ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾನಮಂತ್ರಿ ಜನೌಷಧಿ ಕೇಂದ್ರದಲ್ಲಿ ಕಡಿಮೆ ದರ, ಅತ್ಯುತ್ತಮ ಗುಣಮಟ್ಟಕ್ಕೆ ಆದ್ಯತೆ

ದೇಶದಲ್ಲಿ 5600 ಕೇಂದ್ರಗಳು ಸ್ಥಾಪನೆ; ನೋಡೆಲ್ ಅಧಿಕಾರಿ ಡಾ.ಅನಿಲಾ
Last Updated 17 ಸೆಪ್ಟೆಂಬರ್ 2019, 14:31 IST
ಅಕ್ಷರ ಗಾತ್ರ

ಉಡುಪಿ: ದೇಶದಲ್ಲಿ 5,600 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿದ್ದು, ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧ ಪೂರೈಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ರಾಜ್ಯದ ನೋಡೆಲ್‌ ಅಧಿಕಾರಿ ಡಾ.ಅನಿಲಾ ಹೇಳಿದರು.

ನಗರದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕರ್ನಾಟಕದ ಪ್ರತಿಯೊಂದು ತಾಲ್ಲೂಕಿನಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ. ಜನೌಷಧ ಮಾರಾಟದಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಪ್ರತಿತಿಂಗಳು ₹ 4 ರಿಂದ ₹5 ಕೋಟಿ ವಹಿವಾಟು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜನೌಷಧ ಕೇಂದ್ರಗಳಲ್ಲಿ ಸಿಗುವಂತಹದ್ದು ಜನರಿಕ್ ಔಷಧ. ಇದರ ಮೇಲೆ ಬ್ರಾಂಡೆಂಡ್‌ ಕಂಪೆನಿಗಳ ಲೇಬಲ್ ಇರುವುದಿಲ್ಲ. ಆದರೆ, ಅತ್ಯುತ್ತಮ ಗುಣಮಟ್ಟವನ್ನು ಹೊಂದಿರುತ್ತದೆ. ಮಾರುಕಟ್ಟೆಯಲ್ಲಿ ₹ 100ಕ್ಕೆ ಸಿಗುವ ಔಷಧವು ಜನೌಷಧ ಕೇಂದ್ರಗಳಲ್ಲಿ ಕೇವಲ ₹ 10ಕ್ಕೆ ಸಿಗುತ್ತದೆ. ದೇಶದ 100 ಪ್ರಮುಖ ಔಷಧ ತಯಾರಿಕಾ ಕಂಪೆನಿಗಳೇ ಜನೌಷಧ ಕೇಂದ್ರಗಳಿಗೆ ಔಷಧಗಳನ್ನು ಪೂರೈಕೆ ಮಾಡುತ್ತವೆ. ಸರ್ಕಾರದ ಬಿಪಿಪಿಐ ಸಂಸ್ಥೆಯು ಗುಣಮಟ್ಟವನ್ನು ಪರಿಕ್ಷಿಸಿಯೇ ಔಷಧ ಖರೀದಿ ಮಾಡುತ್ತದೆ ಎಂದರು.

ಜತೆಗೆ, ಜನೌಷಧ ಕೇಂದ್ರಗಳಲ್ಲಿರುವ ಔಷಧವನ್ನು ಪ್ರತಿ 10 ದಿನಗಳಿಗೊಮ್ಮೆ ಡ್ರಗ್ ಕಂಟ್ರೋಲರ್‌ ವಿಭಾಗ ಪರೀಕ್ಷೆಗೊಳಪಡಿಸುತ್ತದೆ. ಜನೌಷಧ ಕೇಂದ್ರಗಳಿಗೆ ಔಷಧಗಳ ಪೂರೈಕೆಯಲ್ಲಿ ಕೆಲವು ಸಮಸ್ಯೆಗಳಿವೆ, ಆದರೆ, ಗುಣಮಟ್ಟದಲ್ಲಿ ಸಮಸ್ಯೆ ಇಲ್ಲ. ಔಷಧ ಗುಣಮಟ್ಟದಲ್ಲಿ ನಿಗಧಿತ ಮಾನದಂಡ ಅನುಸರಿಸದ ಕಾರಣಕ್ಕೆ 29 ಔಷಧ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ವಿವರ ನೀಡಿದರು.

