ಉಡುಪಿ: ಸರ್ಕಾರವು 2024–25ನೇ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ಉಡುಪಿ ಜಿಲ್ಲೆಗೂ ವಿಸ್ತರಿಸಿದ್ದು, ಸೆ. 2ರಿಂದ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಪ್ರಸ್ತುತ ಸಾರ್ವಜನಿಕರು ಸ್ಥಿರಾಸ್ತಿ ಇರುವ ವ್ಯಾಪ್ತಿಯ ಉಪನೋಂದಣಿ ಕಚೇರಿಯಲ್ಲಿ ಮಾತ್ರ ದಸ್ತಾವೇಜನ್ನು ನೋಂದಣಿ ಮಾಡಲು ಅವಕಾಶವಿದೆ. ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಗೊಳ್ಳುವ ಮೂಲಕ ದಸ್ತಾವೇಜನ್ನು ಸ್ಥಿರಾಸ್ತಿ ಇರುವ ಜಿಲ್ಲೆಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದರು.
ಈ ವ್ಯವಸ್ಥೆಯನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ 2011ರಲ್ಲಿ, ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ 2024ರ ಮಾರ್ಚ್‌ನಲ್ಲಿ ನೋಂದಣಿ ಕಾಯ್ದೆ 1908ರ ಕಲಂ (5) ಹಾಗೂ ಕಲಂ (6)ರ ಅಡಿಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಅಲ್ಲಿ ಈ ವ್ಯವಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣದಿಂದ ಉಡುಪಿ ಜಿಲ್ಲೆಯ ನೋಂದಣಿ ಉಪನೋಂದಣಿ ಕಚೇರಿಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಈ ವ್ಯವಸ್ಥೆಯು ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ನೋಂದಣಿಯಲ್ಲಿ ವಿಳಂಬವಾಗುತ್ತಿರುವ ಸಮಸ್ಯೆಯನ್ನೂ ಪರಿಹರಿಸಲಿದೆ ಎಂದು ಹೇಳಿದರು.
ಸಾರ್ವಜನಿಕರು ಸಮೀಪದ ಉಪನೋಂದಣಿ ಕಚೇರಿಯಲ್ಲಿ ದಸ್ತಾವೇಜನ್ನು ನೋಂದಾಯಿಸಬಹುದು. ಈ ಮೂಲಕ ನೋಂದಣಿ ಪ್ರಕ್ರಿಯೆ ಸುಲಭವಾಗುವುದಲ್ಲದೆ ಸಮಯ ಕೂಡ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಈ ವ್ಯವಸ್ಥೆಯಿಂದಾಗಿ ಕಚೇರಿಗಳಲ್ಲಿ ನೋಂದಣಿ ಕೆಲಸ ಸಮಾನವಾಗಿ ಹಂಚಿಕೆಯಾಗುವ ಮೂಲಕ, ಸಿಬ್ಬಂದಿ ಮೇಲಿನ ಕೆಲಸದ ಒತ್ತಡವೂ ಕಡಿಮೆಯಾಗಲಿದೆ. ಜೊತೆಗೆ ಕಚೇರಿಗಳಲ್ಲಿ ಜನದಟ್ಟಣೆಯೂ ಕಡಿಮೆಯಾಗಲಿದೆ ಎಂದರು.
ಸಾರ್ವಜನಿಕರು ತಮಗೆ ಹತ್ತಿರವಾಗುವ ಮತ್ತು ಸ್ಪಾಟ್ ಲಭ್ಯವಿರುವ ಕಚೇರಿಗಳನ್ನು ಆಯ್ಕೆ ಮಾಡಿಕೊಂಡು ದಸ್ತಾವೇಜನ್ನು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಹೇಳಿದರು.
18 ಲಕ್ಷ ಆರ್‌ಟಿಸಿ ಜೊತೆ ಆಧಾರ್ ಜೋಡಣೆ
ಪಹಣಿಗಳೊಂದಿಗೆ (ಆರ್‌ಟಿಸಿ) ಆಧಾರ್ ಜೋಡಣೆ ಮಾಡುವ ಕಾರ್ಯವು ನಡೆಯುತ್ತಿದ್ದು ಜಿಲ್ಲೆಯಲ್ಲಿ ಒಟ್ಟು 28 ಲಕ್ಷ ಆರ್‌ಟಿಸಿ ಇದ್ದು ಅದರಲ್ಲಿ 18 ಲಕ್ಷ ಆರ್‌ಟಿಸಿಯನ್ನು ಆಧಾರ್ ಜೊತೆಗೆ ಜೋಡಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪಹಣಿಗಳೊಂದಿಗೆ (ಆರ್‌ಟಿಸಿ) ಆಧಾರ್ ಜೋಡಣೆ ಮಾಡುವಾಗ ಒಟಿಪಿ ಅಗತ್ಯವಿರುತ್ತದೆ. ವಿದೇಶಗಳಲ್ಲಿ ನೆಲೆಸಿರುವ ಇಲ್ಲಿನವರು ಒಟಿಪಿ ನೀಡಲು ಮುಂದಾಗುತ್ತಿಲ್ಲ ಇದರಿಂದಲೂ ವಿಳಂಬವಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.