ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರ ಶ್ರೀಗಳಿಲ್ಲದ ಮಠದಲ್ಲಿ ಅನಾಥಭಾವ

ಶ್ರೀಗಳ ಕೋಣೆ ಖಾಲಿ; ಕಂಬನಿ ಮಿಡಿಯುತ್ತಿರುವ ಭಕ್ತರು
Last Updated 31 ಡಿಸೆಂಬರ್ 2019, 4:03 IST
ಅಕ್ಷರ ಗಾತ್ರ

ಉಡುಪಿ: ವಿಶ್ವೇಶತೀರ್ಥ ಶ್ರೀಗಳಿಲ್ಲದ ಉಡುಪಿಯ ಪೇಜಾವರ ಮಠದಲ್ಲಿ ಅನಾಥ ಭಾವ ಕಾಡುತ್ತಿದೆ. ಶ್ರೀಗಳ ಆಶೀರ್ವಾದ ಪಡೆದು ಫಲ ಮಂತ್ರಾಕ್ಷತೆ ಸ್ವೀಕರಿಸಲು ಬರುತ್ತಿದ್ದ ಭಕ್ತರು, ಸ್ವಾಮೀಜಿಯ ಭಾವಚಿತ್ರದ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ಮಠದಲ್ಲಿ ಆಶ್ರಯ ಪಡೆದಿರುವ ಮಕ್ಕಳು ಮಂಕಾಗಿದ್ದಾರೆ.

ಸೋಮವಾರ ಮಠಕ್ಕೆ ಭೇಟಿನೀಡಿದಾಗ ಅಲ್ಲಿನ ಸಿಬ್ಬಂದಿ, ಮಕ್ಕಳು, ಶಿಷ್ಯರು ಶ್ರೀಗಳನ್ನು ನೆನೆದು ಕಣ್ಣೀರಾದರು. ಅಲ್ಲಿದ್ದ ಬಾಲಕನೊಬ್ಬನನ್ನು ಮಾತನಾಡಿಸಿದಾಗ ‘ನಾನು ಡಾಕ್ಟರ್ ಆಗಿದ್ದಿದ್ರೆ ಸ್ವಾಮಿಗಳನ್ನು ಉಳಿಸುತ್ತಿದ್ದೆ’ ಎಂದಾಗ ಅಲ್ಲಿದ್ದವರ ಕಣ್ಣಂಚು ತೇವವಾಯಿತು.

ಗುರುಗಳು ಮಠಕ್ಕೆ ಬಂದಾಗಲೆಲ್ಲ ಕರೆದು ಕಲ್ಲು ಸಕ್ಕರೆ ಕೊಡ್ತಿದ್ರು. ಊಟ ಆಯಿತೇ ಎಂದು ವಿಚಾರಿಸಿ ಉತ್ತುತ್ತೆ, ಗೇರುಬೀಜ, ದ್ರಾಕ್ಷಿ ಕೊಡ್ತಿದ್ರು ಅಂತಾ ಮತ್ತೊಬ್ಬ ಬಾಲಕ ಹೇಳಿದಾಗ, ಉಳಿದ ಮಕ್ಕಳೆಲ್ಲ ಹೌದು ಎಂದು ತಲೆಯಾಡಿಸಿದರು.

ಹೆಚ್ಚು ಮಾರ್ಕ್ಸ್‌ ಪಡೆದವರಿಗೆ ಹೆಚ್ಚು ತಿಂಡಿ ಸಿಗ್ತಿತ್ತು. ಒಂದು ದಿನವೂ ಗುರುಗಳು ಗದರಲಿಲ್ಲ. ಅವರು ತುಂಬಾ ಒಳ್ಳೆಯವರು, ಅವರಿಲ್ಲದ ಮಠ ಖಾಲಿ ಹೊಡೆಯುತ್ತಿದೆ ಎಂದು ಮಕ್ಕಳು ಬೇಸರ ವ್ಯಕ್ತಪಡಿಸಿದರು.

ದೋಸೆಯಲ್ಲಿ ತಾಯಿ ಪ್ರೀತಿ:

‘ಪೇಜಾವರ ಶ್ರೀಗಳಿಗೆ ದೊಡ್ನ (ದೋಸೆ) ಅಂದ್ರೆ ಬಹಳ ಪ್ರೀತಿ. ನಾನು ದೊಡ್ನ ಮಾಡಿದಾಗಲೆಲ್ಲ ಕರೆದು ಬಹಳ ಚೆನ್ನಾಗಿ ಮಾಡಿದ್ದೀ, ಚಿಕ್ಕವನಿದ್ದಾಗ ನನಗೆ ದೊಡ್ನ ಇಷ್ಟ ಅಂತ ತಾಯಿ ಹೆಚ್ಚಾಗಿ ಮಾಡ್ತಿದ್ರು. ನೀನು ಮತ್ತೆ ಅಮ್ಮನ ನೆನಪು ಮಾಡಿದೆ ಅಂಥಾ ಭಾವುಕರಾಗುತ್ತಿದ್ದರು’ ಎಂದು 20 ವರ್ಷಗಳಿಂದ ಮಠದ ಕೊಟ್ಟಾರಿ (ಅಡುಗೆ ಕೋಣೆ ಉಸ್ತುವಾರಿ) ಸಂತೋಷ್‌ ನುಡಿದರು.

ಸ್ವಾಮೀಜಿ ಇಂಥ ಪದಾರ್ಥವೇ ಮಾಡು ಅಂತಾ ಹೇಳಲಿಲ್ಲ. ವಿಶೇಷ ಸಂದರ್ಭ, ಹಬ್ಬ ಹರಿದಿನಗಲ್ಲಿ ಭಕ್ತರಿಗೆ ಭೋಜನದ ವ್ಯವಸ್ಥೆ ವಿಶೇಷವಾಗಿರಲಿ ಎನ್ನುತ್ತಿದ್ದರು. ಇದುವರೆಗೂ ಮಠಕ್ಕೆ ಬಂದವರು ಖಾಲಿ ಹೊಟ್ಟೆಯಲ್ಲಿ ಹೋಗಿಲ್ಲ. ಮಧ್ಯರಾತ್ರಿ ಬಂದವರಿಗೂ ಊಟ ಸಿದ್ಧಪಡಿಸಿ ಬಡಿಸಿದ ಉದಾಹರಣೆಗಳಿವೆ ಎಂದರು.

ಮಕ್ಕಳ ಮೇಲೆ ಗುರುಗಳಿಗೆ ವಿಶೇಷ ಪ್ರೀತಿ, ಕಾಳಜಿ. ಬಿಡುವಿದ್ದಾಗ ಸ್ವತಃ ಊಟ ಬಡಿಸಿ ಖುಷಿ ಪಡುತ್ತಿದ್ದರು. ಸ್ವಲ್ಪ ಹೆಚ್ಚಾಗಿ ತುಪ್ಪ ಹಾಕು, ಬೆಳೆಯುವ ಮಕ್ಕಳು ಚೆನ್ನಾಗಿರಲಿ ಎಂದು ಕಾಳಜಿ ತೋರುತ್ತಿದ್ದರು. ಅಪರೂಪಕ್ಕೆ ಅಡುಗೆಮನೆಗೆ ಬಂದು ಆಹಾರದ ಸ್ವಾದ ಹಾಗೂ ಗುಣಮಟ್ಟವನ್ನು ಆಗ್ರಾಣಿಸಿಯೇ ಅಳೆಯುತ್ತಿದ್ದರು ಎಂದು ಸಂತೋಷ್‌ ಹೇಳುವಾಗ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು.

ಹೊರ ಜಿಲ್ಲೆಗಳಿಂದ ಬಂದಿರುವ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಮಠದ ಮೊದಲ ಅಂತಸ್ತಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸೊಳ್ಳೆ ಕಾಟ ಇರುವುದನ್ನು ಗಮನಿಸಿ ಕಿಟಕಿಗಳಿಗೆ ಮೆಶ್‌ ಅಳವಡಿಸಲು ಸೂಚಿಸಿದ್ದರು. ಮಕ್ಕಳದ್ದು ಊಟ ಆಯಿತೇ ಎಂದು ಆಗಾಗ ಪ್ರಶ್ನಿಸುತ್ತಿದ್ದರು ಎಂದು ಸಿಬ್ಬಂದಿ ಕೃಷ್ಣ ಸಾಮಗ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT