ಬಿಜೆಪಿ, ಕಾಂಗ್ರೆಸ್ ಪಕ್ಷದೊಂದಿಗೆ ಜೆಡಿಎಸ್ ಬಲಾಬಲ ಪರೀಕ್ಷೆಗೆ ಸಿದ್ಧತೆ

7
ಸಾಲಿಗ್ರಾಮ ಪಟ್ಟಣ ಪಂಚಾಯಿತಿ

ಬಿಜೆಪಿ, ಕಾಂಗ್ರೆಸ್ ಪಕ್ಷದೊಂದಿಗೆ ಜೆಡಿಎಸ್ ಬಲಾಬಲ ಪರೀಕ್ಷೆಗೆ ಸಿದ್ಧತೆ

Published:
Updated:
Deccan Herald

ಸಾಲಿಗ್ರಾಮ(ಬ್ರಹ್ಮಾವರ) :  ಸ್ಥಳೀಯಾಡಳಿತಗಳಿಗೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸಾಲಿಗ್ರಾಮ ಪಟ್ಟಣ ಪಂಚಾಯಿತಿಗೆ ಅಭ್ಯರ್ಥಿ ಆಯ್ಕೆಯ ಬಗ್ಗೆ ಅಲ್ಲಲ್ಲಿ ಸಭೆ ನಡೆಸುತ್ತಿದ್ದರೆ, ಜೆಡಿಎಸ್ ಪಕ್ಷದ ಮುಖಂಡರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪೂರ್ವ ತಯಾರಿ ಮಾಡುತ್ತಿದೆ. ಪ್ರಸ್ತುತ14 ಸ್ಥಾನಗಳಲ್ಲಿ ಬಿಜೆಪಿ 8 ಮತ್ತು ಕಾಂಗ್ರೆಸ್ 6 ಸ್ಥಾನವನ್ನು ಹೊಂದಿದ್ದ ಪಟ್ಟಣ ಪಂಚಾಯಿತಿ  ಈ ಬಾರಿ ಕಾರ್ಕಡದ ಮೂಡೋಳಿ ಮತ್ತು ಯಕ್ಷಿಮಠ ವಾರ್ಡ್ ಹೊಸ ವಾರ್ಡ್ ಆಗಿ ವಿಭಜನೆಗೊಂಡಿದ್ದು, ವಾರ್ಡ್ ಸಂಖ್ಯೆ 14ರಿಂದ 16ಕ್ಕೆ ಏರಿದೆ.

ಗರಿಗೆದರಿದ ಅಭ್ಯರ್ಥಿಗಳ ಆಯ್ಕೆ ಕಸರತ್ತು

ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯದಲ್ಲಿ ಚುನಾವಣೆಯ ಹಿನ್ನಲೆಯಲ್ಲಿ ಸಿದ್ದತೆಗಳು ಗರಿಗೆದರಿದ್ದು, ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆಯುತ್ತಿದೆ. ಆಕಾಂಕ್ಷಿಗಳ ದಂಡು ಹೆಚ್ಚಿದ್ದು, ಜೆಡಿಎಸ್ ಪಕ್ಷಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ ಎಂದು ಹೇಳಲಾಗುತ್ತಿದೆ.

ಹಿಂದೆ ಪುರಸಭೆ ಈಗ ಪಟ್ಟಣ ಪಂಚಾಯಿತಿ

ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಾಗಿ ರಚನೆಗೊಳ್ಳುವ 20 ವರ್ಷದ ಹಿಂದೆ ಸಾಲಿಗ್ರಾಮ ಪುರಸಭೆಯಾಗಿತ್ತು ಎನ್ನಲಾಗಿದೆ. ನಿರಂತರ 10 ವರ್ಷಗಳ ಕಾಲ ತಾರಾನಾಥ ಹೊಳ್ಳ ಸಾಲಿಗ್ರಾಮ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಾರ್ವಜನಿಕರೋರ್ವರು ಸಾಲಿಗ್ರಾಮ ಪುರಸಭೆಯಾಗಲು ಯಾವ ಅರ್ಹತೆಯೂ ಇಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ 10 ವರ್ಷಗಳ ಕಾಲ ಸರ್ಕಾರ ಸಾಲಿಗ್ರಾಮ ಪುರಸಭೆಗೆ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ನಂತರ2001ರಲ್ಲಿ ಸಾಲಿಗ್ರಾಮ ಪುರಸಭೆಯು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಂಡಿತು. ಆಗ ನಡೆದ ಚುನಾವಣೆಯಲ್ಲಿ ಜಯಪ್ರಕಾಶ ಹೆಗ್ಡೆಯ ನೇತೃತ್ವದ ಪೌರ ಸಮಿತಿಯಿಂದ 8 ಮಂದಿ, ಬಿಜೆಪಿಯಿಂದ 5 ಮಂದಿ ಕಾಂಗ್ರೆಸ್‌ನಿಂದ ಓರ್ವ ಸದಸ್ಯರು ಆಯ್ಕೆಯಾಗುವುದರ ಮೂಲಕ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಪೌರ ಸಮಿತಿ ಆಡಳಿತ ನಡೆಸಿತ್ತು. 2007ರಲ್ಲಿ ನಡೆದ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯಿಂದ 7 ಮಂದಿ, ಕಾಂಗ್ರೆಸ್‌ನಿಂದ 2 ಮಂದಿ, ಜಯಪ್ರಕಾಶ ಹೆಗ್ಡೆ ಬೆಂಬಲಿತ ಪಕ್ಷೇತರರು 5 ಮಂದಿ ಆಯ್ಕೆಯಾಗಿದ್ದರು.

ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಗಳು 2 ಸಾಮಾನ್ಯ ವರ್ಗಕ್ಕೆ ಬಂದಾಗ ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಿಂದ ಕಾರ್ಕಡ ರಾಜು ಪೂಜಾರಿ, ಕಾಂಗ್ರೆಸ್, ಪಕ್ಷೇತರರ ಜತೆಗೂಡಿ ಶ್ರೀನಿವಾಸ ಅಮೀನ್ ಸ್ಪರ್ಧೆಗೆ ಇಳಿದ್ದಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶಾಂತಿ ಅಡಿಗ, ಕಾಂಗ್ರೆಸ್‌ನಿಂದ ಮಹಾಬಲ ಮಡಿವಾಳ ಸ್ಪರ್ಧೆಗಿಳಿದ್ದರು. ಅಂದು 2 ಪಕ್ಷಗಳ ನಡುವೆ ಸಮಬಲಗೊಂಡಿತ್ತು. ಆಗ ಅಂದಿನ ಉಡುಪಿಯ ಬಿಜೆಪಿ ಸಂಸದೆ ಮನೋರಮಾ ಮಧ್ವರಾಜ್ ಬಿಜೆಪಿಗೆ ಮತಚಲಾಯಿಸುವುದರ ಮೂಲಕ ಬಿಜೆಪಿಯ ಕಾರ್ಕಡ ರಾಜು ಪೂಜಾರಿ ಅಧ್ಯಕ್ಷರಾಗಿ, ಶಾಂತಿ ಅಡಿಗ ಉಪಾಧ್ಯಕ್ಷರಾಗಿ ಆಯ್ಕೆಗೊಂಡು ಪ್ರಥಮ ಬಾರಿಗೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಆಡಳಿತವನ್ನು ಬಿಜೆಪಿ ಕೈಗೆತ್ತಿಕೊಂಡಿತು. ಈ ಸಮಯದಲ್ಲಿ ರಾಜ್ಯದಲ್ಲಿ ವಿಧಾನ ಸಭೆ ವಿಸರ್ಜನೆಗೊಂಡ ಕಾರಣ ಅಂದಿನ ಶಾಸಕರಾಗಿದ್ದ ಜಯಪ್ರಕಾಶ ಹೆಗ್ಡೆಗೆ ಮತದಾನದ ಅಧಿಕಾರವಿರಲಿಲ್ಲ. ತದನಂತರ ಜಯಪ್ರಕಾಶ ಹೆಗ್ಡೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಾಗ 5 ಮಂದಿ ಪಕ್ಷೇತರ ಸದಸ್ಯರು ಕಾಂಗ್ರೆಸ್ ಪಕ್ಷದ ಜತೆ ವಿಲೀನಗೊಂಡರು. 2 ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಬಂದಾಗ ಬಿಜೆಪಿಯಿಂದ ರಾಜು ಪೂಜಾರಿ, ಕಾಂಗ್ರೆಸ್ ನಿಂದ ಶಂಭು ಪೂಜಾರಿ ಸ್ಪರ್ಧೆಗಿಳಿದ ಕಾರಣ ಬಿಜೆಪಿಯ ಸಂಸದ ಸದಾನಂದ ಗೌಡ, ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಂದು ಮತ ಚಲಾಯಿಸಿದ ಕಾರಣ ಮತ್ತೆ 2 ನೇ ಬಾರಿಗೆ ರಾಜು ಪೂಜಾರಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಬಂದಾಗ ಬಿಜೆಪಿಯಲ್ಲಿ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್‌ನ ಪ್ರಪುಲ್ಲಾ ಕೃಷ್ಣ ಅವರಿಗೆ ಉಪಾಧ್ಯಕ್ಷೆಯಾಗುವ ಯೋಗ ಕೂಡಿ ಬಂತು.

2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪರಿಶಿಷ್ಟ ಜಾತಿ ಮಹಿಳೆ ಸಾಧು ಪಿ. ಅವರು ಅಧ್ಯಕ್ಷರಾಗಿ, ಅದೇ ಪಕ್ಷದ ಸುಲತಾ ಹೆಗ್ಡೆ ಉಪಾಧ್ಯಕ್ಷರಾಗಿ ಮೊದಲ ಎರಡೂವರೆ ವರ್ಷ ಅಧಿಕಾರ ನಡೆಸಿದರು. ತದನಂತರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಸುವತಿ ನಾಯರಿ ಅಧ್ಯಕ್ಷರಾಗಿ, ಬಿಜೆಪಿಯ ಉದಯ ಪೂಜಾರಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಈ ಮಧ್ಯೆ ವಸುಮತಿ ನಾಯರಿ ಅವರ ವಿರುದ್ದ ಅವಿಶ್ವಾಸ ಮತ ಮಂಡನೆ ಮಾಡಿ ಅಧಿಕಾರದಿಂದ ಇಳಿಸಿ, ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ರತ್ನನಾಗರಾಜ ಗಾಣಿಗ ಅವರಿಗೆ ಅಧ್ಯಕ್ಷರಾದರು. ಉದಯ ಪೂಜಾರಿ ಉಪಾಧ್ಯಕ್ಷರಾಗಿ ಮುಂದುವರಿದರು.

ಈ ಬಾರಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಮೂರು ಪಕ್ಷಗಳಿಗೆ ಇದು ಪ್ರತಿಷ್ಟೆಯ ಕಣವಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !