ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾವೃತಗೊಂಡ ನೂರಾರು ಎಕರೆ ಕೃಷಿಭೂಮಿ

ಕಾಮಗಾರಿ ಪೂರ್ಣವಾಗುವ ಮೊದಲೇ ಕುಸಿದ ವಕ್ವಾಡಿ ಪರಿಸರದ ವಾರಾಹಿ ಎಡದಂಡೆ ಕಾಲುವೆ
Last Updated 7 ಜುಲೈ 2022, 4:19 IST
ಅಕ್ಷರ ಗಾತ್ರ

ಕುಂದಾಪುರ: ತಾಲ್ಲೂಕಿನ ಕಾಳಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಾವರದಿಂದ ವಕ್ವಾಡಿ, ಕುಂಭಾಸಿ, ಮಲ್ಯಾಡಿ ಮೂಲಕ ವಕ್ವಾಡಿ ನವನಗರ ಪರಿಸರದಲ್ಲಿ ಹಾದು ಹೋಗುವ ವಾರಾಹಿ ಎಡದಂಡೆ ಮುಖ್ಯ ಕಾಲುವೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕಾಲುವೆಯ ಇಕ್ಕೆಲಗಳಲ್ಲಿ ಕಟ್ಟಿರುವ ಕಾಂಕ್ರೀಟ್ ತಡೆಗೋಡೆಗಳು ಕುಸಿತಗೊಂಡಿದೆ.

ಸ್ಥಳೀಯಾಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ ಎನ್ನುವ ಕೂಗುಗಳು ಈ ಮೊದಲೇ ಕೇಳಿ ಬಂದಿತ್ತು. ಕಾಮಗಾರಿಯ ಆರಂಭದಲ್ಲಿ ಕಾಮಗಾರಿಗಾಗಿ ತೆಗೆದಿದ್ದ ಮಣ್ಣು ಸಾಗಾಟ ಮಾಡುವುದರ ಹಾಗೂ ಗ್ರಾಮ ನೈರ್ಮಲ್ಯವನ್ನು ಹಾಳು ಮಾಡುತ್ತಿರುವ ಕುರಿತು ಗ್ರಾಮಸ್ಥರು ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ಇಲ್ಲಿನ ಪರಿಸರದ ಮಣ್ಣಿನ ಸಾಂದ್ರತೆಯ ಕುರಿತು ಸಮಗ್ರವಾಗಿ ಅಧ್ಯಯನ ನಡೆಸದೆ ಅವೈಜ್ಞಾನಿಕ ಕಾಮಗಾರಿ ನಡೆಸಿರುವುದೇ ಕಾಲುವೆ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಕಾಮಗಾರಿ ನಡೆಸುವ ವೇಳೆ ಹಲವು ಕಡೆ ಗ್ರಾಮದಲ್ಲಿ ಇದ್ದ ಅನಾದಿ ಕಾಲದ ನೀರು ಹರಿಯುವ ತೋಡುಗಳನ್ನು ಮುಚ್ಚಿದ್ದರಿಂದಾಗಿ ಈ ಬಾರಿಯ ಮಳೆ ನೀರು ಮೇಲಕ್ಕೆ ಹರಿದು ಉಂಟಾಗಿರುವ ನೆರೆಯ ನೀರು ಹಾಗೂ ಶೇಡಿ ಮಣ್ಣು ಕೃಷಿಭೂಮಿಗೆ ನುಗ್ಗಿ ಅಪಾರ ಹಾನಿಯುಂಟು ಮಾಡಿದೆ. ವಕ್ವಾಡಿ ಗ್ರಾಮದ ಇಂಬುಡುಕುಂದು, ಹೆಗ್ಗಾರಬೈಲು, ಕಾಸನಗುಂದು, ದ್ಯಾಸಮನೆ ಬೈಲು, ಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟು ಸೇರಿದಂತೆ ಇನ್ನಿತರ ಪರಿಸರದ ನೂರಾರು ಎಕರೆ ಕೃಷಿ ಭೂಮಿಗಳಲ್ಲಿನ ಬೆಳೆಗಳಿಗೆ ನೆರೆಯಿಂದ ಭಾರಿ ಪ್ರಮಾಣದ ಹಾನಿಯಾಗಿದೆ. ವಕ್ವಾಡಿ ಹೊಳೆ ಸಾಲಿನ ದಂಡೆಗಳು ಒಡೆದು ಕೃಷಿಭೂಮಿಗಳು ಜಲಾವೃತಗೊಂಡು ಹಾನಿಯಾಗಿದೆ.

ಹೊಳೆಯಲ್ಲಿನ ಹೂಳು ಎತ್ತಲು ಆಗ್ರಹ

ವಕ್ವಾಡಿ ಹೊಳೆ ಸಾಲಿನಲ್ಲಿ ಅನೇಕ ವರ್ಷಗಳಿಂದ ಹೂಳು ತೆಗೆಯದೇ ಇರುವುದರಿಂದ ನೆರೆ ನೀರು ತುಂಬಿ ಕೃಷಿಭೂಮಿಗಳು ಜಲಾವೃತಗೊಂಡಿದೆ. ಗಿಡಗಂಟಿಗಳು ತುಂಬಿ ನೀರು ಹರಿಯುವ ತೋಡುಗಳು ಮುಚ್ಚಲ್ಪಟ್ಟಿದ್ದು ವಕ್ವಾಡಿ ಕಿರು ಸೇತುವೆಯೂ ಅಪಾಯದಲ್ಲಿದೆ. ಸೇತುವೆ ಸಮೀಪ ನಿರ್ಮಿಸಿರುವ ಕುಡಿಯುವ ನೀರಿನ ಬಾವಿಯ ನಿರ್ಮಾಣ ಕಾರ್ಯದ ವೇಳೆ ತೆಗೆದು ಮಣ್ಣುಗಳಿಗೆ ಸೂಕ್ತ ವ್ಯವಸ್ಥೆ ಮಾಡದೆ ಇದ್ದುದರಿಂದ, ಆ ಮಣ್ಣು ಮಳೆ ನೀರಿನೊಂದಿಗೆ ಕೃಷಿಭೂಮಿಯ ಪಾಲಾಗಿದೆ ಎನ್ನುತ್ತಾರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸತೀಶ್ ಶೆಟ್ಟಿ ವಕ್ವಾಡಿ.

ಕ್ರಮಕ್ಕೆ ಒತ್ತಾಯ

ಸ್ಥಳೀಯಾಡಳಿತವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವ ಹಾಗೂ ಗ್ರಾಮಸ್ಥರಿಗೆ ಆಗುತ್ತಿರುವ ವರಾಹಿ ಕಾಮಗಾರಿಯ ಸಮಸ್ಯೆಗಳ ಕುರಿತು ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮ ಸಭೆಗಳಲ್ಲಿ ಬಂದ ದೂರು ಹಾಗೂ ಪಂಚಾಯಿತಿ ನಿರ್ಣಯಗಳನ್ನು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ಕ್ರಮಕ್ಕೆ ಒತ್ತಾಯಿಸಲಾಗಿದೆ ಎಂದು ಕಾಳಾವರ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT