ಶನಿವಾರ, ಜನವರಿ 25, 2020
22 °C
ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದಲ್ಲಿ ಪರ್ಯಾಯ ಪಲಿಮಾರು ಶ್ರೀ

ಸಕಲರೊಂದಿಗೆ ಬೆರೆಯುವ ಗುಣ ಶಿವಳ್ಳಿ ಸಮಾಜದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣ ಸಮಾಜದ ಗುರುಗಳಾದ ಮಧ್ವಾಚಾರ್ಯರು ವಿಶ್ವಕ್ಕೆ ತತ್ವಜ್ಞಾನ ಸಿದ್ಧಾಂತ ಕೊಟ್ಟಿದ್ದಾರೆ. ವಾದಿರಾಜರು ಸಂಸ್ಕೃತದ ಮೂಲಕ ಧರ್ಮಜಾಗೃತಿ ಮೂಡಿಸಿದ್ದಾರೆ. ಭಗವದ್ಗೀತೆಗೆ ವ್ಯಾಖ್ಯಾನ ಬರೆದು ಜಗತ್ತು ಭಾರತದತ್ತ ತಿರುಗಿ ನೋಡಿದ್ದಾರೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆರಂಭವಾದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ತುಳು ಶಿವಳ್ಳಿ ಬ್ರಾಹ್ಮಣರ ಸಂಪ್ರದಾಯಗಳನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಈ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ಮಧ್ವಾಚಾರ್ಯರು, ವಾದಿರಾಜರು ಹಾಗೂ ವಿಜಯಧ್ವಜರು ತೌಳವ ಪರಂಪರೆಯ ಗುರುಗಳು. ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ದೊಡ್ಡ ಶಕ್ತಿಯಾಗಿ ಬೆಳೆಯಬೇಕು. ಸಮಾಜದ ಸಂಘಟನೆಗೆ ಬಲ ತುಂಬಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಮನುಷ್ಯ ಜ್ಞಾನ ಸಂಪಾದನೆಯ ಜತೆಗೆ ದಾನ, ಧರ್ಮದಂತಹ ಪುಣ್ಯ ಕಾರ್ಯ ಮಾಡಬೇಕು. ಪುಣ್ಯ ಸಾವಿನ ನಂತರವೂ ಶಾಶ್ವತವಾಗಿರುತ್ತದೆ ಎಂದು ಮಧ್ವಾಚಾರ್ಯರು ಹೇಳಿದ್ದಾರೆ. ಜ್ಞಾನ ಸಂಪಾದನೆ ಹಾಗೂ ಸತ್‌ ಕರ್ಮಗಳಿಗೆ ಸ್ವರ್ಗದಲ್ಲಿಯೂ ಮನ್ನಣೆ ಸಿಗುತ್ತದೆ ಎಂದರು.

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ತುಳು ಶಬ್ದವೇ ಸುಂದರ. ತುಳು ಎಂದರೆ ತುಂಬಿ ತುಳುಕುವುದು ಎಂಬ ಅರ್ಥ. ತುಳು ಭಾಷೆಗೆ ಲಿಪಿ ಇದ್ದು, ಸಾವಿರಾರು ವರ್ಷಗಳ ಹಿಂದೆ ಬರೆದಿರುವ ತುಳು ಲಿಪಿಯ ಗ್ರಂಥ ಇಂದಿಗೂ ಲಭ್ಯವಿದೆ ಎಂದರು.

ತುಳು ಮಲಯಾಳಂ ಲಿಪಿಯಲ್ಲ. ಶಿವಳ್ಳಿ ಬ್ರಾಹ್ಮಣ ಬೇರೆಯವರಿಂದ ಪಡೆಯುವ ಸಮಾಜವಲ್ಲ; ದಾನ ಮಾಡುವ ಸಮಾಜ. ಕೇರಳದವರಿಗೆ ತುಳು ಲಿಪಿ ಧಾರೆ ಎರೆದಿದ್ದು ನಾವು. ವಿಪರ್ಯಾಸ ಎಂದರೆ ತುಳು ಲಿಪಿಯನ್ನು ನಾವೇ ಮರೆತುಬಿಟ್ಟಿದ್ದೇವೆ ಎಂದರು.

ಶಿವಳ್ಳಿ ಬ್ರಾಹ್ಮಣ ಸಮಾಜ ನೀರಿನಂತೆ, ಹಾಲಿನಂತೆ ಎಲ್ಲ ಸಮಾಜದೊಂದಿಗೂ ಬೆರೆಯುತ್ತದೆ. ಜತೆಗೆ, ಸ್ವಾಭಿಮಾನಿ ಸಮುದಾಯವಾಗಿದೆ. ಪ್ರಸ್ತುತ ಸಮಾಜ ಕ್ಷೀಣಿಸುತ್ತಿದ್ದು, ಅದರ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದರು.

ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿ, ಸರ್ವಾಂಗೀಣ ಬೆಳವಣಿಗೆಗೆ ಸಮಾಜ ಗಟ್ಟಿಯಾಗಬೇಕು. ಎಲ್ಲ ಕ್ಷೇತ್ರಗಳಲ್ಲಿಯೂ ಶಕ್ತಿ ವೃದ್ಧಿಸಿಕೊಳ್ಳಬೇಕು. ಕೊರತೆಗಳನ್ನು ಸರಿಪಡಿಸಿಕೊಂಡು ಬಲವರ್ಧನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಆಧ್ಯಾತ್ಮಿಕ, ಧಾರ್ಮಿಕ ವಿಚಾರದಲ್ಲಿ ಸಮಾಜದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮಠ, ಮಂದಿರಗಳನ್ನು
ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗಿನಿಂದಲೇ ಯೋಚಿಸಬೇಕು. ಸಮಾಜದ ಜನಸಂಖ್ಯೆ ಹೆಚ್ಚಾಗಿ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಬೇಕು. ಆಗಮಾತ್ರ ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿ ಗಟ್ಟಿಕೊಳ್ಳಲು ಸಾಧ್ಯ ಎಂದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರು, ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥರು ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷರಾದ ರಾಮದಾಸ್ ಮಡಮಣ್ಣಾಯ, ಬಾಲಕೃಷ್ಣ ಮುಡಂಬಡಿತ್ತಾಯ, ಗಿರಿರಾಜನ್‌, ರಾಮದಾಸ ಭಟ್‌, ಪ್ರಧಾನ ಸಂಚಾಲಕ ಎಂ.ಬಿ.ಪುರಾಣಿಕ್‌, ಗೋಪಾಲ ಮೊಗೇರಾಯ, ಮಂಜುನಾಥ್ ಉಪಾಧ್ಯಾಯ, ಹರಿಕೃಷ್ಣ ಪುನರೂರು, ವೆಂಕಟರಮಣ ಪೋತಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು