ಉಡುಪಿ: ಜಿಲ್ಲೆಯಲ್ಲಿ 9,90,773 ಮತದಾರರು

7
4,793 ಯುವ ಮತದಾರರು ನೋಂದಣಿ, ಪಟ್ಟಿಯಲ್ಲಿ ಹೆಸರು ಸೇರಿಸಲು ಕಾಲಾವಕಾಶ

ಉಡುಪಿ: ಜಿಲ್ಲೆಯಲ್ಲಿ 9,90,773 ಮತದಾರರು

Published:
Updated:
Prajavani

ಉಡುಪಿ: ಚುನಾವಣಾ ಆಯೋಗದ ನಿರ್ದೇಶನದಂತೆ ಬೈಂದೂರು, ಕುಂದಾಪುರ, ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದರು.

ಬುಧವಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜನವರಿ 1, 2019 ಅನ್ನು ಅರ್ಹತಾ ದಿನಾಂಕವಾಗಿಟ್ಟುಕೊಂಡು ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ, ಸಹಾಯಕ ಕಮಿಷನರ್ ಕಚೇರಿಗಳಲ್ಲಿ ಹಾಗೂ ತಾಲ್ಲೂಕು ಕಚೇರಿಗಳಲ್ಲಿ ವಿವರಗಳು ಲಭ್ಯವಿದೆ. ಜಿಲ್ಲಾಧಿಕಾರಿ ಕಚೇರಿಯ ವೆಬ್‌ಸೈಟ್‌ನಲ್ಲೂ ಮಾಹಿತಿ ಇದೆ ಎಂದರು.

ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತಿದ್ದಪಡಿಗೆ ಕಾಲಾವಕಾಶ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಜಿಲ್ಲಾಮಟ್ಟದಲ್ಲಿ ಮತದಾರರ ಸಹಾಯವಾಣ ಕೇಂದ್ರ ಆರಂಭಿಸಲಾಗಿದೆ. ಟೋಲ್ ಫ್ರೀ ನಂಬರ್‌ 1950ಕ್ಕೆ ಕರೆ ಮಾಡಿ ಸಾರ್ವಜನಿಕರು ಮಾಹಿತಿ ಪಡೆಯಬಹುದು ಎಂದರು.

ಜ.25ರಂದು ರಾಷ್ಟ್ರೀಯ ಮತದಾರರ ದಿನವನ್ನು ಅಜ್ಜರಕಾಡಿನ ಆರೂರು ಲಕ್ಷ್ಮೀ ನಾರಾಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಮತದಾರರ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಹೊಸದಾಗಿ ನೋಂದಣಿ ಮಾಡಿಕೊಂಡಿರುವ ಯುವ ಮತದಾರರಿಗೆ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ವಿತರಿಸಲಾಗುವುದು ಎಂದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ 10,273 ಅರ್ಜಿಗಳು ಬಂದಿದ್ದು, ಬಹುತೇಕ ಪುರಸ್ಕೃತಗೊಂಡಿವೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು 7,099 ಹಾಗೂ ತಿದ್ದುಮಾಡುವಂತೆ 3,374, ವಿಧಾನಸಭಾ ವ್ಯಾಪ್ತಿಯಲ್ಲಿ ಬದಲಾವಣೆಗಾಗಿ 755 ಅರ್ಜಿಗಳು ಬಂದಿವೆ.

ಈ ಬಾರಿ ಮತದಾರರ ಪರಿಷ್ಕರಣೆಯಲ್ಲಿ 4,793 ಯುವ ಮತದಾರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 16 ತೃತೀಯ ಲಿಂಗಿಗಳಿದ್ದಾರೆ. ಸಾರ್ವಜನಿಕರು ಹೆಸರು ಸೇರ್ಪಡೆಗೆ ನಮೂನೆ 6, ಹೆಸರು ತೆಗೆದುಹಾಕಲು ನಮೂನೆ 7, ತಿದ್ದುಪಡಿಗೆ ನಮೂನೆ 8, ವಿಧಾನಸಭಾ ವ್ಯಾಪ್ತಿಯ ಬದಲಾವಣೆಗೆ ನಮೂನೆ 8ಎ ಹಾಗೂ ಎನ್‌ಆರ್ಐ ಮತದಾರರು ನಮೂನೆ 6 ‘ಎ’ ಅರ್ಜಿ ಬಳಸಬೇಕು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !