ಪದ್ಧತಿಯನ್ನು ಗ್ರಾಹಕರಿಗೆ ಪರಿಚಯಿಸುವುದು ಮಡಕೆ ಬಳಕೆ ಹಿಂದಿರುವ ಪ್ರಮುಖ ಉದ್ದೇಶ ಎನ್ನುತ್ತಾರೆ ಹೋಟೆಲ್‌ನ ಮಾಲೀಕರಲ್ಲಿ ಒಬ್ಬರಾದ ರಾಘವೇಂದ್ರ.

ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಸ್ಟೀಲ್ ಗ್ಲಾಸ್‌ಗಳನ್ನು ನೀಡಿದರೆ, ಫಿಶ್‌ ಫ್ಯಾಕ್ಟರಿಯಲ್ಲಿ ಮಾತ್ರ ತಾಮ್ರದ ಲೋಟಗಳಲ್ಲಿ ನೀರು ನೀಡಲಾಗುತ್ತದೆ. ಜತೆಗೆ, ಮಡಕೆಯ ಲೋಟದಲ್ಲಿ ಮಜ್ಜಿಗೆ ನೀಡಲಾಗುತ್ತದೆ. ಇದರ ಹಿಂದಿನ ಉದ್ದೇಶವೂ ಆರೋಗ್ಯವೇ ಎನ್ನುತ್ತಾರೆ ಅವರು.

ಇನ್ನೂ ರುಚಿಯ ವಿಚಾರದಲ್ಲೂ ಇತರ ಹೋಟೆಲ್‌ಗಳಿಗಿಂತಲೂ ಫಿಶ್ ಫ್ಯಾಕ್ಟರಿ ಭಿನ್ನ. ಮೀನಿನ ಖಾದ್ಯಗಳನ್ನು ತಯಾರಿಸಲು ತೆಂಗಿನ ಎಣ್ಣೆಯ ಮಿಲ್‌ಗಳಿಂದಲೇ ಶುದ್ಧವಾದ ತೆಂಗಿನ ಎಣ್ಣೆ ಖರೀದಿಸಿ ಬಳಸಲಾಗುತ್ತದೆ. ಹಾಗಾಗಿ, ಇಲ್ಲಿಯ ವಿಶೇಷವಾದ ರುಚಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎನ್ನುತ್ತಾರೆ ರಾಘವೇಂದ್ರ.

ಫ್ರೆಶ್‌ ಮೀನು:

ಬಂದರಿನಲ್ಲಿ ಸ್ವಂತ ಬೋಟ್‌ ಇದ್ದು, ತಾಜಾ ಮೀನುಗಳನ್ನು ಆರಿಸಿ ತರಲಾಗುತ್ತದೆ. ಹಾಗಾಗಿ, ಫಿಶ್ ಫ್ಯಾಕ್ಟರಿಯ ಮೀನಿನ ಖಾದ್ಯಗಳಿಗೆ ಬೇಡಿಕೆ ಹೆಚ್ಚು. ಒಮ್ಮೆ ಹೋಟೆಲ್‌ಗೆ ಬಂದವರು ಖಾಯಂ ಗ್ರಾಹಕರಾಗುತ್ತಾರೆ. ಉಡುಪಿ ಮಾತ್ರವಲ್ಲ, ಮಂಗಳೂರು, ಬೆಂಗಳೂರು, ಮುಂಬೈ ಸೇರಿದಂತೆ ಹಲವು ಕಡೆಗಳಿಂದ ಉಡುಪಿಗೆ ಬಂದವರು ತಪ್ಪದೆ ಹೋಟೆಲ್‌ಗೆ ಭೇಟಿನೀಡುತ್ತಾರೆ ಎನ್ನುತ್ತಾರೆ ಅವರು.

ಆನ್‌ಲೈನ್‌ನಲ್ಲೂ ಫಿಶ್‌ ಫ್ಯಾಕ್ಟರಿ ಖಾದ್ಯಗಳಿಗೆ ಬೇಡಿಕೆ ಹೆಚ್ಚಿದೆ. ಸ್ವಿಗ್ಗಿ ಹಾಗೂ ಝೊಮ್ಯಾಟೊ ಆ್ಯಪ್‌ನಲ್ಲಿ ಗ್ರಾಹಕರು ಮನೆಗೇ ಮೀನಿನ ಖಾದ್ಯ ತರಿಸಿಕೊಳ್ಳಬಹುದು ಎಂದರು.

ಸ್ಪೆಷಲ್ ಖಾದ್ಯಗಳು:

ಅಂಜಲ್‌ ತವಾ ಫೈ, ಮೆಲು ತವಾ ಫೈ, ಪಾಂಪ್ಲೆಟ್‌, ಪ್ರಾನ್ಸ್‌ ಗೀ ರೋಸ್ಟ್‌, ನೀರು ದೋಸೆ, ಬಂಗುಡೆ ಫ್ರೈ, ಡಿಸ್ಕೋ, ಕಾಣೆ, ಕೊಡ್ಡಾಯ್, ಸಿಲ್ವರ್ ಫಿಶ್‌, ಭೂತಾಯಿಫಿಶ್ ಕರಿ, ನಾಟಿ ಕೋಳಿ ಸುಕ್ಕ, ಸ್ಕ್ವಿಡ್‌ ತವಾ, ಮಸಾಲ ಫ್ರೈ ಸೇರಿದಂತೆ ಹಲವು ಖಾದ್ಯಗಳು ಇಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT