ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹದಿಂದ ತರಗತಿಗೆ ಬಂದ ವಿದ್ಯಾರ್ಥಿಗಳು

ಜಿಲ್ಲೆಯಾದ್ಯಂತ ಶಾಲೆಗಳು ಪುನರಾರಂಭ
Last Updated 29 ಮೇ 2018, 9:54 IST
ಅಕ್ಷರ ಗಾತ್ರ

ಉಡುಪಿ: ಬೇಸಿಗೆ ರಜೆ ಮುಗಿದಿದ್ದು 2018–19ನೇ ಶೈಕ್ಷಣಿಕ ವರ್ಷದ ಮೊದಲ ದಿನದ ತರಗತಿಗೆ ವಿದ್ಯಾರ್ಥಿಗಳು ಸೋಮವಾರ ಹಾಜರಾದರು.

ರಜೆಯ ಮಜಾ ಅನುಭವಿಸಿ ಅದೇ ಗುಂಗಿನಲ್ಲಿದ್ದ ವಿದ್ಯಾರ್ಥಿಗಳು ಆ ನೆನಪುಗಳೊಂದಿಗೇ ಶಾಲೆಯತ್ತ ಹೆಜ್ಜೆ ಹಾಕಿದ ದೃಶ್ಯ ಎಲ್ಲೆಡೆ ಕಂಡುಬಂತು. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಗುಂಪು ಗುಂಪಾಗಿ ನಿಂತು ಚರ್ಚೆ ನಡೆಸುತ್ತಿದ್ದರು. ಪರಸ್ಪರರು ರಜೆಯ ಅನುಭವವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಬಹಳ ದಿನಗಳ ನಂತರ ಗೆಳೆಯ– ಗೆಳತಿಯರನ್ನು ಭೇಟಿ ಮಾಡಿದ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಮೊದಲ ದಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ತಯಾರಿಗಾಗಿ ಮೀಸಲಿಟ್ಟರು. ಆದ್ದರಿಂದ ಬಹುತೇಕ ಶಾಲೆಗಳಲ್ಲಿ ಪಾಠ ನಡೆಯಲಿಲ್ಲ. ಮಂಗಳವಾರ ಅಧಿಕೃತವಾಗಿ ಶಾಲೆಯ ಪ್ರಾರಂಭೋತ್ಸವ ನಡೆಯಲಿದ್ದು, ಬೋಧನೆ ಸಹ ಆರಂಭವಾಗಲಿದೆ. ಶಾಲಾ ಮಟ್ಟದಲ್ಲಿಯೇ ಪುಟ್ಟ ಕಾರ್ಯಕ್ರಮಮವನ್ನೂ ಆಯೋಜಿಸಲಾಗುತ್ತದೆ. ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

‘ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಆರಂಭವಾಗಿವೆ. ಮೊದಲ ದಿನವೇ ಮಕ್ಕಳಿಗೆ ಬಿಸಿಯೂಟ ನೀಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಅಧಿಕೃತ ಪ್ರಾರಂಭೋತ್ಸವ ನಡೆಯುವ ಮಂಗಳವಾರ ಮಕ್ಕಳಿಗೆ ಸಿಹಿ ಸಹ ನೀಡಲಾಗುತ್ತದೆ. ಈ ಶೈಕ್ಷಣಿಕ ವರ್ಷವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಸಹ ಈಗಾಗಲೇ ಮಾಡಿಕೊಳ್ಳಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 1,254 ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಿವೆ. ಈ ಶಾಲೆಗಳಲ್ಲಿ ಅಂದಾಜು 1.48 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಶಾಲೆಯತ್ತ ಮಕ್ಕಳು; ಸ್ವಚ್ಛತಾ ಕಾರ್ಯದಲ್ಲಿ ಭಾಗಿ

ಪಡುಬಿದ್ರಿ: ಬೇಸಿಗೆ ರಜೆ ಮುಗಿಸಿ ಶಾಲೆಯತ್ತ ಮರಳಿದ ವಿದ್ಯಾರ್ಥಿಗಳು ಸೋಮವಾರ ಶಿಕ್ಷಕರ ಜತೆಗೂಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ದೃಶ್ಯ ಹೆಜಮಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಡುಬಂತು.

ಪಡುಬಿದ್ರಿ ಆಸುಪಾಸಿನ ಹಲವು ಶಾಲೆಗಳಲ್ಲಿ ಮಕ್ಕಳು, ಶಿಕ್ಷಕರು ಹಾಗೂ ಬಿಸಿಯೂಟದ ಸಿಬ್ಬಂದಿ ಶಾಲಾ ಆವರಣದೊಳಗೆ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. ಕೆಲವು ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ದಾಖಲಾತಿ ಹಾಗೂ ವರ್ಗಾವಣೆ ಪ್ರಮಾಣ ಪತ್ರ ವಿತರಣೆಯಲ್ಲಿ ತೊಡಗಿದ್ದರು. ಮಂಗಳವಾರದಂದು ಶಾಲೆಗಳು ಕಾರ್ಯಾರಂಭ ಮಾಡಲಿದ್ದು, ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿವೆ.

**
ಈ ಶೈಕ್ಷಣಿಕ ವರ್ಷವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಸಹ ಈಗಾಗಲೇ ಮಾಡಿಕೊಳ್ಳಲಾಗಿದೆ – ಶೇಷಶಯನ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT