14 ವರ್ಷದೊಳಗಿನವರ ವಿಭಾಗ: ಉಡುಪಿ ಚಾಂಪಿಯನ್‌

7
ರಾಜ್ಯಮಟ್ಟದ ಟೇಬಲ್ ಟೆನಿಸ್ ಟೂರ್ನಿಯ ಸಮಾರೋಪ

14 ವರ್ಷದೊಳಗಿನವರ ವಿಭಾಗ: ಉಡುಪಿ ಚಾಂಪಿಯನ್‌

Published:
Updated:
Deccan Herald

ಉಡುಪಿ: ಇಲ್ಲಿನ ಕಲ್ಯಾಣಪುರದ ಮಿಲಾಗ್ರಿಸ್‌ ಶಾಲೆಯಲ್ಲಿ ಸೋಮವಾರ ಮುಕ್ತಾಯವಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ಟೇಬಲ್ ಟೆನಿಸ್ ಟೂರ್ನಿಯಲ್ಲಿ 14 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಉಡುಪಿ ತಂಡ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿದೆ.‌

ರಾಜ್ಯಮಟ್ಟದ ಸ್ಪರ್ಧೆಯಲ್ಲಿ 32 ತಂಡಗಳ 686 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಅಂತಿಮವಾಗಿ 20 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶಿರಸಿ ದ್ವಿತೀಯ, ಮೈಸೂರು ತೃತೀಯ, ಚಿಕ್ಕಮಗಳೂರು ನಾಲ್ಕನೇ ಸ್ಥಾನ ಪಡೆಯಿತು.

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ಪ್ರಥಮ, ಬೆಂಗಳೂರು ದಕ್ಷಿಣ ದ್ವಿತೀಯ ಸ್ಥಾನ, ಬೆಳಗಾವಿ ತೃತೀಯ ಸ್ಥಾನ ಪಡೆದುಕೊಂಡಿತು. 17ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಪ್ರಥಮ, ಉಡುಪಿ ದ್ವಿತೀಯ ಸ್ಥಾನ ಪಡೆದರೆ, ಮೈಸೂರು ತೃತೀಯ ಸ್ಥಾನ ಪಡೆಯಿತು. ಇದೇ ವಿಭಾಗದ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಪ್ರಥಮ, ಬೆಂಗಳೂರು ಉತ್ತರ ದ್ವಿತೀಯ ಹಾಗೂ ಉಡುಪಿ ಮೂರನೇ ಸ್ಥಾನ ಪಡೆಯಿತು.‌

ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಉನ್ನತ ಸಾಧನೆ ಮಾಡಿದ ಬಹಳಷ್ಟು ಮಂದಿ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.

ಸಾಧನೆಗೆ ಕ್ರಮಬದ್ಧವಾದ ಅಭ್ಯಾಸ ಅಗತ್ಯ. ಸಾಧಿಸುವ ಛಲ, ಗುರಿ ಇದ್ದರೆ ಯಶಸ್ಸು ಸಿಗುತ್ತದೆ. ಕ್ರೀಡಾಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯಲು ಹೆಚ್ಚಿನ ಅಭ್ಯಾಸ, ನಿರಂತರ ಶ್ರಮ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ 17ವರ್ಷದೊಳಗಿನವರ ರಾಷ್ಟ್ರೀಯ ರ‌್ಯಾಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೇಬಲ್ ಟೆನಿಸ್ ಪಟು ಅನರ್ಘ್ಯ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮಿಲಾಗ್ರಿಸ್ ಸಮೂಹ ಸಂಸ್ಥೆ ಸಂಚಾಲಕ ಡಾ.ಲಾರೆನ್ಸ್ ಡಿಸೋಜಾ, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವೆರೊನಿಕಾ ಕರ್ನೇಲಿಯೋ, ಕಲ್ಯಾಣಪುರ ರೋಟರಿ ಕ್ಲಬ್ ಅಧ್ಯಕ್ಷ ಬ್ರಾಯೆನ್ ಡಿಸೋಜಾ, ಡಾ.ನೇರಿ ಕರ್ನೆಲಿಯೋ, ಫೆಲ್ಸಿಯಾನ ಲೂಯಿಸ್, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಧುಕರ, ಶಾಲಾ ಮುಖ್ಯೋಪಾಧ್ಯಾಯ ಲ್ಯಾನ್ಸಿ ಫೆರ್ನಾಂಡಿಸ್, ಎಲ್‌ಐಸಿ ವಿಭಾಗೀಯ ಆಟೋಟ ಸಮಿತಿ ಕಾರ್ಯದರ್ಶಿ ಶೇಖರ ಪೂಜಾರಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !