ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿಯಲ್ಲಿ ಅಥ್ಲೆಟಿಕ್ಸ್‌ ಅಲೆ

Published 24 ಸೆಪ್ಟೆಂಬರ್ 2023, 5:44 IST
Last Updated 24 ಸೆಪ್ಟೆಂಬರ್ 2023, 5:44 IST
ಅಕ್ಷರ ಗಾತ್ರ

ಮಂಗಳೂರು: ಅಭಿನ್ ದೇವಾಡಿಗ, ಧ್ರುವ ಬಲ್ಲಾಳ್‌, ಸುಶಾಂತ್, ಪ್ರತೀಕಾ, ಕೀರ್ತನಾ, ಶ್ರಾವ್ಯ, ಪ್ರತೀಕ್ ಪೂಜಾರಿ, ಅಖಿಲೇಶ್‌,  ವಿಖ್ಯಾತ್‌...

ಈಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್‌ ಕೂಟಗಳು ನಡೆದಾಗಲೆಲ್ಲ ಸಾಮಾನ್ಯವಾಗಿ ಕೇಳಿಬರುವ ಹೆಸರುಗಳು ಇವು. ಈ ಪೈಕಿ ಕೆಲವರು ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲೂ ಮಿಂಚುತ್ತಿದ್ದಾರೆ. ಪದಕ ಗೆದ್ದು ಸಂಭ್ರಮಿಸುತ್ತಿದ್ದಾರೆ. ಹಲವು ಮಂದಿ ಪದಕಗಳನ್ನು ಗೆಲ್ಲುವ ‘ಟ್ರ್ಯಾಕ್‌’ನಲ್ಲಿ ಭವಿಷ್ಯ ರೂಪಿಸುತ್ತಿದ್ದಾರೆ. 

ಇವರೆಲ್ಲರೂ ಉಡುಪಿ ಜಿಲ್ಲೆಯವರು. ಬೆಂಗಳೂರು ಕೇಂದ್ರೀಕೃತವಾಗಿದ್ದ ಅಥ್ಲೆಟಿಕ್ಸ್‌ ಕೆಲವು ವರ್ಷಗಳಿಂದ ಉಡುಪಿಯಲ್ಲಿ ಸದ್ದು ಮಾಡುತ್ತಿದೆ. ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಬೆವರು ಸುರಿಸುತ್ತಿರುವ ಅಥ್ಲೀಟ್‌ಗಳು ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ಪದಕಗಳನ್ನು ಗೆಲ್ಲುತ್ತಿದ್ದಾರೆ. ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಇಂಥ ಬೆಳವಣಿಗೆಗೆ ಪ್ರಮುಖ ಕಾರಣವಾದದ್ದು ಸಿಂಥೆಟಿಕ್ ಟ್ರ್ಯಾಕ್‌, ಖೇಲೊ ಇಂಡಿಯಾ ಯೋಜನೆ ಮತ್ತು ಅಥ್ಲೆಟಿಕ್‌ ಕ್ಲಬ್‌ಗಳ ಪ್ರಯತ್ನ.  

ಕರಾವಳಿಯ ವಾತಾವರಣ ಟ್ರ್ಯಾಕ್‌ನಲ್ಲಿ ಸಾಧನೆ ಮಾಡಲು ಪೂರಕವಾಗಿದೆ. ಅಥ್ಲೀಟ್‌ಗಳ ಅರ್ಪಣಾ ಭಾವ ಪೋಷಕರ ಪ್ರೇರಣೆ ಮತ್ತು ಸರ್ಕಾರದ ಯೋಜನೆಗಳಿಂದ ಅನುಕೂಲವಾಗಿದೆ.
ಸಮರ್ಥ್ ಸದಾಶಿವ, ಖೇಲೊ ಇಂಡಿಯಾ ಕೋಚ್‌

2028ರ ಒಲಿಂಪಿಕ್ಸ್‌ ವೇಳೆಗೆ ಕ್ರೀಡಾ ಕ್ಷೇತ್ರದಲ್ಲಿ ಭಾರತ ಪ್ರಮುಖ 10 ರಾಷ್ಟ್ರಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕರ್ನಾಟಕವೂ ಸೇರಿ 7 ರಾಜ್ಯಗಳಲ್ಲಿ ₹ 14.30 ಕೋಟಿ ವೆಚ್ಚದಲ್ಲಿ 143 ಖೇಲೊ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ 2021ರಲ್ಲಿ ನಿರ್ಧರಿಸಿತ್ತು. ಯೋಜನೆಯಡಿ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ವಿವಿಧ ಕ್ರೀಡೆಗಳಿಗೆ ಕೇಂದ್ರಗಳು ಲಭಿಸಿವೆ. ಕರ್ನಾಟಕದಲ್ಲಿ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅಥ್ಲೆಟಿಕ್ಸ್‌ಗೆ ಅವಕಾಶ ನೀಡಲಾಗಿದೆ.

ಅಜ್ಜರಕಾಡು ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ 2012ರಲ್ಲಿ ಸಿಂಥೆಟಿಕ್ ಸೌಲಭ್ಯ ಒದಗಿಸಿದ ನಂತರ ಉಡುಪಿ ಜಿಲ್ಲೆಯ ಅಥ್ಲೆಟಿಕ್ಸ್‌ನಲ್ಲಿ ನವೋದಯ ಆಗಿತ್ತು. ಅಥ್ಲೆಟಿಕ್ಸ್‌ ತರಬೇತಿಗೆಂದೇ ಮೀಸಲಾಗಿದ್ದ ಕ್ಲಬ್‌ಗಳಿಗೆ ಹುರುಪು ತುಂಬಿತು. ಖೇಲೊ ಇಂಡಿಯಾ ಕೇಂದ್ರ ಆರಂಭವಾದ ಮೇಲಂತೂ ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಹಬ್ಬದ ವಾತಾವರಣ ಉಂಟಾಯಿತು. 

ಬೆಂಗಳೂರು ಬಿಟ್ಟರೆ ಅತ್ಯುತ್ತಮ ಸೌಲಭ್ಯ ಉಡುಪಿಯಲ್ಲಿ ಇದೆ. ಸ್ಪ್ರಿಂಟರ್‌ಗಳ ದೊಡ್ಡದೊಂದು ತಂಡವೇ ಇಲ್ಲಿದ್ದು ಅವರು ಹೊಸ ತಲೆಮಾರಿನ ಅಥ್ಲೀಟ್‌ಗಳನ್ನು ಬೆಳೆಸಲು ಪ್ರಯತ್ನ ಮಾಡುತ್ತಿದ್ದಾರೆ.
ಶಾಲಿನಿ ರಾಜೇಶ್ ಶೆಟ್ಟಿ, ಅಥ್ಲೆಟಿಕ್ ಕೋಚ್‌

'ದಶಕದ ಹಿಂದೆ ಉಡುಪಿಯಲ್ಲಿ ಸುಸಜ್ಜಿತ ಕ್ರಿಡಾಂಗಣ ಇರಲಿಲ್ಲ. ಅಜ್ಜರಕಾಡು ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಆದ ಮೇಲೆ ಅಥ್ಲೆಟಿಕ್ಸ್‌ನಲ್ಲಿ ಹೊಸ ಅಧ್ಯಾಯ ತೆರೆಯಿತು. ಕಾಲೇಜುಗಳ ಕ್ರೀಡಾಪಟುಗಳು ಕೂಡ ಅಲ್ಲಿ ಅಭ್ಯಾಸ ಮಾಡಿ ಪದಕಗಳನ್ನು ಗೆಲ್ಲತೊಡಗಿದರು’ ಎಂದು ಸ್ಪ್ರಿಂಟ್‌ ತಾರೆ ಧ್ರುವ ಬಲ್ಲಾಳ್ ಸೇರಿದಂತೆ ಕಳೆದ ಬಾರಿ ಏಳು ಮಂದಿಯನ್ನು ರಾಷ್ಟ್ರೀಯ ಕ್ರೀಡಾಕೂಟಕ್ಕೆ ತಯಾರು ಮಾಡಿರುವ ಎಂಜಿಎಂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸತೀಶ್‌ ಹೆಗ್ಡೆ ಹೇಳಿದರು. ‌

‘ಡಿವೈಇಎಸ್‌ನಿಂದ ಜಿಮ್ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ. ಖಾಸಗಿಯಾಗಿಯೂ ಇಲಾಖೆಯ ಕಡೆಯಿಂದಲೂ ಸಮರ್ಥ ಕೋಚ್‌ಗಳು ಇದ್ದಾರೆ. ಅಥ್ಲೀಟ್‌ಗಳ ಪೋಷಕರು ಹೆಚ್ಚು ಆಸಕ್ತಿಯಿಂದ ಮಕ್ಕಳನ್ನು ತರಬೇತಿಗೆ ಕಳುಹಿಸುತ್ತಿದ್ದಾರೆ. ಇದೆಲ್ಲವೂ ಜಿಲ್ಲೆಯಲ್ಲಿ ಅಥ್ಲೆಟಿಕ್ಸ್‌ ಬೆಳೆಯಲು ಕಾರಣವಾಗಿದೆ’ ಎಂಬುದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಷನ್ ಶೆಟ್ಟಿ ಅಭಿಪ್ರಾಯ.

ಮಂಗಳೂರಿನಲ್ಲಿ 30 ಮಂದಿ ಅಭ್ಯಾಸ

ಮಂಗಳೂರಿನ ಖೇಲೊ ಇಂಡಿಯಾ ಅಥ್ಲೆಟಿಕ್‌ ಕೇಂದ್ರದಲ್ಲಿ 12ರಿಂದ 18 ವರ್ಷದೊಳಗಿನ ತಲಾ 15 ಬಾಲಕ ಮತ್ತು ಬಾಲಕಿಯರು ಅಭ್ಯಾಸ ಮಾಡುತ್ತಿದ್ದಾರೆ. ‘ಮಂಗಳೂರಿನಲ್ಲೂ ತರಬೇತಿ ಚೆನ್ನಾಗಿ ನಡೆಯುತ್ತಿದೆ. ಖೇಲೊ ಇಂಡಿಯಾ ಕೇಂದ್ರ ಆರಂಭವಾದ ನಂತರ ಒಟ್ಟು 8 ರಾಷ್ಟ್ರೀಯ ರಾಷ್ಟ್ರೀಯ ಪದಕಗಳು ಲಭಿಸಿವೆ’ ಎಂದು ಕೋಚ್ ಬಕ್ಷಿತ್ ಸಾಲಿಯಾನ್ ತಿಳಿಸಿದರು.

ಈಚೆಗೆ ನಡೆದ ರಾಜ್ಯ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ ಉಡುಪಿಯ ಪುರುಷರು

ಕ್ರೀಡಾಪಟು;ಸ್ಪರ್ಧೆ;ಪದಕ;ಸಾಧನೆ

ಅಭಿನ್ ದೇವಾಡಿಗ;200ಮೀ;ಚಿನ್ನ;20.90ಸೆ

ಅಮರನಾಥ್‌;400ಮೀ ಹರ್ಡಲ್ಸ್‌;ಚಿನ್ನ;52.95ಸೆ

ಪ್ರಣಾಮ್‌ ಶೆಟ್ಟಿ;400ಮೀ ಹರ್ಡಲ್ಸ್‌;ಕಂಚು;54.52ಸೆ

ಸುಶಾಂತ್‌;110 ಮೀ ಹರ್ಡಲ್ಸ್‌;ಚಿನ್ನ;14.6ಸೆ

ಮಹಿಳಾ ವಿಭಾಗದಲ್ಲಿ ಪದಕ ವಿಜೇತರು

ಕ್ರೀಡಾಪಟು;ಸ್ಪರ್ಧೆ;ಪದಕ;ಸಾಧನೆ 

ಪ್ರತೀಕಾ;100ಮೀ;ಕಂಚು;14.2ಸೆ

ಕೀರ್ತನಾ;200ಮೀ;ಚಿನ್ನ;24.68ಸೆ

ಮಾಧುರ್ಯ;ಡಿಸ್ಕಸ್ ಥ್ರೋ;ಬೆಳ್ಳಿ;39.65ಮೀ

ಕರಿಷ್ಮಾ ಸನಿಲ್‌;ಜಾವೆಲಿನ್‌ ಥ್ರೋ;ಚಿನ್ನ;49.88ಮೀ

ಶ್ರಾವ್ಯಾ;ಜಾವೆಲಿನ್‌;ಬೆಳ್ಳಿ;42.02ಮೀ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT