ಉಡುಪಿ ಜಿಲ್ಲೆಯ ಮಣಿಪುರದ ಗದ್ದೆಯೊಂದರಲ್ಲಿ ನೇಜಿ ತೆಗೆಯುತ್ತಿರುವ ಕಾರ್ಮಿಕರು
ಬ್ರಹ್ಮಾವರ ವ್ಯಾಪ್ತಿಯಲ್ಲಿ ನೇಜಿ ನೆಟ್ಟ ಕಾರ್ಮಿಕರು
ಕಾಪು ವ್ಯಾಪ್ತಿಯ ಗದ್ದೆಯೊಂದರಲ್ಲಿ ಭತ್ತದ ನಾಟಿ ಕಾರ್ಯ ನಡೆಯಿತು

ಈ ಬಾರಿ ಬಿಸಿಲು ಮಳೆಯ ವಾತಾವರಣವಿರುವುದು ಭತ್ತದ ಕೃಷಿಗೆ ಅಷ್ಟು ಒಳ್ಳೆಯದಲ್ಲ. ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ
ರವೀಂದ್ರ ಗುಜ್ಜರಬೆಟ್ಟು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ
ಅವಧಿಗಿಂತ ಮೊದಲೇ ಮಳೆ ಆರಂಭವಾಗಿರುವುದರಿಂದ ಈ ಸಲ ಬಯಲು ಗದ್ದೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಚಾಪೆ ನೇಜಿ ನೆಡಲು ಸಾಧ್ಯವಾಗದೆ ಒಡಿಶಾದ ಕಾರ್ಮಿಕರನ್ನು ಬಳಸಿ ಕೈನಾಟಿ ಮಾಡಿಸಿದ್ದೇವೆ
ಶ್ರೀನಿವಾಸ ಆಚಾರ್ಯ ಕೊರಂಗ್ರಪಾಡಿ ರೈತಪ್ರಾಯೋಗಿಕಗಾಗಿ ಬಿತ್ತನೆ ಬೀಜ ವಿತರಣೆ
ಸಹ್ಯಾದ್ರಿ ಬ್ರಹ್ಮ ಸಹ್ಯಾದ್ರಿ ಪಂಚಮುಖಿ ಹಾಗೂ ಸಹಾದ್ರಿ ಕೆಂಪು ಮುಕ್ತಿ ತಳಿಯ ಭತ್ತದ ಬಿತ್ತನೆ ಬೀಜಗಳನ್ನು ರೈತರಿಗೆ ಉಚಿತವಾಗಿ ಪ್ರಾಯೋಗಿಕವಾಗಿ ವಿತರಿಸಲಾಗಿದೆ. ಕೇವಲ ಎಂಒ4 ತಳಿಯನ್ನೇ ಆಶ್ರಯಿಸುವ ಬದಲು ಇತರ ತಳಿಯ ಭತ್ತದ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ. ಈ ಬಾರಿ ಬೈಂದೂರು ವ್ಯಾಪ್ತಿಯಲ್ಲಿ ಕೆಲವೆಡೆ ನೆರೆಯಿಂದ ಭತ್ತದ ಕೃಷಿಗೆ ಹಾನಿಯಾಗಿರುವುದು ಬಿಟ್ಟರೆ ಬೇರೆಲ್ಲೂ ಹಾನಿಯಾಗಿಲ್ಲ ಎಂದೂ ಹೇಳಿವೆ.
ಕಾರ್ಕಳ ತಾಲ್ಲೂಕಿನ ಈದು ಬಲ್ಯೋಟ್ಟು ಪ್ರದೇಶದಲ್ಲಿ ಮಾಡಲಾದ ಟ್ರೇ ನಾಟಿ
ಹೊರ ಜಿಲ್ಲೆಯ ಕಾರ್ಮಿಕರು
ಜಿಲ್ಲೆಯಲ್ಲಿ ಸಾಂಪ್ರದಾಯಿಕ ನಾಟಿ ಮಾಡುವ ಸ್ಥಳೀಯ ಮಹಿಳೆಯರ ಲಭ್ಯತೆ ಕಡಿಮೆ ಇರುವ ಕಾರಣ ಗಂಗಾವತಿ ಸೇರಿದಂತೆ ಹೊರ ಜಿಲ್ಲೆಯ 25 ರಿಂದ 30 ಜನರ ತಂಡ ಕೆಲವು ಕಡೆಗಳಲ್ಲಿ ನಾಟಿ ಮಾಡುತ್ತಿದ್ದು ಅವರಿಗೆ ಸಾಕಷ್ಟು ಬೇಡಿಕೆ ಇದೆ. ಇವರು ಎಕರೆಗೆ ₹4500 ಸಂಬಳ ಪಡೆಯುತ್ತಾರೆ ಎಂದು ರೈತರು ಹೇಳುತ್ತಾರೆ.
ಬೈಂದೂರಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದ ರೈತ
ನೆರೆಯಿಂದ ರೈತರಿಗೆ ನಷ್ಟ
ಬೈಂದೂರು: ಈ ಬಾರಿ ಅವಧಿಪೂರ್ವ ಮುಂಗಾರು ಪ್ರಾರಂಭವಾದ್ದರಿಂದ ಹೆಚ್ಚಿನ ರೈತರು ನೇಜಿಯನ್ನು ನೆಟ್ಟಿದ್ದರು. ಆದರೆ ಮೃಗಶಿರಾ ಮಳೆಯ ಆರ್ಭಟದಿಂದಾಗಿ ನಾವುಂದ ಸಾಲ್ಗುಡ ಮುಂತಾದಲ್ಲಿ ನೆರೆ ಸೃಷ್ಟಿಯಾಗಿ ಕೃಷಿ ಭೂಮಿ ಜಲಾವೃತವಾಗಿ ಗದ್ದೆಯಲ್ಲಿ ಬಿತ್ತಿದ ಭತ್ತದ ಬೀಜ ಕೊಚ್ಚಿ ಹೋಗಿತ್ತು. ನೂರಕ್ಕೂ ಅಧಿಕ ಎಕರೆ ಕೃಷಿ ಭೂಮಿಯಲ್ಲಿದ್ದ ಗೊಬ್ಬರ ಮನೆ ಅಂಗಳದಲ್ಲಿ ಹಾಕಿದ ಸಸಿ ಮಡಿ ನೀರಿನಲ್ಲಿ ತೇಲಿ ಹೋಗಿ ರೈತರಿಗೆ ನಷ್ಟ ಉಂಟಾಗಿದೆ.
ಭರದಿಂದ ಸಾಗಿದ ನಾಟಿ ಕಾರ್ಯ
ಕಾರ್ಕಳ: ತಾಲ್ಲೂಕಿನಲ್ಲಿ ಸುಮಾರು 6800 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೇಸಾಯದ ಗುರಿ ಹೊಂದಲಾಗಿದ್ದು ಕೃಷಿ ಇಲಾಖೆಯ ವತಿಯಿಂದ 210 ಕ್ವಿಂಟಲ್ ನಷ್ಟು ಎಂಒ-4 ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಈತನಕ 630 ಹೆಕ್ಟೇರ್ ಪ್ರದೇಶದಲ್ಲಿ ಬೀಜ ಬಿತ್ತನೆಯಾಗಿ ನಾಟಿ ಕಾರ್ಯ ನಡೆದಿದೆ. ಈದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಯೊಟ್ಟು ಮೊದಲಾದೆಡೆ ಅಧಿಕ ಮಳೆಯ ಕಾರಣ ಮುಂಗಾರು ಹಂಗಾಮಿನಲ್ಲಿ ನಾಟಿ ಕಾರ್ಯಕ್ಕೆ ರೈತರು ಹಿಂದೇಟು ಹಾಕುತ್ತಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಅವರು ಹೆಚ್ಚು ಬೆಳೆ ತೆಗೆಯುತ್ತಾರೆ.