ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ರಸ್ತೆ ತಡೆ; ಪ್ರತಿಭಟನೆ

ಅಂತರಗಂಗೆ, ನೆರೆ ಸಮಸ್ಯೆ ಪರಿಹಾರಕ್ಕೆ ಆಗ್ರಹ; ಜಿಲ್ಲಾಧಿಕಾರಿಗೆ ರೈತರ ಮನವಿ
Last Updated 7 ಜುಲೈ 2022, 4:12 IST
ಅಕ್ಷರ ಗಾತ್ರ

ಸಾಲಿಗ್ರಾಮ(ಬ್ರಹ್ಮಾವರ): ಕೋಟ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಕೃಷಿ ಭೂಮಿಯಲ್ಲಿ ಅಂತರಗಂಗೆ ಸಮಸ್ಯೆ ಮತ್ತು ಕೆರೆ ಹಾಗೂ ಹೊಳೆಯ ಹೂಳೆತ್ತುವ ಕಾರ್ಯ ಆಗದಿರುವುದರಿಂದ ನೆರೆ ಸಮಸ್ಯೆ, ಕೃಷಿ ಭೂಮಿ ಹಾನಿ ಆಗುತ್ತಿದ್ದು, ಕೂಡಲೇ ಪರಿಹಾರ ಒದಗಿಸುವಂತೆ ನೂರಾರು ಕೃಷಿಕರು ಮತ್ತು ಸ್ಥಳೀಯರು ಬುಧವಾರ ಬನ್ನಾಡಿ ಬಳಿ ಪ್ರತಿಭಟನೆ ಮತ್ತು ಕೋಟ–ಗೋಳಿಯಂಗಡಿ ರಾಜ್ಯ ಹೆದ್ದಾರಿಯನ್ನು ಕೆಲ ಕಾಲ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಗಿಳಿಯಾರು, ಕಾರ್ಕಡ, ಚಿತ್ರಪಾಡಿ, ಬನ್ನಾಡಿ ಪರಿಸರದ ನೂರಾರು ಕೃಷಿಕರು, ಸ್ಥಳೀಯರು ಮಳೆಯಲ್ಲಿಯೇ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರತಿವರ್ಷ ಮಳೆಗಾಲದ ಸಂದರ್ಭ ಕೋಟ ಮೂರ್ಕೈ ಮೂಲಕ ಸಾಯಿಬ್ರಕಟ್ಟೆಗೆ ಹಾದು ಹೋಗುವ ರಾಜ್ಯ ಹೆದ್ದಾರಿ ಬದಿಯ ಕೃಷಿಭೂಮಿಯಲ್ಲಿ ತೊಂದರೆ ಉಂಟಾಗುತ್ತಿದೆ. ಅಸಮರ್ಪಕ ಸೇತುವೆ ಮತ್ತು ಹೊಳೆ, ತೋಡುಗಳ ಹೂಳೆತ್ತದ ಕಾರಣ ರಸ್ತೆ ಹಾಗೂ ಕೃಷಿ ಭೂಮಿಯಲ್ಲಿ ಮಳೆಯ ನೀರು ಹರಿದು ನೆರೆ ಹಾವಳಿ ಉಂಟಾಗುತ್ತಿದೆ. ನೆರೆ ನೀರು ರಸ್ತೆಯ ಮೇಲೆಲ್ಲಾ ಹರಿದು ಸವಾರರಿಗೂ ತೊಂದರೆ ಉಂಟಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರವೆಂಬಂತೆ ಈ ಭಾಗದಲ್ಲಿ ಕಿರು ಸೇತುವೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳು ಹಾಗೂ ಜನಪ್ರತಿನಿಧಿ
ಗಳಿಗೆ ಅನೇಕ ಬಾರಿ ದೂರು ನೀಡಿದ್ದೇವೆ. ಆದರೂ ಇದುವರೆಗೆ ಬೇಡಿಕೆ ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಕುಂದಾಪುರ ವಿಭಾಗಾಧಿಕಾರಿ ರಾಜು ಕೆ. ಭೇಟಿ ನೀಡಿ ಮನವಿ ಸ್ವೀಕರಿಸಿ ಶೀಘ್ರದಲ್ಲಿಯೇ ಜನರ ಸಮಸ್ಯೆಯನ್ನು ಪರಿಹಾರ ಮಾಡುವ ಭರವಸೆ ನೀಡಿದರು. ಇದೇ ಸಂದರ್ಭ ಬೇಳೂರು, ಗಿಳಿಯಾರು, ಕಾರ್ಕಡ, ಚಿತ್ರಪಾಡಿ ಗ್ರಾಮಸ್ಥರ
ಪರವಾಗಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ಶ್ಯಾಮ ಸುಂದರ ನಾಯರಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ ಅವರಿಗೆ ಮನವಿ ಸಲ್ಲಿಸಿದರು.

ಪ್ರಗತಿಪರ ಕೃಷಿಕ ಹಾಗೂ ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ವಕೀಲ ಶ್ಯಾಮಸುಂದರ ನಾಯರಿ, ನಾಗರಾಜ ಗಾಣಿಗ, ರಾಧಾಕೃಷ್ಣ ಬ್ರಹ್ಮಾವರ, ಸತೀಶ್‌ ಪೂಜಾರಿ, ಗಿರೀಶ್‌ ಪೈ, ಪ್ರತಾಪ್‌ ಶೆಟ್ಟಿ ಸಾಸ್ತಾನ, ರತ್ನಾ ನಾಗರಾಜ ಗಾಣಿಗ, ಮಂಜುನಾಥ ಗಿಳಿಯಾರು, ರಾಜೇಂದ್ರ ಸುವರ್ಣ, ಕೋಟ, ಸಾಲಿಗ್ರಾಮ ಭಾಗದ ಕೃಷಿಕರು ಇದ್ದರು.

ಮನವಿ ಸಲ್ಲಿಕೆ

ಮಲ್ಯಾಡಿಯಿಂದ ಕಾವಡಿವರೆಗೆ ಹರಿಯುತ್ತಿರುವ ನದಿಯ ಹೂಳೆತ್ತುವುದು, ಮಣೂರು, ಗಿಳಿಯಾರು, ಚಿತ್ರಪಾಡಿ, ಬೇಳೂರು ಗ್ರಾಮದಲ್ಲಿ ಹರಿಯುವ ತೋಡು ಹೂಳೆತ್ತುವುದು, ಕೊಯ್ಕೂರು, ಗಿಳಿಯಾರು, ಬನ್ನಾಡಿ ರಸ್ತೆಯಲ್ಲಿ ನೀರು ಹರಿಯುವ ತೋಡಿಗೆ ಕಿರು ಸೇತುವೆ ನಿರ್ಮಿಸಬೇಕು. ಕೃಷಿ ಭೂಮಿ ನಾಶ ಮಾಡುತ್ತಿರುವ ಅಂತರಂಗೆಯ ನಿರ್ಮೂಲನಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೃಷಿಕರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಅಳಲು ತೋಡಿಕೊಂಡ ಕೃಷಿಕರು

ಕೋಟ ಮೂರುಕೈ ಸುತ್ತಮುತ್ತಲಿನ ಗ್ರಾಮಗಳ ಕೃಷಿಕರು ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ವರ್ಷವೂ ಕೃಷಿ ಕಾರ್ಯ ಮಾಡುತ್ತಿದ್ದಾರೆ. ಆದರೆ ವರ್ಷಂಪ್ರತಿ ಉಂಟಾಗುತ್ತಿರುವ ನೆರೆಯ ಹಾವಳಿಯಿಂದಾಗಿ ಈ ಭಾಗದಲ್ಲಿನ ಕೃಷಿ ಜಮೀನಿನಲ್ಲಿ ಅಂತರಂಗೆ ಬೆಳೆದು ಕೃಷಿ ನಾಶ ಮಾಡುತ್ತಿದೆ. ವರ್ಷಂಪ್ರತಿ ಲಕ್ಷಾಂತರ ರೂಪಾಯಿ ವ್ಯಯಿಸಿ ಬೆಳೆದ ಬೆಳೆ ನಾಶವಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಎಷ್ಟೇ ಮನವಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಕೃಷಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT