ಶುಕ್ರವಾರ, ಆಗಸ್ಟ್ 6, 2021
23 °C
ಸೋಂಕಿತರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ; ಪರೀಕ್ಷಾ ಕೇಂದ್ರಗಳಿಗೆ ಬರಲು ಸಾರಿಗೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ 13,931 ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೋವಿಡ್‌ ಕಾರಣದಿಂದ ಪರೀಕ್ಷಾ ಪದ್ಧತಿ ಬದಲಾಗಿದ್ದು, ಒಟ್ಟು 13,931 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆಯಲು ಅರ್ಹತೆ ಪಡೆದುಕೊಂಡಿದ್ದಾರೆ.

ಜುಲೈ 19 ಹಾಗೂ 22ರಂದು ಪರೀಕ್ಷೆಗಳು ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನ ವಿದ್ಯಾರ್ಥಿಗಳು ಮೂರು ವಿಷಯಗಳ ಪರೀಕ್ಷೆ ಬರೆಯುತ್ತಿದ್ದಾರೆ. ಮಳೆಗಾಲವಾಗಿರುವುದರಿಂದ ಪರೀಕ್ಷೆ ಬರೆಯಲು ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ.

2020-21ನೇ ಸಾಲಿನಲ್ಲಿ 13,336 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, ಇವರಲ್ಲಿ ಹೊರ ಜಿಲ್ಲೆಗಳ 521 ವಿದ್ಯಾರ್ಥಿಗಳು ತವರು ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಅದೇರೀತಿ ಉಡುಪಿ ಮೂಲದ 66 ವಿದ್ಯಾರ್ಥಿಗಳು ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಖಾಸಗಿ ವಿದ್ಯಾರ್ಥಿಗಳು 204, ರೆಗ್ಯುಲರ್‌ ರಿಪೀಟರ್ಸ್ 657, ಖಾಸಗಿ ರಿಪೀಟರ್ಸ್‌ 189 ಸೇರಿ 13,931 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ವರ್ಷ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷದ 51 ಕೇಂದ್ರಗಳ ಜತೆಗೆ ಈ ವರ್ಷ ಹೆಚ್ಚುವರಿಯಾಗಿ 26 ಕೇಂದ್ರಗಳನ್ನು ಮಾಡಲಾಗಿದ್ದು, 77 ಕೇಂದ್ರಗಳಲ್ಲಿ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ.

ಸಿದ್ಧತೆಗಳು:

77 ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್‍, ಮೊಬೈಲ್ ಸ್ವಾಧೀನಾಧಿಕಾರಿ, ಸ್ಥಳೀಯ ಜಾಗೃತದಳದ ಸಿಬ್ಬಂದಿ, ಮಾರ್ಗಾಧಿಕಾರಿಗಳು, ಶಿಸ್ತುಪಾಲನೆಗೆ ದೈಹಿಕ ಶಿಕ್ಷಕರು ಹಾಗೂ ಸ್ಕೌಟ್ಸ್‌ ಹಾಗೂ ಗೈಡ್ಸ್‌ಗಳನ್ನು ನಿಯೋಜಿಸಲಾಗಿದೆ.

1,780 ಕೊಠಡಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಳಸಲಾಗುತ್ತಿದ್ದು ಕೊಠಡಿ ಮೇಲ್ವಿಚಾರಕನ್ನು ನೇಮಿಸಲಾಗಿದ್ದು, ಪ್ರತಿ ಕೇಂದ್ರದಲ್ಲಿ ನಾಲ್ವರು ಹೆಚ್ಚುವರಿ ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಈಗಾಗಲೇ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಭಾಗಶಃ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ತಂಡಗಳ‌ನ್ನು ನಿಯೋಜಿಸಲಾಗಿದೆ. ಮಳೆಗಾಲವಾಗಿರುವುದರಿಂದ ಪರೀಕ್ಷಾ ಕೇಂದ್ರಗಳಲ್ಲಿ ಗಾಳಿ ಬೆಳಕಿನ ವ್ಯವಸ್ಥೆ ಸರಿಯಾಗಿರುವಂತೆ ಎಚ್ಚರವಹಿಸಲಾಗಿದ್ದು, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತಾಲ್ಲೂಕು ಹಂತದಲ್ಲಿ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಸಾರಿಗೆ ವ್ಯವಸ್ಥೆ ಇಲ್ಲದಿರುವ ಕಡೆ ಶಿಕ್ಷಕರು ಸ್ವಂತ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುವ ಹಾಗೂ ಮನೆಗೆ ಕರೆದೊಯ್ಯುವಂತೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ 2 ಹೆಚ್ಚುವರಿ ವಾಹನ ಮೀಸಲಿರಿಸಲಾಗಿದೆ.

ಈಗಾಗಲೇ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಎನ್‌ಆರ್ ಹಾಗೂ ಒಎಂಆರ್ ಶೀಟ್‌ಗಳು ತಲುಪಿದ್ದು, ಪರಿಶೀಲನೆ ನಡೆದಿದೆ. ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ದೇಹದ ಉಷ್ಣತೆ ಪರೀಕ್ಷಿಸಲು ಥರ್ಮಲ್ ಉಪಕರಣಗಳು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಮಾಸ್ಕ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತರಾದವರಿಗೆ ತರಬೇತಿ ನೀಡಲಾಗಿದ್ದು, ಅವರವರ ಕರ್ತವ್ಯಗಳನ್ನು ವಿವರಿಸಲಾಗಿದೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ತೋರಿಸಿ ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡಬಹುದು. ಆರೋಗ್ಯ ತಪಾಸಣಾ ಕೇಂದ್ರ, ಅಂತರ ಕಾಪಾಡಲು ಮಾರ್ಕಿಂಗ್ ವ್ಯವಸ್ಥೆ  ಮಾಡಲಾಗಿದೆ.

ಯಾವ ಪರೀಕ್ಷೆ ಎಂದು:

ಜುಲೈ 19ರಂದು ಬೆಳಿಗ್ಗೆ 10.30 ರಿಂದ 1.30 ರವರೆಗೆ ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳನ್ನೊಳಗೊಡಂ ಪರೀಕ್ಷೆ ನಡೆಯಲಿದೆ. 22ರಂದು ಬೆಳಿಗ್ಗೆ 10.30 ರಿಂದ 1.30ರವರೆಗೆ ಭಾಷಾ ವಿಷಯಗಳಾದ ಪ್ರಥಮ, ದ್ವಿತೀಯ, ತೃತೀಯ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.

ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಪರೀಕ್ಷೆ

ಕೊರೊನಾ ಲಕ್ಷಣಗಳಿರುವ ಮಕ್ಕಳಿಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿ ಮೀಸಲಿರಿಸಲಾಗಿದ್ದು, ಪರೀಕ್ಷೆ ಬರೆಸಲಾಗುತ್ತಿದೆ. ಕೋವಿಡ್ ದೃಢಪಟ್ಟ ಮಕ್ಕಳಿಗೆ ತಾಲ್ಲೂಕು ಮಟ್ಟದ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಮಕ್ಕಳಿಗೆ ಆರೋಗ್ಯ ಸಿಬ್ಬಂಧಿಯವರ ನೆರವಿನೊಂದಿಗೆ ಪರೀಕ್ಷೆಯನ್ನು ಬರೆಸಲಾಗುತ್ತದೆ. 2,266 ಸಿಬ್ಬಂದಿ ಪರೀಕ್ಷಾ ಕಾರ್ಯದಲ್ಲಿ ತೊಡಗಿದ್ದು ಎಲ್ಲರಿಗೂ ಕೋವಿಡ್‌ ಲಸಿಕೆ ಹಾಕಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.