ಬಡವರ ಅನುಕೂಲಕ್ಕೆ ಸ್ಥಾಪಿಸಲಾಗಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳ ಉಪಯೋಗ ಶ್ರೀಮಂತರಿಗೆ ದಕ್ಕುತ್ತಿದೆ. ಔಷಧಗಳ ಗುಣಮಟ್ಟದ ಅರಿವು ಇಲ್ಲದ ಬಡವರು ಬ್ರಾಂಡೆಡ್‌ ಕಂಪೆನಿಯ ದುಬಾರಿ ಔಷಧವನ್ನು ಖರೀದಿ ಮಾಡುತ್ತಿದ್ದಾರೆ. ಗುಣಮಟ್ಟದ ಅರಿವಿರುವ ಶ್ರೀಮಂತರು ಜನೌಷಧ ಮಳಿಗೆಯಲ್ಲಿ ಖರೀದಿಸುತ್ತಿದ್ದಾರೆ ಎಂದು ಅನಿಲಾ ಬೇಸರ ವ್ಯಕ್ತಪಡಿಸಿದರು.

ಜನೌಷಧ ಕೇಂದ್ರಗಳನ್ನು ಗ್ರಾಮೀಣ ಭಾಗಕ್ಕೆ ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ. ಬ್ರಾಂಡೆಡ್‌ ಔಷಧಗಳಿಗೂ ಜನರಿಕ್‌ ಔಷಧಗಳ ಮಧ್ಯೆ ಗುಣಮಟ್ಟದಲ್ಲಿ ವ್ಯತ್ಯಾಸ ಇರುವುದಿಲ್ಲ. ಜನೌಷಧ ಕೇಂದ್ರಗಳ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜನೌಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವಂತಿಲ್ಲ. ರಾಜ್ಯದಲ್ಲಿ ಜನೌಷಧ ಪೂರೈಕೆ ಮಾಡಲು 2 ಸಂಸ್ಥೆಗಳಿಗೆ ಮಾತ್ರ ಬಿಪಿಪಿಐ ಪರವಾನಗಿ ನೀಡಿದೆ. ಖರೀದಿ ಹಾಗೂ ಮಾರಾಟ ಪ್ರಕ್ರಿಯೆ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನಡೆಯುವುದರಿಂದ ದುರುಪಯೋಗ ಸಾಧ್ಯವಿಲ್ಲ ಎಂದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಸಾಮಾನ್ಯವಾಗಿ ಜನೌಷಧ ಕೇಂದ್ರಗಳಲ್ಲಿ ಸಿಗುವ ಔಷಧಗಳು ಸರಿಯಿಲ್ಲ ಎಂದು ಆರೋಪಿಸುವ ತಂಡ ಜಾಗೃತವಾಗಿರುತ್ತದೆ. 2016ರಿಂದ ಇಲ್ಲಿಯವರೆಗೂ 2 ಪ್ರಕರಣಗಳಲ್ಲಿ ಮಾತ್ರ ಜನೌಷಧ ಕೇಂದ್ರಗಳ ಔಷಧ ನಿಗಧಿತ ಮಾನದಂಡಕ್ಕಿಂತ ಕಡಿಮೆ ಗುಣಮಟ್ಟ ಹೊಂದಿವೆ ಎಂಬುದನ್ನು ಸಾಬೀತು ಮಾಡಲು ಸಾಧ್ಯವಾಗಿವೆ ಎಂದರು.

ಕರ್ನಾಟಕ ಸರ್ಕಾರದ ಜನಸಂಜೀವಿನಿ ಕೇಂದ್ರಗಳಿಗೂ ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಡಾ.ಅನಿಲಾ ಸ್ಪಷ್ಟಪಡಿಸಿದರು.

ಬಿಪಿಪಿಐ ಮಾರಾಟ ವಿಭಾಗದ ಜನರಲ್ ಮ್ಯಾನೇಜರ್‌ ಧೀರಜ್ ಶರ್ಮಾ, ಡಿಸ್ಟ್ರಿಬ್ಯೂಟರ್‌ ಅಭಿಷೇಕ್‌ ಜೈನ್‌,ಸಾಗರ್ ತೇಜ್‌ಪಾಲ್‌ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT