ಸಾಮಾನ್ಯ ಸಭೆಯಲ್ಲಿ ಹೊತ್ತಿ ಉರಿದ ಬೀದಿದೀಪಗಳು

7
ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಸ್ಥಳೀಯರಿಗೆ ಗುತ್ತಿಗೆ ನೀಡಲು ಸದಸ್ಯರ ಒತ್ತಾಯ

ಸಾಮಾನ್ಯ ಸಭೆಯಲ್ಲಿ ಹೊತ್ತಿ ಉರಿದ ಬೀದಿದೀಪಗಳು

Published:
Updated:
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಗರಸಭೆ ಸಾಮಾನ್ಯ ಸಭೆ ನಡೆಯಿತು

ಉಡುಪಿ: ನಗರದಲ್ಲಿ ಕೆಟ್ಟುನಿಂತಿರುವ ಬೀದಿದೀಪಗಳನ್ನು ಗುರುತಿಸಿ ತಿಂಗಳೊಳಗೆ ಹೊಸ ಎಲ್‌ಇಡಿ ಬೀದಿದೀಪಗಳನ್ನು ಹಾಕಿಸುವುದಾಗಿ ನಗರಸಭೆ ಪೌರಾಯುಕ್ತ ಜನಾರ್ಧನ್‌ ಭರವಸೆ ನೀಡಿದರು.

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಜೆರ್ಮ್‌ ಅನುದಾನದಡಿ ತಲಾ ₹ 580 ರಂತೆ 500 ಎಲ್‌ಇಡಿ ಬೀದಿದೀಪಗಳನ್ನು ಖರೀದಿಸಲಾಗಿದೆ. ಆದರೆ, ಜೆರ್ಮ್ ಅಡಿ ಒಂದು ಟ್ಯೂಬ್‌ಲೈಟ್ ಸೆಟ್‌ಗೆ ₹ 1650 ಇದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆ ಕೇವಲ ₹ 650ರಿಂದ ₹ 700 ಇದೆ. ದುಬಾರಿಯಾದ ಹಿನ್ನೆಲೆಯಲ್ಲಿ ಟೆಂಡರ್‌ ಕರೆದು ಟ್ಯೂಬ್‌ಲೈಟ್‌ ಖರೀದಿಸಲಾಗುವುದು ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಟೆಂಡರ್ ಕರೆದರೆ ವಿಳಂಬವಾಗುತ್ತದೆ. ಹಾಗಾಗಿ, ಟ್ಯೂಬ್‌ಲೈಟ್‌ಗಳ ಬದಲಿಗೆ ‘ಜೆರ್ಮ್‌’ ಅಡಿಯಲ್ಲಿಯೇ ನಗರಕ್ಕೆ ಅವಶ್ಯವಿರುವ 1,700 ಎಲ್‌ಇಡಿ ದೀಪಗಳನ್ನು ತುರ್ತಾಗಿ ಖರೀದಿಸಿ ಎಂದು ಒತ್ತಾಯಿಸಿದರು.

ಶಾಸಕ ರಘುಪತಿ ಭಟ್‌ ಕೂಡ ಸದಸ್ಯರ ಮಾತಿಗೆ ಧನಿಗೂಡಿಸಿ ಎಲ್‌ಇಡಿ ದೀಪಗಳು ಮಿತವ್ಯಯವಾಗಿದ್ದು, ನಗರಸಭೆಗೆ ಹೊರೆಯಾಗುವುದಿಲ್ಲ. 5 ವರ್ಷಗಳ ನಿರ್ವಹಣೆ ಇರುವುದರಿಂದ, ಕೆಟ್ಟರೆ ತಕ್ಷಣ ಬದಲಿಸಬಹುದು ಎಂದು ಸಲಹೆ ನೀಡಿದರು. ಅಂತಿಮವಾಗಿ ಎಲ್‌ಇಡಿ ಬೀದಿದೀಪಗಳನ್ನೇ ಖರೀದಿಸಲು ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಳ್ಳಲಾಯಿತು.

ಇದಕ್ಕೂ ಮುನ್ನ ಬೀದಿದೀಪಗಳ ಅಸಮರ್ಪಕ ನಿರ್ವಹಣೆ ವಿರುದ್ಧ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ಸಭೆಯಲ್ಲಿ ಗದ್ದಲ ಎಬ್ಬಿಸಿದರು. ನಗರದ ಯಾವ ಭಾಗದಲ್ಲಿ ಬೀದಿದೀಪಗಳಿವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಶಿವಮೊಗ್ಗ ಮೂಲದ ಗುತ್ತಿಗೆದಾರರಿಗೆ ಟೆಂಡರ್ ಕೊಟ್ಟಿದ್ದು ಸರಿಯಲ್ಲ. ಅವರ ಬದಲಿಗೆ ಸ್ಥಳೀಯರಿಗೆ ಟೆಂಡರ್‌ ಕೊಟ್ಟಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಸದಸ್ಯರು ಧನಿ ಎತ್ತಿದರು. 

ಇದಕ್ಕೆ ಸ್ಪಷ್ಟನೆ ನೀಡಿದ ಪೌರಾಯುಕ್ತರಾದ ಜನಾರ್ದನ್‌, ‘ಆನ್‌ಲೈನ್‌ನಲ್ಲಿ ನಿಯಮಗಳಿಗೆ ಅನುಗುಣವಾಗಿ ಟೆಂಡರ್ ನೀಡಲಾಗಿದೆ. ಬೀದಿದೀಪಗಳು ಕೆಟ್ಟಿರುವ ಬಗ್ಗೆ ಸಾರ್ವಜನಿಕರಿಂದ ಕೇವಲ 350 ದೂರುಗಳು ಬಂದಿವೆ. 850 ದೂರುಗಳು ದಾಖಲಾದರೆ ಮಾತ್ರ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸಾದ್ಯ. ಆದರೆ, ಸಭೆಯಲ್ಲಿ ನಿರ್ಣಯ ತೆಗೆದುಕೊಂಡರೆ ಸೇರಿಸಬಹುದು ಎಂದರು.

ನಗರಸಭೆಗೆ ದೂರು ಕೊಟ್ಟರೆ ಬಗೆಹರಿಯುವುದಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಹಾಗಾಗಿ, ಜನಪ್ರತಿನಿಧಿಗಳ ಬಳಿ ದೂರು ಹೇಳಿಕೊಳ್ಳುತ್ತಾರೆ. ನಮ್ಮ ದೂರುಗಳನ್ನೇ ಅಧಿಕೃತವಾಗಿ ದಾಖಲಿಸಿಕೊಂಡು ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಿ ಎಂದು ಸದಸ್ಯರಾದ ಯಶಪಾಲ್‌ ಸುವರ್ಣ, ಶ್ಯಾಮ್‌ಪ್ರಸಾದ್‌, ಪ್ರಶಾಂತ್ ಅಮೀನ್‌, ಮಹೇಶ್‌ ಠಾಕೂರ್ ಸೇರಿದಂತೆ ಹಲವರು ಸದಸ್ಯರು ಒತ್ತಾಯಿಸಿದರು.

ಸ್ಥಳೀಯರಿಗೆ ಗುತ್ತಿಗೆ ನೀಡುವ ಸಂಬಂಧ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಸಲ್ಲಿಸೋಣ. ಸ್ಥಳೀಯರಿಗೆ ಆದ್ಯತೆ ನೀಡಲು ಟೆಂಡರ್‌ ನಿಯಮಗಳ ಬದಲಾವಣೆ ಸಾಧ್ಯವೇ ಪರಿಶೀಲಿಸಿ. ಹಿಂದಿನ ಗುತ್ತಿಗೆದಾರರು ಮತ್ತೆ ಟೆಂಡರ್‌ನಲ್ಲಿ ಭಾಗವಹಿಸದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಪರಿಶೀಲಿಸಿ ಎಂದು ಶಾಸಕ ರಘುಪತಿ ಭಟ್‌ ಪೌರಾಯುಕ್ತರಿಗೆ ಸೂಚಿಸಿದರು.

ಮಳೆಗಾಲವಾಗಿದ್ದು ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿವೆ. ಈ ಬಗ್ಗೆ ಹೊಂಡ ಮುಚ್ಚಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರು ಶಾಸಕರನ್ನು ಒತ್ತಾಯಿಸಿದರು. ಮಲ್ಪೆ ಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ತುರ್ತಾಗಿ ಗುಂಡಿಗಳನ್ನು ಮುಚ್ಚಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಈಗಾಗಲೇ ನಗರದಲ್ಲಿರುವ ಗುಂಡಿಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಲಾಗಿದೆ. ನಾಳೆಯಿಂದಲೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕರು ಭರವಸೆ ನೀಡಿದರು. 

500 ಮನೆಗಳ ನಿರ್ಮಾಣ:

ಕೇಂದ್ರ ಸರ್ಕಾರದ ಯೋಜನೆ ಹಾಗೂ ಸ್ಲಂಬೋರ್ಡ್‌ನಿಂದ ನಗರದ ಕೊಳಚೆ ಪ್ರದೇಶಗಳ ಅಭಿವೃದ್ಧಿ ಮಾಡಲಾಗುವುದು. ಯೋಜನೆಯಡಿ ಪಾಲೆಕಟ್ಟೆ, ವಿಷ್ಣುಮೂರ್ತಿ ನಗರ, ಬಲರಾಮನಗರ, ನ್ಯೂಕಾಲೋನಿ ಸ್ಲಂಗಳಲ್ಲಿ ತಲಾ ₹ 5 ಲಕ್ಷ ವೆಚ್ಚದಲ್ಲಿ 500 ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಎಸ್‌ಸಿ, ಎಸ್‌ಟಿ ಫಲಾನುಭವಿಗಳು 50 ಸಾವಿರ, ಸಾಮಾನ್ಯ ವರ್ಗದವರು 70 ಸಾವಿರ ಮುಂಗಡ ನೀಡಿದರೆ ಸುಸಜ್ಜಿತ ಮನೆಗಳನ್ನು ಕಟ್ಟಿಸಿಕೊಡಲಾಗುವುದು ಎಂದರು. ಯೋಜನೆಯಡಿ ಲಾಭ ಪಡೆಯಲು ಹಕ್ಕುಪತ್ರ ಇಲ್ಲದಿದ್ದರೂ ಮನೆಯ ಪರವಾನಗಿಯ ಕಾರ್ಡ್‌ ಇದ್ದರೂ ಸಾಕು ಎಂದು ಶಾಸಕ ರಘುಪತಿ ಭಟ್‌ ಹೇಳಿದರು.

ನಗರಸಭೆ ಉಪಾಧ್ಯಕ್ಷೆ ಸಂಧ್ಯಾತಿಲಕ್ ರಾಜ್‌, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !