ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿದುಳು ನಿಷ್ಕ್ರಿಯ-ಅಂಗಾಂಗ ದಾನ: ಸಾವಿನಲ್ಲಿ ಸಾರ್ಥಕತೆ ಮೆರೆದ ಎಂಐಟಿ ವಿದ್ಯಾರ್ಥಿ

ಸಾವಿನಲ್ಲಿ ಸಾರ್ಥಕತೆ ಮೆರೆದ ಎಂಐಟಿ ವಿದ್ಯಾರ್ಥಿ ವೆಮುಲಾ ಸುದರ್ಶನ್ ಚೌಧರಿ
Last Updated 12 ಅಕ್ಟೋಬರ್ 2022, 13:46 IST
ಅಕ್ಷರ ಗಾತ್ರ

ಉಡುಪಿ: ರಸ್ತೆ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದ ಮಣಿಪಾಲದ ಎಂಐಟಿ ವಿದ್ಯಾರ್ಥಿಯ ಅಂಗಾಂಗಗಳನ್ನು ಪೋಷಕರು ದಾನ ಮಾಡುವ ಮೂಲಕ ಸಾರ್ಥಕತೆ ಮರೆದಿದ್ದಾರೆ.

ಅ.9ರಂದು ಮಣಿಪಾಲ ಉಡುಪಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ವಿದ್ಯಾರ್ಥಿ ವೆಮುಲಾ ಸುದರ್ಶನ್ ಚೌಧರಿ(19)ಗೆ ಗಂಭೀರ ಪೆಟ್ಟಾಗಿತ್ತು. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ವೈದ್ಯರು ವೆಮುಲಾ ಸುದರ್ಶನ್ ಚೌಧರಿ ರಕ್ಷಿಸಲು ಪ್ರಯತ್ನಿಸಿದರೂ ಚಿಕಿತ್ಸೆಗೆ ಸ್ಪಂದಿಸುವ ಲಕ್ಷಣಗಳು ಗೋಚರಿಸಲಿಲ್ಲ. ಅಂತಿಮವಾಗಿ ಮಿದುಳು ನಿಷ್ಕ್ರಿಯವಾದ ಕಾರಣ ವೆಮುಲಾ ಸುದರ್ಶನ್ ಚೌಧರಿ ಅವರ ತಂದೆ ವೆಮುಲ ಅಲೇಖಾ ಪ್ರಸಾದ್ ಪುತ್ರನ ಅಂಗಾಂಗಗಳನ್ನು ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿಸಿದರು.

ಬಳಿಕ ಮಾನವ ಅಂಗಾಂಗ ಕಸಿ ಕಾಯ್ದೆ 1994 ಅನುಸಾರ ವೆಮುಲಾ ಸುದರ್ಶನ್ ಚೌಧರಿಯ ಆರೋಗ್ಯ ಸ್ಥಿತಿಯನ್ನು 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಲಾಯಿತು. ಬಳಿಕ ಪರಿಣಿತ ವೈದ್ಯರ ತಂಡ ರೋಗಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿತು ಎಂದು ವೈದ್ಯರು ತಿಳಿಸಿದ್ದಾರೆ.

ಜೀವನ ಸಾರ್ಥಕತೆ ಪ್ರೋಟೋಕಾಲ್ ಮತ್ತು ನಿರ್ಧಾರಗಳ ಪ್ರಕಾರ, ನೋಂದಾಯಿತ ರೋಗಿಗಳಿಗೆ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಗೆಯಕೃತ್ತು, ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಶ್ವಾಸಕೋಶ, ಮಂಗಳೂರಿನ ಎ.ಜೆ ಆಸ್ಪತ್ರೆಗೆ ಒಂದು ಮೂತ್ರಪಿಂಡ, ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ರೋಗಿಗಳಿಗೆ ಎರಡು ಕಾರ್ನಿಯಾ, ಕಣ್ಣುಗುಡ್ಡೆ, ಒಂದು ಮೂತ್ರಪಿಂಡ ಮತ್ತು ಚರ್ಮವನ್ನು ಬಳಸಲಾಯಿತು.

‘ಅಂಗದಾನ ಪುಣ್ಯದ ಕೆಲಸವಾಗಿದ್ದು, ಪುತ್ರ ಸುದರ್ಶನ್ ಅಂಗದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ ಎಂದು ಪೋಷಕರಾದ ವೆಮುಲ ಅಲೇಖಾ ಪ್ರಸಾದ್ ತಿಳಿಸಿದ್ದಾರೆ.

ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರು ಹಾಗೂ ಬೆಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಕೊಂಡೊಯ್ಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT