ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುವಿಗೆ ಅಧಿಕೃತ ರಾಜ್ಯ ಭಾಷೆ ಮಾನ್ಯತೆ ಕೊಡಿ: ದಯಾನಂದ ಜಿ. ಕತ್ತಲ್‌ಸಾರ್‌

Last Updated 28 ಫೆಬ್ರುವರಿ 2020, 14:47 IST
ಅಕ್ಷರ ಗಾತ್ರ

ಉಡುಪಿ: ಅತ್ಯಂತ ಸಮೃದ್ಧ ಹಾಗೂ ಸುಂದರ ಭಾಷೆ ಆಗಿರುವ ತುಳುವಿಗೆ ಈವರೆಗೂ ಅಧಿಕೃತ ರಾಜ್ಯ ಭಾಷೆ ಮಾನ್ಯತೆ ಸಿಕ್ಕಿಲ್ಲ. ತುಳುವನ್ನು ಸಂವಿಧಾನದ 8 ಪರಿಚ್ಛೇದಕ್ಕೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕಣ್ಣು ತೆರೆಯಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್‌ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಎಂಜಿಎಂ ಕಾಲೇಜಿನ ತುಳು ಸಂಘ ಹಾಗೂ ತುಳುಕೂಟ ಉಡುಪಿ ಇದರ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ತುಳು ಸಂಸ್ಕೃತಿಯ ಹಬ್ಬ ‘ತುಳು ಐಸಿರಿ–2020’ ಅನ್ನು ಉದ್ಘಾಟಿಸಿ ಮಾತನಾಡಿದರು.

ದೆಹಲಿ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ರಾಜ್ಯಗಳು ಒಂದಕ್ಕಿಂತ ಹೆಚ್ಚು ರಾಜ್ಯ ಭಾಷೆಗಳನ್ನು ಹೊಂದಿವೆ. ತುಳುಭಾಷೆ ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾಗಿದ್ದು, ಶಿಲಾಶಾಸನ, ತಾಮ್ರ ಶಾಸನಗಳನ್ನು ಒಳಗೊಂಡಿದೆ. ಅಲ್ಲದೆ, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಸ್ವತಂತ್ರ ಭಾಷೆಯಾಗಿದೆ. ಆದರೂ ರಾಜ್ಯ ಭಾಷೆಯ ಮಾನ್ಯತೆ ಸಿಗದಿರುವುದು ಬೇಸರ ಸಂಗತಿ ಎಂದರು.

ಜಗತ್ತಿನ ವ್ಯಾವಹಾರಿಕ ಭಾಷೆಯಾಗಿರುವ ಇಂಗ್ಲಿಷ್‌, ಕನ್ನಡಿಗರ ಮಾತೃಭಾಷೆಯಾಗಿರುವ ಕನ್ನಡ ಹಾಗೂ ದೇವ ಭಾಷೆಯಾಗಿರುವ ಸಂಸ್ಕೃತಕ್ಕೆ ಸ್ವಂತ ಲಿಪಿಯಿಲ್ಲ. ಸಂಸ್ಕೃತ ಭಾಷೆಗೆ ಲಿಪಿಕೊಟ್ಟ ಹೆಗ್ಗಳಿಕೆ ತುಳುವಿಗಿದೆ. ಅದೇ ರೀತಿ ಮಳಯಾಳಂ ಭಾಷೆಗೆ ತುಳು ಲಿಪಿಯನ್ನು ಬಳಸಲಾಗುತ್ತಿದೆ. ಇದು ತುಳುಭಾಷೆಗೆ ಇರುವ ಶಕ್ತಿ ಎಂದು ಅಭಿಪ್ರಾಯಪಟ್ಟರು.

ತುಳು ಅಕಾಡೆಮಿ ಈ ವರ್ಷ ರಜತ ಮಹೋತ್ಸವ ಆಚರಿಸುತ್ತಿದ್ದು, ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ತುಳು ವಿಶ್ವ ಸಮ್ಮೇಳನ ಪ್ರಮುಖವಾಗಿದೆ. ಹಾಗೆಯೇ ಅರ್ಧಕ್ಕೆ ನಿಂತಿರುವ ತುಳು ಭವನದ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ₹ 3.5 ಕೋಟಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ. ವಿಜಯ ಅಧ್ಯಕ್ಷತೆ ವಹಿಸಿದ್ದರು. ತುಳುಕೂಟದ ಜಯಕರ ಶೆಟ್ಟಿ ಇಂದ್ರಾಳಿ, ತುಳು ಚಿತ್ರನಟರಾದ ಮಂಜು ರೈ, ಮರ್ವಿನ್‌ ಶಿರ್ವ, ಜೆಸಿಐ ಉಡುಪಿ ಸಿಟಿಯ ಅಧ್ಯಕ್ಷೆ ತನುಜಾ ಮಾಬೆನ್‌, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಚೇತಕ್‌ ಪೂಜಾರಿ, ಎಂಜಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ತುಳು ಸಂಘದ ಕಾರ್ಯದರ್ಶಿ ವೀಕ್ಷಿತ್‌ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರನ್ನು ಸನ್ಮಾನ ಮಾಡಲಾಯಿತು. ತುಳು ಸಂಘದ ಸಂಚಾಲಕ ಡಾ. ಪುತ್ತಿ ವಸಂತ ಕುಮಾರ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT