ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಬೇಸಗೆ ಮುನ್ನವೇ ‘ಜೀವಜಲ’ ಸಂಕಟ

ಗ್ರಾಮೀಣ ಭಾಗಗಳಲ್ಲಿ ಕಾಣಿಸಿಕೊಂಡ ಕುಡಿಯುವ ನೀರಿನ ಸಮಸ್ಯೆ
Published 19 ಫೆಬ್ರುವರಿ 2024, 6:58 IST
Last Updated 19 ಫೆಬ್ರುವರಿ 2024, 6:58 IST
ಅಕ್ಷರ ಗಾತ್ರ

ಉಡುಪಿ: ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಆತಂಕ ಎದುರಾಗಿದೆ. ಸದ್ಯ ಸಮಸ್ಯೆ ಗಂಭೀರವಾಗಿಲ್ಲದಿದ್ದರೂ ಮಾರ್ಚ್‌, ಏಪ್ರಿಲ್‌ನಲ್ಲಿ ಮಳೆಯಾಗದಿದ್ದರೆ ಈ ಬಾರಿ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ. ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಡುವರಿ ಗ್ರಾಮದಲ್ಲಿ 1,308 ಕುಟುಂಬ, ಯಡ್ತರೆ ಗ್ರಾಮದಲ್ಲಿ 1,463 ಕುಟುಂಬ, ಬೈಂದೂರು ಹಾಗೂ ತಗ್ಗರ್ಸೆ ಗ್ರಾಮಗಳಲ್ಲಿ 1,070 ಕುಟುಂಬಗಳು ಸೇರಿ ತಾಲ್ಲೂಕಿನಲ್ಲಿ 3,841 ಕುಟುಂಬಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 16 ಕೊಳವೆಬಾವಿ, 19 ಸಾಮಾನ್ಯ ಬಾವಿ ಹಾಗೂ 9 ಓವರ್ ಹೆಡ್ ಟ್ಯಾಂಕ್ ನೀರಿನ ಮೂಲ ಇದ್ದರೂ ನೀರಿನ ಅಭಾವ ಉಂಟಾಗಿದೆ. ಕುಡಿಯುವ ನೀರಿಗೆ 2023-24ರಲ್ಲಿ ₹1.25 ಲಕ್ಷ ಅನುದಾನ ಬಂದಿದ್ದು ವಿನಿಯೋಗಿಸಲಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದು ಟೆಂಡರ್ ಕರೆಯಲಾಗುವುದು ಎಂದು ಬೈಂದೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸೂರ್ಯಕಾಂತ್ ಖಾರ್ವಿ ತಿಳಿಸಿದರು.

ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಕೊರತೆ ಇದ್ದರೂ ಸರ್ಕಾರ ಬೈಂದೂರು ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡದೆ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಜೆಯಲ್ಲಿ ಭರ್ತಿ ನೀರು:

ಉಡುಪಿ, ಮಣಿಪಾಲ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಹಿರಿಯಡಕ ಸಮೀಪದ ಬಜೆ ಜಲಾಶಯ ಈ ವರ್ಷ ಬಹುತೇಕ ಭರ್ತಿಯಾಗಿದೆ. 6.19 ಮೀಟರ್ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ 6.10 ಮೀಟರ್ ನೀರು ಸಂಗ್ರಹವಿದ್ದು ಈಗ ಲಭ್ಯವಿರುವ ನೀರನ್ನು ಮೇ.15ರವರೆಗೂ ಸಾರ್ವಜನಿಕರಿಗೆ ಪೂರೈಕೆ ಮಾಡಬಹುದು ಎನ್ನುತ್ತಾರೆ ನಗರಸಭೆ ಪೌರಾಯುಕ್ತ ರಾಯಪ್ಪ.

ಹಿಂದಿನ ಕೆಲವು ವರ್ಷಗಳಲ್ಲಿ ಕಾಡಿದ ನೀರಿನ ಸಮಸ್ಯೆಯಿಂದ ಈ ವರ್ಷ ಬಜೆ ಜಲಾಶಯದ ನೀರನ್ನು ಎಚ್ಚರಿಕೆಯಿಂದ ಬಳಕೆ ಮಾಡಲಾಗುತ್ತಿದೆ. ನೀರಿನ ರೇಷನಿಂಗ್ ಅವಧಿಯನ್ನು 1 ಗಂಟೆ ಕಡಿತಗೊಳಿಸಲಾಗಿದ್ದು, ಅಗತ್ಯಬಿದ್ದರೆ ಕಡಿತದ ಅವಧಿ ಹೆಚ್ಚಿಸಲಾಗುವುದು.

ಪರ್ಯಾಯವಾಗಿ ನೀರಿನ ಮೂಲಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ನಗರಸಭೆ ಅಧೀನದಲ್ಲಿರುವ 22 ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಲು ಸೂಚಿಸಲಾಗಿದೆ. 11 ಕೊಳವೆ ಬಾವಿಗಳನ್ನು ಸುಸ್ಥಿತಿಯಲ್ಲಿ ಇರಿಸಲಾಗಿದೆ. ಬಜೆಯಲ್ಲಿ ನೀರು ಖಾಲಿಯಾದರೆ ಜಲಾಶಯದ ಪಾತ್ರದ ದೈತ್ಯ ಗುಂಡಿಗಳಲ್ಲಿ ಸಂಗ್ರಹವಾಗುವ ನೀರನ್ನು ಜಲಾಶಯಕ್ಕೆ ಪಂಪಿಂಗ್ ಮಾಡಲಾಗುವುದು. ಅಗತ್ಯಬಿದ್ದರೆ ಟ್ಯಾಂಕರ್‌ಗಳ ಮೂಲಕವೂ ನೀರು ಪೂರೈಕೆ ಮಾಡಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು.

ಸದ್ಯ ಆತಂಕ ಇಲ್ಲ:

ಬ್ರಹ್ಮಾವರ ಭಾಗದಲ್ಲಿ ಈ ವರ್ಷ ಬೇಸಿಗೆಯಲ್ಲಿ ಕುಡಿಯುವ‌ ನೀರಿನ‌ ಸಮಸ್ಯೆ ಕಳೆದ ಬಾರಿಗಿಂತ ಹೆಚ್ಚಾಗುವ ಆತಂಕ‌ ಇದೆ. ಸಮಸ್ಯೆಯ ಗಂಭೀರತೆ ಅರಿತಿರುವ ತಾಲ್ಲೂಕು ಆಡಳಿತ ಈಗಾಗಲೇ ಸಭೆ ನಡೆಸಿ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಎಚ್ಚರವಾಗಿರುವಂತೆ ಸೂಚನೆ ನೀಡಿದೆ.

ಯಥೇಚ್ಛವಾಗಿ ನೀರು ಸಿಗುವ ಖಾಸಗಿ ಬಾವಿಗಳಿಂದ ನೀರು ತೆಗೆದು ಸಮಸ್ಯೆ ಇರುವ ಕಡೆ ಪೂರೈಸುವಂತೆ ಹಾಗೂ ಅವಶ್ಯಕತೆ ಬಿದ್ದರೆ ಟ್ಯಾಂಕರ್ ನೀರು ಒದಗಿಸಲು ಸೂಚನೆ ನೀಡಲಾಗಿದೆ. ತುರ್ತು ಸಮಸ್ಯೆಗೆ ಪರಿಹಾರವಾಗಿ ಕೊಳವೆ ಬಾವಿ ಕೊರೆಸುವ ಬಗ್ಗೆಯೂ ಆದೇಶ ನೀಡಲಾಗಿದೆ.

ಸದ್ಯ ಬ್ರಹ್ಮಾವರ ಪರಿಸರದಲ್ಲಿ ನೀರಿನ ಸಮಸ್ಯೆ ಹೆಚ್ಚಿಲ್ಲ. ಗ್ರಾಮೀಣ ಭಾಗದಲ್ಲಿ ಹರಿಯುವ ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿರುವ ಕಾರಣ ಕೃಷಿ ಭೂಮಿಗೂ ನೀರಿನ ಕೊರತೆ ಎದುರಾಗಿಲ್ಲ. ಡಿಸೆಂಬರ್ ಹಾಗೂ ಜನವರಿಯಲ್ಲಿ ಮಳೆ ಬಂದಿದ್ದರಿಂದ ಸಣ್ಣ ಹೊಳೆ, ತೋಡು, ಕೆರೆಗಳಲ್ಲಿ ನೀರು ಶೇಖರಣೆಗೊಂಡಿದೆ. ಆದರೂ ಮಾರ್ಚ್‌, ಏಪ್ರಿಲ್‌ನಲ್ಲಿ ಮಳೆಬಾರದೆ ಹೋದರೆ ಮೇ ತಿಂಗಳಲ್ಲಿ ಸಮಸ್ಯೆ ಗಂಭೀರವಾಗಲಿದೆ ಎಂಬುದು ಕೃಷಿಕರ ಹಾಗೂ ಸಾರ್ವಜನಿಕರ ಅಭಿಪ್ರಾಯ.

ನದಿಗಳಲ್ಲಿ ಉತ್ತಮ ನೀರಿನ ಸಂಗ್ರಹ:

ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದರೆ ತೆಗೆದುಕೊಳ್ಳಬೇಕಾದ ಪರಿಹಾರ ಕಾರ್ಯಗಳ ಬಗ್ಗೆ ಇಬ್ಬರು ಶಾಸಕರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ಉಭಯ ತಾಲ್ಲೂಕುಗಳಲ್ಲಿ ಹರಿಯುವ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಸ್ವಲ್ಪ ಹೆಚ್ಚಿನ ಪ್ರಮಾಣದ ನೀರಿನ ಸಂಗ್ರಹ ಇದೆ. ವಾರಾಹಿ, ಚಕ್ರ, ಗಂಗಾವಳಿ, ಸೌಪರ್ಣಿಕಾ, ಖೇಟಾ ಸೇರಿದಂತೆ ಪ್ರಮುಖ ನದಿಗಳಲ್ಲಿ ಸಂಗ್ರಹವಿರುವ ನೀರು ಮಾರ್ಚ್ ಏಪ್ರಿಲ್‌ ಅಂತ್ಯದವರೆಗೂ ಬರಲಿದೆ. ವಾರಾಹಿ ಕಾಲುವೆಯಲ್ಲಿ ಪೂರ್ಣ ಪ್ರಮಾಣದ ನೀರು ಹರಿದರೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ.

ನೀರು ಪೋಲಾಗುವಿಕೆಗೆ ತಡೆ:

ಹಿರಿಯಡಕ ಭಾಗದ ಪೆರ್ಡೂರು, ಹಿರಿಯಡಕ, ಪುತ್ತಿಗೆ, ಭೈರಂಪಳ್ಳಿ ಭಾಗದಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇಲ್ಲ. ನದಿಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿರುವುದರಿಂದ ಹಾಗೂ ಸಣ್ಣ ನದಿಗಳಲ್ಲಿ ನೀರು ವ್ಯರ್ಥವಾಗಿ ಹರಿದುಹೋಗದಂತೆ ಕ್ರಮ ಕೈಗೊಂಡಿರುವ ಪರಿಣಾಮ ಅಂತರ್ಜಲ ಮಟ್ಟ ಸುಧಾರಿಸಿದ್ದು ಈ ಭಾಗದ ಬಾವಿಗಳು ಹಾಗೂ ಕೊಳವೆ ಬಾವಿಗಳಲ್ಲಿ ಉತ್ತಮ ಪ್ರಮಾಣದ ನೀರಿದೆ.

ಕಾಪುವಿನಲ್ಲಿ ಸಮಸ್ಯೆ:

ಕಾಪು ಪುರಸಭೆ ವ್ಯಾಪ್ತಿ ಸಹಿತ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬೇಸಗೆ ಮುನ್ನವೇ ನೀರಿನ ಕೊರತೆ ಉಂಟಾಗಿದೆ. ತಾಲ್ಲೂಕಿನಲ್ಲಿ ಹರಿಯುವ ಶಾಂಭವಿ, ಕಾಮಿನಿ, ಪಾಪನಾಶಿ ನದಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಬಾವಿಗಳಲ್ಲಿ ನೀರು ಬತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೆ ಸಮಸ್ಯೆ ಹೆಚ್ಚಾಗಲಿದೆ.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕಾಪು ತಾಲ್ಲೂಕು ಆಡಳಿತ ಅಧಿಕಾರಿಗಳ ಸಭೆ ಕರೆದು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದೆ. ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆ ಬಗೆಹರಿಸುವಂತೆ, ಪರ್ಯಾಯ ನೀರಿನ ಮೂಲ ಗುರುತಿಸಿ ಸಿದ್ಧವಿಟ್ಟುಕೊಳ್ಳುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿದ್ಧತೆ:

ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೆ ತುರ್ತು ಸ್ಪಂದನೆಗೆ ಜಿಲ್ಲಾ ಪಂಚಾಯಿತಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತಲೆದೋರುವ 168 ಸಂಭಾವ್ಯ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿದೆ. ಕಾರ್ಕಳ ತಾಲ್ಲೂಕಿನಲ್ಲಿ 25, ಉಡುಪಿ 26, ಕಾಪು 32, ಬೈಂದೂರು 55, ಕುಂದಾಪುರ ತಾಲ್ಲೂಕಿನಲ್ಲಿ 30 ಗ್ರಾಮಗಳನ್ನು ಗುರುತಿಸಿದೆ.

ಬಜೆ ಜಲಾಶಯದ ಗೇಟ್‌
ಬಜೆ ಜಲಾಶಯದ ಗೇಟ್‌

ಈ ಗ್ರಾಮಗಳಲ್ಲಿ ಪರ್ಯಾಯ ನೀರಿನ ಮೂಲಗಳನ್ನು ಗುರುತಿಸಲು, ಕೊಳವೆಬಾವಿ ಕೊರೆಸಲು, ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಟೆಂಡರ್ ಸಿದ್ಧವಾಗಿಟ್ಟುಕೊಳ್ಳುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ ತಿಳಿಸಿದ್ದಾರೆ.

––––––––––––––––––––––

ಪೂರಕ ಮಾಹಿತಿ: ಅಬ್ದುಲ್ ಹಮೀದ್‌, ವಾಸುದೇವ್ ಭಟ್‌, ಕೆ.ಸಿ. ರಾಜೇಶ್‌, ವಿಶ್ವನಾಥ್ ಆಚಾರ್ಯ, ಶೇಷಗಿರಿ ಭಟ್‌, ರಾಘವೇಂದ್ರ ಹಿರಿಯಡಕ

ಹಿರಿಯಡ್ಕ ಭಾಗದಲ್ಲಿ ಹರಿಯುವ ನದಿಯಲ್ಲಿ ಸಂಗ್ರಹವಾಗಿರುವ ನೀರು
ಹಿರಿಯಡ್ಕ ಭಾಗದಲ್ಲಿ ಹರಿಯುವ ನದಿಯಲ್ಲಿ ಸಂಗ್ರಹವಾಗಿರುವ ನೀರು
ಉಡುಪಿ ನಗರಸಭೆ ವ್ಯಾಪ್ತಿಯ ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕು ಕಾರು ತೊಳೆಯಲು ಉದ್ಯಾನ ನಿರ್ವಹಣೆಗೆ ಕುಡಿಯುವ ನೀರು ಬಳಸಬಾರದು.
–ರಾಯಪ್ಪ ಪೌರಾಯುಕ್ತ
ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೆ ತುರ್ತು ಸ್ಪಂದಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲಾಗಿದೆ. ಅನುದಾನ ಕೊರತೆ ಇಲ್ಲ ಅಗತ್ಯಬಿದ್ದರೆ ಟ್ಯಾಂಕರ್ ಮೂಲಕವೂ ನೀರು ಕೊಡಲಾಗುವುದು.
–ಪ್ರತೀಕ್ ಬಾಯಲ್‌ ಜಿಲ್ಲಾ ಪಂಚಾಯಿತಿ ಸಿಇಒ

ಸಂಭಾವ್ಯ ಸಮಸ್ಯಾತ್ಮಕ ಗ್ರಾಮಗಳು

ಕಾರ್ಕಳ ತಾಲ್ಲೂಕು: ಕುಕ್ಕುಂದೂರು ಮಿಯಾರು ಇನ್ನಾ ಕಾಂತಾವರ ಇರ್ವತ್ತೂರು ನೀರೆ ಕಲ್ಯಾ ಈದು ನೂರಾಲುಬೆಟ್ಟು ಮರ್ಣೆ ಕಡ್ತಲ ಸೂಡ ಕುಚ್ಚೂರು ಹೆಬ್ರಿ ಚಾರಾ ನಾಡ್ಪಾಲು ಶಿವಪುರ ಕರೆಬೆಟ್ಟು ಮುದ್ರಾಡಿ ಕಬ್ಬಿನಾಲೆ ವರಂಗ ಪಡುಕುಡೂರು ಅಂಡಾರು ಉಡುಪಿ ತಾಲ್ಲೂಕು: ಅಂಬಲಪಾಡಿ ಮೂಡನಿಡಂಬೂರು ಕಡೆಕಾರು ಕುತ್ಪಾಡಿ ಮೂಡುತೋನ್ಸೆ ತೆಂಕ ನಿಡಿಯೂರು ಕೆಳಾರ್ಕಳಬೆಟ್ಟು ನಾಲ್ಕೂರು ನಂಚಾರು ಪೆಜಮಂಗೂರು 34 ಕುದಿ ಚೇರ್ಕಾಡಿ ಕಳ್ತೂರು ಕೆಂಜೂರು ಹೊಸೂರು ಹಲುವಳ್ಳಿ ಉಪ್ಪೂರು ವಾರಂಬಳ್ಳಿ ಹಾರಾಡಿ ಹಾವಂಜೆ ಹಂದಾಡಿ ಕುಮ್ರಗೋಡು ಮಟಪಾಡಿ ನೀಲಾವರ ಆರೂರು ಕಾಪು ತಾಲ್ಲೂಕು: ಬೆಳಪು ಬೆಳ್ವೆ ಕಟ್ಟಿಂಗೇರಿ ಹೆಜಮಾಡಿ ಇನ್ನಂಜೆ ಪಾಂಗಳ ಏಣಗುಡ್ಡೆ ಮೂಡಬೆಟ್ಟು ಕೋಟೆ ಮಟ್ಟು ಕುರ್ಕಾಲು ಪಾದೂರು 92 ಹೆರೂರು ಮಜೂರು ನಡ್ಸಾಲು ಎಲ್ಲೂರು ಕೊರಂಗ್ರಪಾಡಿ ಅಲೆವೂರು ಆತ್ರಾಡಿ ಬಡಗಬೆಟ್ಟು ಬೈರಂಪಳ್ಳಿ 41ಶಿರೂರು ಬೊಮ್ಮರಬೆಟ್ಟು ಅಂಜಾರು ಕುದಿ ಪೆರ್ಣಂಕಿಲ ಕುಕ್ಕೆಹಳ್ಳಿ ಬೆಳ್ಳಂಪಳ್ಳಿ ಪೆರ್ಡೂರು ಉದ್ಯಾವರ ಕಿದಿಯೂರು ಬೈಂದೂರು ತಾಲ್ಲೂಕು:ನಾವುಂದ ಶಿರೂರು ಉಪ್ಪುಂದ ನಾಡ ಹಡವು ಬಡಾಕೆರೆ ಕಿರಿ ಮಂಜೇಶರ್ವರ ಕೆರ್ಗಾಲು ನಂದನವನ ಕಾಲ್ತೋಡು ಜಡ್ಕಲ್‌ ಮುದೂರು ಕಂಬದಕೋಣೆ ಹೆರಂಜಾಲು ಹಳ್ಳಿಹೊಳೆ ಗೋಳಿಹೊಳೆ ಯಳಜಿತ್‌ ಉಪ್ಪುಂದ ಮರವಂತೆ ಹೆರೂರು ಉಳ್ಳೂರು11 ಬಿಜೂರು ಮಚ್ಚಟ್ಟು ಅಂಪಾರು ಅಜ್ರಿ ಆಲೂರು ಹರ್ಕೂರು ಇಡೂರುಕುಜ್ಞಾಡಿ ಕಟ್‌ಬೆಲ್ತೂರು ದೇವಲ್ಕುಂದ ಕರ್ಕುಂಜೆ ಕಾವ್ರಾಡಿ ಹಳನಾಡು ಕೆರಾಡಿ ಗಂಗೊಳ್ಳಿ ಗುಜ್ಜಾಡಿ ಗುಲ್ವಾಡಿ ಚಿತ್ತೂರು ತಲ್ಲೂರು ಉಪ್ಪಿನಕುದ್ರು ತ್ರಾಸಿ ಯಡಮೊಗೆ ವಂಡ್ಸೆ ಶಂಕರ ನಾರಾಯಣ ಕುಳುಂಜೆ ಸಿದ್ದಾಪುರ ಸೇನಾಪುರ ಹಕ್ಲಾಡಿ ಕುಂದಬಾರಂದಾಡಿ ನೂಜಾರಿ ಹಟ್ಟಿಯಂಗಡಿ ಕನ್ಯಾನ ಕೆಂಚನೂರು ಹೆಮ್ಮಾಡಿ ಹೊಸಂಗಡಿ ಕುಂದಾಪುರ ತಾಲ್ಲೂಕು: 76 ಹಾಲಾಡಿ ಅಮಾಸೆಬೈಲು ರಟ್ಟಾಡಿ ಕಾಳಾವರ ಅಸೋಡು ವಕ್ವಾಡಿ ಕುಂಭಾಶಿ ಕೆದೂರು ಉಳ್ತೂರು ಕೊರ್ಗಿ ಕೋಟೆಶ್ವರ ಗೋಪಾಡಿ ತೆಕ್ಕಟ್ಟೆ ಬೀಜಾಡಿ ಮೊಳಹಳ್ಳಿ ಯಡಾಡಿ ಮತ್ಯಾಡಿ ಹಾರ್ದಳ್ಳಿ ಮಂಡಳ್ಳಿ ಹಳ್ಳಾಡಿ ಹರ್ಕಾಡಿ ಹೆಂಗವಳ್ಳಿ ಗಿಳಿಯಾರು ಹೇರಾಡಿ ಯಡ್ತಾಡಿ ಹಿಡಿಯಾಣ ಕಾಡೂರು ಬೆಳ್ವೆ ಅಲ್ವಾಡಿ ಮಡಾಮಕ್ಕಿ ಶೇಡಿಮನೆ

‘ಖಾಸಗಿ ಬೋರ್‌ವೆಲ್‌ಗಳ ಬಳಕೆ’
ಕಾರ್ಕಳ ತಾಲ್ಲೂಕಿನಲ್ಲಿ ಸಮಸ್ಯೆ ಇರುವ 12 ಗ್ರಾಮ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ 13 ವಾರ್ಡ್‌ಗಳನ್ನು ಗುರುತಿಸಲಾಗಿದೆ. ಬೇಸಗೆಯಲ್ಲಿ ಸಮಸ್ಯೆಗೆ ತುರ್ತು ಸ್ಪಂದನೆಗೆ ಅಧಿಕಾರಿಗಳು ಸಭೆ ನಡೆಸಿ ಕಾರ್ಯಯೋಜನೆ ಸಿದ್ಧಪಡಿಸಿದ್ದಾರೆ. ತಾಲ್ಲೂಕಿನಾದ್ಯಂತ ಖಾಸಗಿ ಬೋರ್‌ವೆಲ್‌ಗಳನ್ನು ತಾತ್ಕಾಲಿಕ ನೆಲೆಯಲ್ಲಿ ಪಡೆದು ಟ್ಯಾಂಕ್‌ಗಳಿಗೆ ತುಂಬಿಸಿಕೊಂಡು ಸರಬರಾಜು ಮಾಡಲು ಚಿಂತಿಸಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ 35 ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪಡೆಯಲು ಚರ್ಚಿಸಲಾಗಿದೆ. ಟ್ಯಾಂಕರ್ ನೀರು ಪೂರೈಕೆಗೆ ಟೆಂಡರ್ ಕರೆಯಲಾಗಿದ್ದು ಇಬ್ಬರು ಅರ್ಜಿ ಸಲ್ಲಿಸಿದ್ದಾರೆ. ನದಿ ಹಾಗೂ ಕಿಂಡಿ ಅಣೆಕಟ್ಟುಗಳ ದ್ವಾರದಿಂದ ನೀರು ಪೋಲಾಗದಂತೆ ತಡೆಯಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT