ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳಸೀ ಸಂಕೀರ್ತನಾ ಕಲೆಗೆ ಜೀವ ತುಂಬಿ: ಪಲಿಮಾರು ಶ್ರೀ

ತುಳಸೀ ಸಂಕೀರ್ತನಾ ಸಪ್ತಾಹ ಸ್ಪರ್ಧೆ ಉದ್ಘಾಟನೆ
Last Updated 14 ಅಕ್ಟೋಬರ್ 2019, 16:59 IST
ಅಕ್ಷರ ಗಾತ್ರ

ಉಡುಪಿ: ನಶಿಸುತ್ತಿರುವ ತುಳಸೀ ಸಂಕೀರ್ತನಾ ಕಲಾ ಪ್ರಕಾರಕ್ಕೆ ಜೀವ ತುಂಬುವ ಕೆಲಸ ಆಗಬೇಕು ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ ಹಾಗೂ ಉಡುಪಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಸಹಯೋಗದಲ್ಲಿ ಕೃಷ್ಣಮಠದ ಮಧ್ವಮಂಟಪದಲ್ಲಿ ಸೋಮವಾರ ಆಯೋಜಿಸಿದ ತುಳಸೀ ಸಂಕೀರ್ತನಾ ಸಪ್ತಾಹ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ತುಳಸೀ ಸಂಕೀರ್ತನೆ ಉಡುಪಿ ಜಿಲ್ಲೆಯ ಪ್ರಸಿದ್ಧ ಕಲಾಪ್ರಕಾರವಾಗಿದೆ. ಹಿಂದೆ ಕಾರ್ತಿಕ ಮಾಸದಲ್ಲಿ ಮನೆ ಮನೆಗಳಲ್ಲಿ ತುಳಸೀ ಸಂಕೀರ್ತನಾ ಕಾರ್ಯಕ್ರಮ ನಡೆಯುತ್ತಿದ್ದವು. ತುಳಸಿ ಕಟ್ಟೆಯ ಸುತ್ತ ಹಾಡು ಹಾಡಿಕೊಂಡು ಕುಣಿಯುತ್ತಿದ್ದರು. ಆದರೆ ಈಗ ಇದು ಇತಿಹಾಸದ ಪುಟ ಸೇರಿದ್ದು, ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಈ ಕಲಾಪ್ರಕಾರಕ್ಕೆ ಸ್ಪರ್ಧೆಗಳ ಮೂಲಕ ಮತ್ತೆ ಜೀವ ತುಂಬುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದರು.

ಈ ಸಂಕೀರ್ತನೆಯಲ್ಲಿ ಭಕ್ತಿ, ನೃತ್ಯ, ಹಾಡುಗಾರಿಕೆ, ದ್ರಶ್ಯ, ಶ್ರಾವ್ಯ ಎಲ್ಲವೂ ಇದೆ. ಮನೆಯ ಮುಂದೆ ತುಳಸಿ ಗಿಡವೊಂದಿದ್ದರೆ ಅಲ್ಲಿ ಆರೋಗ್ಯಕರ ವಾತಾವರಣ ನೆಲೆಸುತ್ತದೆ. ಹಾಗಾಗಿ ಮನೆ ಮನೆಗಳಲ್ಲಿ ತುಳಸಿ ಗಿಡ ಬೆಳೆಸುವ ವ್ಯವಸ್ಥೆ ಆಗಬೇಕು ಎಂದರು.

ಪರ್ಯಾಯ ಪಲಿಮಾರು ಮಠದ ಕಿರಿಯ ವಿದ್ಯಾರಾಜೇಶ್ವರ ಸ್ವಾಮೀಜಿ, ಕಟೀಲು ದೇಗುಲದ ಅನುವಂಶೀಕ ಮೊಕ್ತೇಸರ ಲಕ್ಷ್ಮೀನಾರಾಯಣ ಅಸ್ರಣ್ಣ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಎ.ವಿ. ನಾವಡ, ಕೃಷ್ಣರಾಜ ಸರಳಾಯ, ಬ್ರಾಹ್ಮಣ ಮಹಾಮಂಡಲ ಉಪಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕೆ. ರವಿಪ್ರಕಾಶ್‌ ಭಟ್‌, ಕರ್ಣಾಟಕ ಬ್ಯಾಂಕ್‌ ಮಹಾಪ್ರಬಂಧಕ ಗೋಪಾಲಕೃಷ್ಣ ಸಾಮಗ ಮೊದಲಾದವರು ಉಪಸ್ಥಿತರಿದ್ದರು.

ಬ್ರಾಹ್ಮಣ ಮಹಾಮಂಡಲ ಅಧ್ಯಕ್ಷ ಕೆ. ಅರವಿಂದ ಆಚಾರ್ಯ ಸ್ವಾಗತಿಸಿದರು. ಸಂಕೀರ್ತನಾ ಸಪ್ತಾಹ ಸ್ಪರ್ಧೆಯಲ್ಲಿ ಒಟ್ಟು 25 ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT