ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷಕ್ಕೊಳಗಾದ ಐತಿಹಾಸಿಕ ನಿನ್ನಿಕಲ್ಲು ಪಾದೆ

ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಪಡಿಸಲು ಇತಿಹಾಸ ತಜ್ಞರ ಆಗ್ರಹ
Last Updated 28 ಜನವರಿ 2023, 19:30 IST
ಅಕ್ಷರ ಗಾತ್ರ

ಪಡುಬಿದ್ರಿ: ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಡಬೇಕಾದ ನಂದಿಕೂರು ಪರಿಸರದಲ್ಲಿರುವ ಐತಿಹಾಸಿಕ ನಿನ್ನಿಕಲ್ಲು ಪಾದೆ ವಿನಾಶದ ಅಂಚು ತಲುಪಿದೆ.

ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ನಂದಿಕೂರು ಸನಿಹದಲ್ಲಿರುವ ಕಾಣಸಿಗುವ ನಿನ್ನಿಕಲ್ಲು ಪಾದೆಯು ಎಲ್ಲೂರಿನ ಕುಂದ ಹೆಗ್ಗಡೆಯ ಮೂಲ ಅರಮನೆಯ ದಿಬ್ಬವಾಗಿದ್ದು, ಕೋಟೆ, ನಾಗ ಭೈರವೇಶ್ವರ ಹಾಗೂ ಪ್ರಾಚ್ಯ ಅವಶೇಷಗಳನ್ನೊಳಗೊಂಡಿರುವ ಮಧ್ಯಯುಗ ಕಾಲದ ಪ್ರಮುಖ ಐತಿಹಾಸಿಕ ನಿವೇಶನ.

ಹಿಂದೆ ಅರಮನೆಯ ಸುತ್ತಲೂ ಕೋಟೆ ಇತ್ತು. ಹೆಬ್ಬಂಡೆಗಳು ಕೋಟೆಯ ಭಾಗವಾಗಿತ್ತು. ನಿನ್ನಿಕಲ್ಲುವಿನ ಅವಳಿ ಬಂಡೆಗಳ ನಡುವೆ ನಸುಳಿ ಹೋಗುವಷ್ಟು ಅವಕಾಶವೂ ಇದ್ದು, ತುಳುನಾಡಿನ ಅಪರೂಪದ ಪ್ರಾಚ್ಯಾವಶೇಷಗಳನ್ನೊಳಗೊಂಡ ಪಾದೆಯಾಗಿ ನಿನ್ನಿಕಲ್ಲ ಗುರುತಿಸಿಕೊಂಡಿದೆ.

15ನೇ ಶತಮಾನದಲ್ಲಿ ಕುಂದ ಅರಸರ ಅರಮನೆ ಈ ನಿನ್ನಿ ಕಲ್ಲು ಸಮೀಪವಿತ್ತು ಎಂಬ ಮಾಹಿತಿಯು ಮೂಡಬಿದಿರೆಯ ಅರಮನೆ, ಬಂಟಕಲ್ಲು, ಉಡುಪಿಯ ಕಷ್ಣ ಮಠ ಹಾಗೂ ಉದ್ಯಾವರ ಗಣಪತಿ ದೇವಳಗಳಲ್ಲಿ ದೊರೆತ ಶಾಸನಗಳಿಂದ ಲಭ್ಯವಾಗುತ್ತದೆ ಎನ್ನುತ್ತಾರೆ ಇತಿಹಾಸ ತಜ್ಞರು.

ನಿನ್ನಿಕಲ್ಲು ಪಾದೆ ಬಳಿಯ 53 ಎಕರೆ ಪ್ರದೇಶವನ್ನು ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ಕೆಐಎಡಿಬಿ 1999–2000ರಲ್ಲಿ ಕೈಗಾರಿಕಾ ವಲಯವನ್ನಾಗಿಸಲು ಭೂಸ್ವಾಧೀನ ಪಡಿಸಿಕೊಂಡಿತ್ತು. ಯುಪಿಸಿಎಲ್- ಸುಜ್ಲಾನ್ ಯೋಜನೆ ಬೇರೆ ಜಾಗದಲ್ಲಿ ಅನುಷ್ಠಾನಗೊಂಡ ಬಳಿಕ ಈ ಜಾಗವನ್ನು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ನೀಡಲಾಯಿತು.

ಈ ಸಂದರ್ಭ ಸ್ಥಳೀಯರು ಹಾಗೂ ಇತಿಹಾಸ ತಜ್ಞರ ಹೋರಾಟದ ಫಲವಾಗಿ ನಿನ್ನಿಕಲ್ಲು ಪಾದೆಯ ಜಾಗ ಹೊರತುಪಡಿಸಿ ಉಳಿದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಬಳಿಕ ನಿನ್ನಿಕಲ್ಲು ಪ್ರದೇಶಕ್ಕೆ ಯಾರೂ ಪ್ರವೇಶಿಸದಂತೆ ತಂತಿ ಬೇಲಿ ಅಳವಡಿಸಲಾಯಿತು.

ಕಾರ್ಕಳದ ಭೈರವಸರ ಬೆದರಿಕೆಯ ವಿರುದ್ಧ ತುಂಡರಸರಾದ ಕುಂದ ಹೆಗಡೆ, ಪಡುಬಿದ್ರಿ ಕಿನ್ಯಕ್ಕ ಬಲ್ಲಾಳರು, ಕಾಪು ಮರ್ದ ಹೆಗಡೆ ನಿನ್ನಿಕಲ್ಲು ಪ್ರದೇಶವನ್ನು ಕೋಟೆಯನ್ನಾಗಿ ನಿರ್ಮಿಸಿಕೊಂಡಿದ್ದರು ಎಂಬುದು ದಾಖಲೆಗಳಿಂದ ತಿಳಿಯುತ್ತದೆ. ನಿನ್ನಿ ಕಲ್ಲು ಪ್ರದೇಶದಲ್ಲಿ ಕಾಲಭೈರವನ ವಿಗ್ರಹ ಇತಿಹಾಸವನ್ನು ಹೇಳುತ್ತದೆ.

ಕಪಾಲ ಕಾಲಭೈರವೇಶ್ವರ ಕೆತ್ತನೆ:

ನಿನ್ನಿಕಲ್ಲು ಪಾದೆಯ ನಾಲ್ಕು ಬೃಹತ್ ಬಂಡೆಗಳ ಮಧ್ಯೆ 15ನೇ ಶತಮಾನದಲ್ಲಿ ಕೆತ್ತಲ್ಪಟ್ಟಿರುವ ಕಪಾಲಕಾಲ ಭೈರವೇಶ್ವರನ ಉಬ್ಬು ಶಿಲ್ಪ ಇದೆ. 4 ಅಡಿಯ ಕೆತ್ತನೆಯಲ್ಲಿ 7 ನಾಗಗಳುಳ್ಳ ನಾಗ ಕಿರೀಟ, ಕಿವಿಯಲ್ಲಿ ನಾಗಾಭರಣ, ನಾಗ ಯಗ್ನೋಪವೀತ, ಢಮರು, ತ್ರಿಶೂಲ, ಖಡ್ಗ, ಪಾನ ಪಾತ್ರೆ, ಕಪಾಲಗಳು, ಕಾಲಲ್ಲಿ ಸುತ್ತಿಕೊಂಡ ನಾಗ, ಸೊಂಟದಲ್ಲಿ ಚಿನ್ನಾಭರಣ ಸಹಿತ ಭೀಭತ್ಸ ಮೂರ್ತಿಯಂತೆ ತೋರುತ್ತದೆ.

ಕರಾವಳಿ ಜಿಲ್ಲೆಗಳಲ್ಲಿ ಇಂತಹ ಹಲವು ಪುರಾತನ ಶಾಸನಗಳಿದ್ದು, ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ತುಳುನಾಡಿನ ಐತಿಹಾಸಿಕ ಸ್ಮಾರಕಗಳು, ನಿವೇಶನಗಳು, ಪ್ರಾಚ್ಯ ಅವಶೇಷಗಳನ್ನು ಸಂರಕ್ಷಿಸಲು ಸರ್ಕಾರ ಕ್ರಿಯಾಯೋಜನೆ ರೂಪಿಸಬೇಕಿದೆ ಎನ್ನುತ್ತಾರೆ ಇತಿಹಾಸ ತಜ್ಞರು.

ಏನಿದು ನಿನ್ನಿಕಲ್ಲು

'ನಿನ್ನಿ' ಎಂದರೆ ತುಳುವಿನಲ್ಲಿ ಮಾತನಾಡಿದ್ದನ್ನೇ ಮಾತನಾಡುವುದು ಎಂದರ್ಥ. ನಿನ್ನಿಕಲ್ಲ ಪಾದೆ ಎಂದರೆ ಪ್ರತಿಧ್ವನಿ ಮೊಳಗಿಸುವ ಹೆಬ್ಬಂಡೆಗಳು. ಇಲ್ಲಿ ಅವಳಿ ಬಂಡೆಗಳಿದ್ದು, ಒಂದರಲ್ಲಿ ಉಬ್ಬು ಶಿಲ್ಪವಿದೆ. ಬಂಡೆಯಿಂದ ನಿರ್ದಿಷ್ಟ ದೂರದಲ್ಲಿ ಮಾಡಿದ ಶಬ್ದ, ಆಡಿದ ಪ್ರತಿ ಮಾತುಗಳು ಪ್ರತಿಧ್ವನಿಯಾಗಿ ಕೇಳುವುದು ವಿಶೇಷ.

‘ಐತಿಹಾಸಿಕ ನೆಲೆಗಳೂ ಉಳಿಯಲಿ’

ನಂದಿಕೂರು ಐತಿಹಾಸಿಕ ನೆಲೆಯಾಗಿದ್ದು, ಅಲ್ಲಿರುವ ನಿನ್ನಿಕಲ್ಲು ಪಾದೆ, ಭೈರವಮೂರ್ತಿ, ಬಲಿ ಪೀಠದ ಶಿಲಾಫಲಕ, ಎಲ್ಲೂರು ಕುಂದ ಹೆಗಡೆಯ ಅರಮನೆಯನ್ನಾದರೂ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಪ್ರವಾಸೋದ್ಯಮದ ಹೆಸರಿನಲ್ಲಿ ಕಡಲ ತೀರಗಳ ಅಭಿವೃದ್ಧಿಗೆ ಮಾತ್ರ ಒತ್ತು ಕೊಡುವ ಬದಲು ಐತಿಹಾಸಿಕ ಪ್ರದೇಶಗಳನ್ನು ಗುರುತಿಸಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೆಲಸ ಮಾಡಬೇಕಿದೆ.

-ಕೆ.ಎಲ್.ಕುಂಡತ್ತಾಯ, ಜಾನಪದ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT