ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಫಾ: ಭಯ ಅನಗತ್ಯ; ಎಚ್ಚರ ಅಗತ್ಯ

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಸಲಹೆ
Last Updated 11 ಜೂನ್ 2019, 14:18 IST
ಅಕ್ಷರ ಗಾತ್ರ

ಉಡುಪಿ: ನಿಫಾ ವೈರಸ್ ಬಗ್ಗೆ ಜನರು ಆತಂಕ ಪಡುವ ಅಗತ್ಯ ಇಲ್ಲ. ಬದಲಾಗಿ ಎಚ್ಚರ ವಹಿಸಬೇಕು. ಜ್ವರ ಅಥವಾ ಆರೋಗ್ಯ ಸಮಸ್ಯೆ ಕಂಡುಬಂದರೆ ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಸಲಹೆ ನೀಡಿದರು.

ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿಯ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಸಾಮಾನ್ಯವಾಗಿ ಜ್ವರ, ತಲೆನೋವು, ತಲೆ ಸುತ್ತುವಿಕೆ, ದಿಗ್ಬ್ರಮೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು ನಿಫಾ ವೈರಸ್‍ನ ಲಕ್ಷಣಗಳಾಗಿದ್ದು, ಈ ಲಕ್ಷಣ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಭೇಟಿನೀಡಿ ವೈದ್ಯರ ಮಾರ್ಗದರ್ಶನ ಪಡೆಯಬೇಕು ಎಂದು ಸಲಹೆ ನೀಡಿದರು.

ಬಾವಲಿ ತಿಂದು ಬಿಟ್ಟ ಹಣ್ಣುಗಳನ್ನು ಸೇವಿಸುವುದರಿಂದ ಅಥವಾ ಆ ಹಣ್ಣನ್ನು ಸೇವಿಸಿದ ಹಂದಿ ಅಥವಾ ಇತರ ಪ್ರಾಣಿಗಳಿಂದ ವೈರಸ್ ಮನುಷ್ಯರಿಗೆ ಹರಡುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಬಾವಲಿ ಅಥವಾ ಯಾವುದೇ ಪ್ರಾಣಿಗಳು ತಿಂದುಬಿಟ್ಟ ಹಣ್ಣುಗಳನ್ನು ಸೇವಿಸಬಾರದು ಎಂದು ಸೂಚನೆ ನೀಡಿದರು.

ಕೇರಳದ ಎರ್ನಾಕುಲಂನಲ್ಲಿ 2 ನಿಫಾ ಸೋಂಕು ಪ್ರಕರಣಗಳು ದಾಖಲಾಗಿದೆ. ಕೇರಳದಿಂದ ಬರುವ ಪ್ರವಾಸಿಗರು, ಚಿಕಿತ್ಸೆಗಾಗಿ ಬರುವವರು, ನರ್ಸಿಂಗ್ ಕಲಿಕೆಗೆ ಬರುವ ವಿದ್ಯಾರ್ಥಿಗಳಿಂದ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈಗಾಗಲೇ ಜಿಲ್ಲೆಯಲ್ಲಿರುವ ಕೇರಳಿಗರನ್ನು ಕೆಲ ತಿಂಗಳ ಕಾಲ ವಾಪಸ್ ಹೋಗದಂತೆ ಹಾಗೂ ಅಲ್ಲಿಂದ ಯಾರೂ ಬಾರದಂತೆ ಎಚ್ಚರವಹಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ನಿಫಾ ವೈರಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೇ ಹೊರತು ಭಯಪಡಿಸಬಾರದು. ಬಾವಲಿಗಳಿಂದ ವೈರಸ್ ಹರಡುತ್ತದೆ ಎಂದು ಬಾವಲಿಗಳನ್ನು ನಾಶ ಮಾಡುವ ಅಗತ್ಯವಿಲ್ಲ. ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಿದರೆ ಸಾಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಜಿ ರಾಮ, ಉಡುಪಿ ತಾಲ್ಲೂಕು ಆರೋಗ್ಯಾಧಿಕಾರಿ ನಾಗರತ್ನ, ಕಾರ್ಕಳ ತಾಲ್ಲೂಕು ಆರೋಗ್ಯಾಧಿಕಾರಿ ಕೃಷ್ಣಾನಂದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT