ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರು ಅನಕ್ಷರಸ್ಥರು: ಅನ್‌ಲೈನ್‌ ನಿಯಮ ಬೇಡ

ಭವಿಷ್ಯನಿಧಿ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸುವ ನಿಯಮಕ್ಕೆ ವಿರೋಧ: ಪ್ರತಿಭಟನೆ
Last Updated 3 ಜನವರಿ 2019, 13:36 IST
ಅಕ್ಷರ ಗಾತ್ರ

ಉಡುಪಿ: ಭವಿಷ್ಯನಿಧಿ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕೆಂಬ ನಿಯಮ ಅವೈಜ್ಞಾನಿಕ ಎಂದು ಮಂಗಳೂರು ಎಸ್‌ಕೆ ಬೀಡಿ ವರ್ಕರ್ಸ್‌ ಫೆಡರೇಶನ್ ಆಶ್ರಯದಲ್ಲಿ ಗುರುವಾರ ನಗರದ ಭವಿಷ್ಯನಿಧಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಎಸ್‌ಕೆ ಬೀಡಿ ವರ್ಕರ್ಸ್‌ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಬೇರಿಂಜ ಮಾತನಾಡಿ, ಕಾರ್ಮಿಕ ಭವಿಷ್ಯನಿಧಿ ಹಾಗೂ ಮುಂಗಡ ಹಣ ಪಡೆಯಲು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕೆಂದು ಕೇಂದ್ರ ಸರ್ಕಾರದ ಕಾರ್ಮಿಕ ಮಂತ್ರಾಲಯ ತಿಳಿಸಿದೆ. ಇದರಿಂದಾಗಿ ಬೀಡಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ತೊಂದರೆಗೊಳಗಾಗಲಿದ್ದಾರೆ ಎಂದು ಹೇಳಿದರು.

ಮಂಗಳೂರು ಹಾಗೂ ಉಡುಪಿಯ ಭವಿಷ್ಯನಿಧಿ ಕಛೇರಿಗಳ ಮೂಲಕ ನೋಂದಾಯಿತರಾಗಿರುವ ಭವಿಷ್ಯನಿಧಿ ಸದಸ್ಯರ ಪೈಕಿ ಹೆಚ್ಚಿನವರು ಬೀಡಿ ಕಾರ್ಮಿಕರಾಗಿದ್ದಾರೆ. ಶೇ 80ಕ್ಕಿಂತಲೂ ಅಧಿಕ ಕಾರ್ಮಿಕರು ತಂತ್ರಜ್ಞಾನ ಬಳಕೆಯಲ್ಲಿ ಅನಕ್ಷರಸ್ಥರಾಗಿದ್ದಾರೆ. ಹೆಸರು, ವಯಸ್ಸು, ವಿಳಾಸ ಇತ್ಯಾದಿ ವಿವರಗಳು ಆಧಾರ್ ಕಾರ್ಡ್‌, ಬ್ಯಾಂಕ್ ಪಾಸ್‌ ಬುಕ್‌, ಮಾಲಕ ಸಂಸ್ಥೆ ಹಾಗೂ ಭವಿಷ್ಯನಿಧಿ ಕಚೇರಿ ದಾಖಲೆಗಳಲ್ಲಿ ವ್ಯತ್ಯಾಸವಿದೆ. ಇದರಿಂದಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಅಸಂಘಟಿತ ವಲಯದ ಕಾರ್ಮಿಕರಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ನಿಯಮದಿಂದ ವಿನಾಯಿತಿ ನೀಡಬೇಕು. ಶಾಲಾ ವರ್ಗಾವಣಾ ಪ್ರಮಾಣ ಪತ್ರವನ್ನು ಮಾನ್ಯ ಮಾಡಿ ಜನನ ದಿನಾಂಕವನ್ನು ಸರಿಪಡಿಸಬೇಕು. ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಭವಿಷ್ಯ ನಿಧಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕೆಂಬ ಆದೇಶವನ್ನು ಕೈಬಿಡಬೇಕೆಂದು ಧರಣಿನಿರತರು ಒತ್ತಾಯಿಸಿದರು.

ಧರಣಿಯಲ್ಲಿ ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ವಿ.ಭಟ್, ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಬಿ.ಶೇಖರ್ ಬಂಟ್ವಾಳ್, ಬೀಡಿ ಲೇಬರ್ ಯೂನಿಯನ್ ಅಧ್ಯಕ್ಷೆ ಶಾಂತಾ ನಾಯಕ್, ಕಾರ್ಯದರ್ಶಿ ಶಶಿಕಲಾ ಗಿರೀಶ್, ಫೆಡರೇಶನ್‌ನ ಸಹ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ, ಎಂ.ಕರುಣಾಕರ್ ಉಪಸ್ಥಿತರಿದ್ದರು.

ಮಾರುತಿ ವಿಥಿಕಾದಲ್ಲಿರುವ ಯೂನಿಯನ್ ಕಚೇರಿಯಿಂದ ಭವಿಷ್ಯನಿಧಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಉಡುಪಿಯ ಸಹಾಯಕ ಭವಿಷ್ಯ ನಿಧಿ ಆಯುಕ್ತರ ಮೂಲಕ ಕೇಂದ್ರ ಕಾರ್ಮಿಕ ಸಚಿವರಿಗೆ ಹಾಗೂ ಪಿಎಫ್ ಆಯುಕ್ತರಿಗೆ ಸಲ್ಲಿಸಲಾಯಿತು.

ಉಡುಪಿ ತಾಲ್ಲೂಕು ಬೀಡಿ ಲೇಬರ್ ಯೂನಿಯನ್(ಎಐಟಿಯುಸಿ)ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT