ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಕಳ | ಅಪಾಯಕಾರಿ ಹೆದ್ದಾರಿ ಕಾಮಗಾರಿ: ಪ್ರತಿಭಟನೆಗೆ ಸಜ್ಜು

Published 8 ಫೆಬ್ರುವರಿ 2024, 16:10 IST
Last Updated 8 ಫೆಬ್ರುವರಿ 2024, 16:10 IST
ಅಕ್ಷರ ಗಾತ್ರ

ಕಾರ್ಕಳ: ಸಾಣೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣ ಕಾಮಗಾರಿಯು ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂಲಸೌಕರ್ಯ ಕಿತ್ತುಕೊಳ್ಳುತ್ತಿದೆ.

ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ವರ್ಷದಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಸಾಣೂರು ಸರ್ಕಾರಿ ಪ್ರೌಢಶಾಲೆ,  ಪದವಿಪೂರ್ವ ಕಾಲೇಜಿನ ಭೂಸ್ವಾಧೀನತೆಗೆ ಇನ್ನೂ ನಿಗದಿಪಡಿಸಿದ ಮೊತ್ತ ಕೊಟ್ಟಿಲ್ಲ. ಶಾಲಾ ಕಟ್ಟಡಗಳ ಪಕ್ಕದಲ್ಲಿಯೇ ಜಮೀನು ಅಗೆದು, ರಸ್ತೆ ನಿರ್ಮಾಣ ಮಾಡಿರುವುದರಿಂದ ವಿದ್ಯಾಸಂಸ್ಥೆಗೆ ಸಾಗುವ ಮಣ್ಣಿನ ಹಾದಿ ಸಂಪೂರ್ಣ ಹಾಳಾಗಿದೆ.

ದಾನಿಗಳಿಂದ ನಿರ್ಮಾಣಗೊಂಡ ಕಾಂಕ್ರೀಟ್ ಪ್ರವೇಶ ದ್ವಾರ, ಆವರಣ ಗೋಡೆ, ಗೇಟ್ ಧ್ವಂಸವಾಗಿದ್ದು, ಬ್ಯಾಂಕ್ ಆಫ್ ಬರೋಡ ವತಿಯಿಂದ ಕಟ್ಟಿಸಿಕೊಟ್ಟಿದ್ದ ಬಸ್ಸು ನಿಲ್ದಾಣ ಕೆಡವಿ  ಹಾಕಲಾಗಿದೆ. ನೂರಾರು ಮಂದಿ ವಿದ್ಯಾರ್ಥಿಗಳು ಬಿಸಿಲಲ್ಲೇ ಬಸ್ಸಿಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ. ಅಡ್ಡಾದಿಡ್ಡಿಯಾಗಿ ಚಲಿಸುವ ವಾಹನಗಳಿಂದ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.

ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ಹೊಂಡ ಗುಂಡಿಗಳಿಂದಾಗಿ ಅಪಾಯಕಾರಿಯಾಗಿದೆ. ಶಾಲಾ ಕಟ್ಟಡದ ಹಿಂಭಾಗದಿಂದ 500ಕ್ಕೂ ಅಧಿಕ ಲೋಡು ಮಣ್ಣು ತೆಗೆದಿರುವುದರಿಂದ, ಇದೀಗ ಅರ್ಧ ಉಳಿದಿರುವ ಗುಡ್ಡದ ಮಣ್ಣು ಬಿದ್ದು ಕಾಲೇಜು ಕಟ್ಟಡಕ್ಕೆ ಹಾನಿ ಆಗುವ ಅಪಾಯವಿದೆ.

ಪ್ರಾಂಶುಪಾಲರು ಈ ಕುರಿತು ಹಲವು ಸಲ ಶಾಸಕ, ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಹಾಗೂ ಗುತ್ತಿಗೆದಾರರನ್ನು ಸಂಪರ್ಕಿಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದೀಗ ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಮತ್ತು ಹೆದ್ದಾರಿ ಹೋರಾಟ ಸಮಿತಿ ಪ್ರಮುಖರು ಪ್ರತಿಭಟನೆ ನಡೆಸಲು ಸಿದ್ಧತೆ ಮಾಡುತ್ತಿದ್ದಾರೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಶೋಕ್ ಶೆಟ್ಟಿ, ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT