ಜನರಿಗೆ ಕೇಂದ್ರ ಸರ್ಕಾರದ ವೈಫಲ್ಯ ತಿಳಿಸಿ: ವಿನಯ ಕುಮಾರ್ ಸೊರಕೆ

7

ಜನರಿಗೆ ಕೇಂದ್ರ ಸರ್ಕಾರದ ವೈಫಲ್ಯ ತಿಳಿಸಿ: ವಿನಯ ಕುಮಾರ್ ಸೊರಕೆ

Published:
Updated:

ಹಿರಿಯಡ್ಕ: ಜನರಿಗೆ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಕೇಂದ್ರ ಸರ್ಕಾರದ ವೈಫಲ್ಯವನ್ನು ಜನರ ಮುಂದಿಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಈಚೆಗೆ ಹಿರಿಯಡ್ಕದ ಗಣೇಶ ಕಲಾಮಂದಿರದಲ್ಲಿ ನಡೆದ ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ, ನಿರುದ್ಯೋಗ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಗರಿಷ್ಠ ಮುಖಬೆಲೆಯ ನೋಟು ಅಮಾನ್ಯದಿಂದ ದೇಶದ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡದೆ ನುಣುಚಿಕೊಳ್ಳುತ್ತಿದೆ ಎಂದು ಟೀಕಿಸಿದರು.

ರಫೇಲ್ ಯುದ್ಧವಿಮಾನಗಳ ಖರೀದಿ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿದೆ. 4 ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸಲಾಗಲಿಲ್ಲ. ಇಂತಹ ವಿಚಾರಗಳನ್ನು ಜನರ ಮನೆಗಳಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದರು.

ರಾಜ್ಯ ಸರ್ಕಾರ 5 ವರ್ಷಗಳ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾದರೂ ಜನರ ಮದ್ಯೆಯಿದ್ದು, ಪಕ್ಷವನ್ನು ಸಂಘಟಿಸುವಲ್ಲಿ ಕೆಲಸವನ್ನು ಮಾಡುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಕಾರ್ಯಕರ್ತರು ಒಟ್ಟಾಗಿ ಪಕ್ಷವನ್ನು ಬೂತ್ ಮಟ್ಟದಿಂದಲೇ ಸಂಘಟಿಸಿ ಲೋಕಸಭಾ ಚುನಾವಣೆಯನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಿಕಾ ಕೇಳ್ಕರ್, ಸುಧಾಕರ ಶೆಟ್ಟಿ ಮೈರ್ಮಾಡಿ, ತಾಲೂಕು ಪಂಚಾಯತ್ ಸದಸ್ಯರಾದ ಸಂಧ್ಯಾ ಶೆಟ್ಟಿ, ಲಕ್ಷ್ಮೀನಾರಾಯಣ ಪ್ರಭು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಮುರಳಿ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸೇವಾದಳ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಲೀಗಲ್ ಸೆಲ್ ಅಧ್ಯಕ್ಷ ಹರೀಶ್ ಶೆಟ್ಟಿ ಪಾಂಗಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಷನ್ ಹೆಗ್ಡೆ ಕೊಳ್ಕೆಬೈಲ್ ಅವರೂ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !