ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಹೆಣ್ಣಿಗೂ ಮಹಿಳಾ ಕಾನೂನು ತಿಳಿದಿರಲಿ

ಅಂತರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಜಿಲ್ಲಾ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ
Last Updated 11 ಅಕ್ಟೋಬರ್ 2022, 13:37 IST
ಅಕ್ಷರ ಗಾತ್ರ

ಉಡುಪಿ: ಸರ್ಕಾರ ಹೆಣ್ಣು ಮಕ್ಕಳ ರಕ್ಷಣೆಗೆ ಜಾರಿಗೆ ತಂದಿರುವ ಕಾನೂನುಗಳ ಅರಿವು ಹೆಣ್ಣು ಮಕ್ಕಳಿಗೆ ಸಿಗಬೇಕು. ಸಮಸ್ಯೆಗೆ ಸಿಲುಕಿದಾಗ ಕಾನೂನು ನೆರವು ಸಿಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಹೇಳಿದರು.

ಕಲ್ಯಾಣಪುರ ಸಂತೆಕಟ್ಟೆಯ ಧನ್ವಂತರಿ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಇಲಾಖೆ, ರೋಟರಿ, ಚೈಲ್ಡ್‌ಲೈನ್ 1098 ಉಡುಪಿ ಮತ್ತು ಧನ್ವಂತರಿ ಕಾಲೇಜ್ ಆಫ್ ನರ್ಸಿಂಗ್ ಆಶ್ರಯದಲ್ಲಿ ಮಂಗಳವಾರ ನಡೆದ ಅಂತರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವಯುತ ಸ್ಥಾನವಿದ್ದು, ಸ್ತ್ರೀಯರ ರಕ್ಷಣೆಗೆ ಹುಟ್ಟಿನಿಂದ ಕೊನೆಯವರೆಗೂ ಹಲವು ಕಾನೂನುಗಳು ನೆರವಿಗೆ ಬರುತ್ತವೆ. ಪ್ರಸವ ಪೂರ್ವದಲ್ಲಿ ಭ್ರೂಣ ಹತ್ಯೆ ತಡೆಯಲು ಭ್ರೂಣ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಅನಿವಾರ್ಯತೆ ಎದುರಾದಾಗ ಕಾನೂನುಗಳನ್ನು ಬಳಸಿಕೊಂಡು ನೆರವು ಪಡೆಯಬೇಕು ಎಂದರು.

ಹೆಣ್ಣು ಶಿಕ್ಷಣವಂತೆಯಾಗಿ ಸ್ವಂತ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ನಡೆಸಬೇಕು. ವೀರರಾಣಿ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ಹಾಗೂ ವೀರ ವನಿತೆಯರ ಧೈರ್ಯ ಸಾಹಸ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಸ್‌ಪಿ ಹಾಕೆ ಅಕ್ಷಯ್ ಮಚ್ಚೀಂದ್ರ ಮಾತನಾಡಿ, ಪ್ರಸ್ತುತ ಹೆಣ್ಣು ವಿದ್ಯಾವಂತೆಯಾಗುವುದರ ಜತೆಗೆ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾಳೆ. ಪುರುಷರಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಕಡಿಮೆಯಾಗುತ್ತಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳ ವಿರುದ್ಧ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಈ ಬಗ್ಗೆ ಮಹಿಳೆಯರು ಹಾಗೂ ಪೋಷಕರು ಜಾಗೃತರಾಗಿರಬೇಕು ಎಂದರು.

ಚೈಲ್ಡ್‌ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸ್ತೂರಬಾ ಮೆಡಿಕಲ್ ಕಾಲೇಜಿನ ಪ್ರಸೂತಿ ತಜ್ಞ ಡಾ. ಪ್ರತಾಪ್ ಕುಮಾರ್ ‘ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ ಬಗ್ಗೆ ಹಾಗೂ ಮಾಧವ ಕೃಪಾ ಶಾಲೆಯ ವಿದ್ಯಾರ್ಥಿನಿ ಆರ್ಯ ಪ್ರಸೀದ ಹದಿಹರೆಯದ ಹೆಣ್ಣುಮಕ್ಕಳಲ್ಲಿ ನಾಯಕತ್ವವನ್ನು ಬೆಂಬಲಿಸುವಲ್ಲಿ ಸಮಾಜದ ಪಾತ್ರ ಕುರಿತು ಉಪನ್ಯಾಸ ನೀಡಿದರು.

ಧನ್ವಂತರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಮಹಿಳಾ ಸಬಲೀಕರಣ ಕುರಿತು ನಾಟಕ ಪ್ರದರ್ಶಿಸಲಾಯಿತು. ಅನಾಥ ವಿದ್ಯಾರ್ಥಿಗಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ಕಿಟ್ ವಿತರಿಸಲಾಯಿತು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ, ಧನ್ವಂತರಿ ಕಾಲೇಜ್ ಆಫ್ ನರ್ಸಿಂಗ್‌ನ ಅಧ್ಯಕ್ಷ ಡಾ. ಉಮೇಶ್ ಪ್ರಭು, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣ ಇದ್ದರು.

ರೋಟರಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿದರು. ಚೈಲ್ಡ್‌ಲೈನ್ ಸಂಯೋಜಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಸಹ ನಿರ್ದೇಶಕ ಗುರುರಾಜ್ ಭಟ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT