ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಕ್ಕೆ ತ್ರಿಸೂತ್ರ ನೀಡಿದ ಸಂತ ಸೇವಾಲಾಲರು

ಸಂತ ಸೇವಾಲಾಲ್ ಜಯಂತಿಯಲ್ಲಿ ಉಪನ್ಯಾಸಕ ಡಾ.ನಾಗೇಂದ್ರ ನಾಯ್ಕ ಅಭಿಮತ
Last Updated 15 ಫೆಬ್ರುವರಿ 2019, 14:32 IST
ಅಕ್ಷರ ಗಾತ್ರ

ಉಡುಪಿ: ಸಂತ ಸೇವಾಲಾಲರು ವಿಚಾರವಾದಿ, ಅಹಿಂಸಾವಾದಿ, ವರ್ತಕ ಹಾಗೂ ಬಂಜಾರ ಸಮುದಾಯವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ನಾಗೇಂದ್ರ ನಾಯ್ಕ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೃಷ್ಣನಗರಿ ಶ್ರೀ ಸಂತ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘದ ಸಹಯೋಗದಲ್ಲಿ ಶುಕ್ರವಾರ ವಳಕಾಡು ಸರ್ಕಾರಿ ಶಾಲೆಯಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಬಂಜಾರ ಸಮುದಾಯವನ್ನು ಸಂಘಟಿಸಿ, ಅಭಿವೃದ್ದಿಗೆ ಸಂತ ಸೇವಾಲಾಲರು ಕೊಡುಗೆ ನೀಡಿದ್ದಾರೆ. ಭಾರತವನ್ನು 17 ಬಾರಿ ಸುತ್ತಾಡಿ ಅಪಾರ ಅನುಭವ ಪಡೆದಿದ್ದರು. ಒಳ್ಳೆಯದನ್ನು ಆಲಿಸು, ಒಳ್ಳೆಯದನ್ನು ಒಪ್ಪಿಕೊ ಹಾಗೂ ಒಳ್ಳೆಯದನ್ನು ಸ್ವೀಕರಿಸು ಎಂಬ ತ್ರಿಸೂತ್ರಗಳನ್ನುಬಂಜಾರ ಜನಾಂಗಕ್ಕೆ ನೀಡಿದ್ದರು ಎಂದರು.

ಬಂಜಾರ ಜನಾಂಗ ಪುರಾತನ ಸಿಂಧೂ ಜನಾಂಗದ ಜತೆಗೆ ಹೋಲಿಕೆ ಇದೆ. ಹರಪ್ಪ ಮೊಹೆಂಜಾದಾರೊದಲ್ಲಿ ನಡೆದ ಉತ್ಖನನ ವೇಳೆ ಈ ಬಗ್ಗೆ ಕುರುಹುಗಳು ದೊರೆತಿವೆ. ಹಿಂದೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಬಂಜಾರ ಜನಾಂಗ ವಿಶ್ವದ 144 ದೇಶದಲ್ಲಿ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದೆ. ಬಂಜಾರ ಮಹಿಳೆಯರು ಧರಿಸುವ ವಿಶಿಷ್ಟ ಉಡುಪುಗಳು ಫ್ಯಾಷನ್ ಜಗತ್ತಿಗೆ ನೀಡಿದ ಕೊಡುಗೆ ಎಂದು ಡಾ.ನಾಗೇಂದ್ರ ನಾಯ್ಕ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಉಡುಪಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನಳಿನಿ ಪ್ರದೀಪ್ ರಾವ್ ಮಾತನಾಡಿ, ಸಮುದಾಯಗಳ ಅಭಿವೃದ್ದಿಗೆ ಕೊಡುಗೆ ನೀಡಿದ ಮಹನೀಯರ ವಿಚಾರಧಾರೆಗಳು ಪ್ರತಿಯೊಬ್ಬರನ್ನೂ ತಲುಪಬೇಕು ಎಂದರು.

ನಗರಸಭಾ ಸದಸ್ಯೆ ರಜನಿ ಹೆಬ್ಬಾರ್, ಎಎಸ್‌ಪಿ ಕುಮಾರ ಚಂದ್ರ, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ದಿ ಇಲಾಖೆಯ ಜಿಲ್ಲಾ ಅಧಿಕಾರಿ ಎಚ್.ಆರ್.ಲಂಬಾಣಿ, ಪೊಲಿಪು ಪಿಯು ಕಾಲೇಜಿನ ಪ್ರಾಂಶುಪಾಲ ಪಂಡರೀನಾಥ್, ಕೃಷ್ಣನಗರಿ ಸಂತ ಸೇವಾಲಾಲ್ ಬಂಜಾರ ಸಂಘದ ಅಧ್ಯಕ್ಷ ಶಾಂತಪ್ಪ ಜಿ.ಲಂಬಾಣಿ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿದರು. ಮನೋಹರ್ ಲಂಬಾಣಿ ವಂದಿಸಿದರು. ಹಿರಿಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT