ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ವರುಣನ ಆರ್ಭಟಕ್ಕೆ ಇಬ್ಬರು ಬಲಿ

ಕರಾವಳಿಯಲ್ಲಿ ಕೈರ್ ಚಂಡಮಾರುತದ ಅಬ್ಬರ: ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
Last Updated 25 ಅಕ್ಟೋಬರ್ 2019, 14:27 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ. ಕಾಪು ತಾಲ್ಲೂಕಿನ ಕುರ್ಕಾಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂಜಾರುಗಿರಿಯಲ್ಲಿ ಸುಲೋಚನಾ ಶೇರಿಗಾರ್ (42), ಹಾಗೂ ಕುಕ್ಕೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾಂತೆಜೆಡ್ಡು ಬಳಿ ರವೀಂದ್ರ ಕುಲಾಲ್‌ (38) ಮೃತಪಟ್ಟಿದ್ದಾರೆ.

ಸುಲೋಚನಾ ಶೇರಿಗಾರ್ ಶುಕ್ರವಾರ ಸಂಜೆ ದನಗಳಿಗೆ ಹುಲ್ಲು ತರಲು ಹೋಗಿದ್ದಾಗ ಶಂಕತೀರ್ಥ ಬಳಿಯ ತೋಡಿನಲ್ಲಿ ಕಾಲುಜಾರಿ ಬಿದ್ದು ಸಾವನ್ನಪಿದ್ದಾರೆ. ರಾತ್ರಿ ಶವ ಪತ್ತೆಯಾಗಿದೆ. ಮತ್ತೊಂದೆಡೆ ರವೀಂದ್ರ ಕುಲಾಲ್‌ ಭಾರಿ ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ರಿಕ್ಷಾವನ್ನು ರಸ್ತೆ ಬದಿ ನಿಲ್ಲಿಸಿ ಪರಿಚಯದ ದಿವಾಕರ ಶೆಟ್ಟಿ ಎಂಬುವರ ಮನೆಯ ಮುಂದಿನ ಛಾವಣಿ ಅಡಿ ನಿಂತಿದ್ದಾಗ, ಮರ ಬಿದ್ದು ಮೃತಪಟ್ಟಿದ್ದಾರೆ.

ಕೈರ್ ಚಂಡಮಾರುತ ಪ್ರಭಾವ:
ಅರಬ್ಬಿ ಸಮುದ್ರದಲ್ಲಿ ಕೈರ್ ಚಂಡಮಾರುತ ಎದ್ದಿದ್ದು, ಕರಾವಳಿಯ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಮೀನುಗಾರಿಕೆಗೆ ತೆರಳಿದ್ದರೆ ತಕ್ಷಣ ಮರಳುವಂತೆ ವಿಪತ್ತು ನಿರ್ವಹಣಾ ವಿಭಾಗ ಎಚ್ಚರಿಕೆ ನೀಡಲಾಗಿದೆ.

ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಕರಾವಳಿ ತೀರದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಾಗಲಿದ್ದು, 48 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 7.5 ಸೆ.ಮೀ ಮಳೆಯಾಗಿದೆ. ಉಡುಪಿಯಲ್ಲಿ 8.3, ಕುಂದಾಪುರದಲ್ಲಿ 8.6, ಕಾರ್ಕಳದಲ್ಲಿ 5.3 ಸೆ.ಮೀ ಮಳೆ ಬಿದ್ದಿದೆ. ಕಾಪು ಹಾಗೂ ಉಡುಪಿ ತಾಲ್ಲೂಕಿನ ಹಲವೆಡೆ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮರಗಳು ಉರುಳಿಬಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ಕಟಾವಿಗೆ ಬಂದಿದ್ದ ಭತ್ತದ ಜಮೀನು ಜಲಾವೃತಗೊಂಡಿದ್ದು ಅಪಾರ ನಷ್ಟ ಸಂಭವಿಸಿದೆ. ಭಾರಿ ಮಳೆಗೆ ಕೃಷ್ಣಮಠದ ರಥಬೀದಿ ಜಲಾವೃತಗೊಂಡಿದೆ. ಮಂಡಿಯುದ್ದ ನೀರು ನಿಂತಿದ್ದು, ಭಕ್ತರಿಗೆ ಸಮಸ್ಯೆಯಾಯಿತು.

ಶಾಲಾ ಕಾಲೇಜುಗಳಿಗೆ ರಜೆ:

ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅ.26ರಂದು ಶಾಲಾ–ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT