ಅವೈಜ್ಞಾನಿಕ ಸೇಫ್ಟಿಟ್ಯಾಂಕ್‌: ಅಸಹ್ಯಕರ ವಾತಾವರಣದಲ್ಲೇ ಬದುಕು..!

7
ವಿಜಯಪುರ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಗಿರಿಗಾಂವಕರ ಬಡಾವಣೆ ನಿವಾಸಿಗಳ ಹಿಡಿಶಾಪ

ಅವೈಜ್ಞಾನಿಕ ಸೇಫ್ಟಿಟ್ಯಾಂಕ್‌: ಅಸಹ್ಯಕರ ವಾತಾವರಣದಲ್ಲೇ ಬದುಕು..!

Published:
Updated:
Deccan Herald

ವಿಜಯಪುರ: ನಗರದ ಗಿರಿಗಾಂವಕರ ಬಡಾವಣೆಯ ಲಕ್ಷ್ಮೀ ದೇಗುಲದ ಆವರಣದಲ್ಲಿ, ಲೇಔಟ್‌ ನಿರ್ಮಿಸಿದ ರಿಯಲ್‌ ಎಸ್ಟೇಟ್‌ ಡೆವಲಪರ್‌, ಅವೈಜ್ಞಾನಿಕವಾಗಿ ಸೇಫ್ಟಿಟ್ಯಾಂಕ್‌ ನಿರ್ಮಿಸಿರುವುದರಿಂದ, ಸುತ್ತಮುತ್ತಲಿನ ಜನರು ಅಸಹ್ಯಕರ ವಾತಾವರಣದಲ್ಲೇ ಬದುಕು ಸಾಗಿಸುವಂತಾಗಿದೆ.

ಲಕ್ಷ ಲಕ್ಷ ಕೊಟ್ಟು ನಿವೇಶನ ಖರೀದಿಸಿ, ಮತ್ತಷ್ಟು ಲಕ್ಷ ಖರ್ಚು ಮಾಡಿ, ತಮ್ಮ ಕನಸಿನ ಮನೆ ನಿರ್ಮಿಸಿಕೊಂಡಂತಹ ಮಾಲೀಕರೀಗ, ಲೇಔಟ್‌ ನಿರ್ಮಿಸಿರುವ ರಿಯಲ್ ಎಸ್ಟೇಟ್‌ ಉದ್ಯಮಿಗೆ ಅನುಮತಿ ನೀಡಿದ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

‘ಮನೆಯ ಹಿಂಬದಿಯ ಆವರಣ ಗೋಡೆಗೆ ಹೊಂದಿಕೊಂಡಿರುವ ಲಕ್ಷ್ಮೀ ದೇವಸ್ಥಾನದ ಬಾಗಿಲ ಎದುರೇ ಅವೈಜ್ಞಾನಿಕವಾಗಿ ಸೇಫ್ಟಿಟ್ಯಾಂಕ್‌ ನಿರ್ಮಿಸಲಾಗಿದೆ. ಈ ಟ್ಯಾಂಕ್‌ ತುಂಬಿದ್ದರಿಂದ ನಿರಂತರವಾಗಿ ಹೊಲಸು ನೀರು ಮನೆಯ ಹಿಂಬದಿ ನಿಲ್ಲುತ್ತಿದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗಿ, ಮಲೇರಿಯಾದಂತ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ಮನೆ ಬಾಗಿಲು ತೆರೆದರೆ ಸಾಕು ದುರ್ವಾಸನೆ ತಡೆದುಕೊಳ್ಳಲಾಗುತ್ತಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಈ ನರಕ ಯಾತನೆ ಅನುಭವಿಸುತ್ತಿದ್ದೇವೆ’ ಎನ್ನುತ್ತಾರೆ ಗಿರಿಗಾಂವಕರ ಲೇಔಟ್‌ ನಿವಾಸಿ ಆರ್‌.ಬಿ.ಕುದರಿ.

‘ಆವರಣ ಗೋಡೆ ಪಕ್ಕದಲ್ಲಿ ನಿರಂತರವಾಗಿ ಹೊಲಸು ನೀರು ನಿಲ್ಲುತ್ತಿರುವುದರಿಂದ ಮನೆ ಕಟ್ಟುವಾಗ ನಿರ್ಮಿಸಿದ ಆವರಣ ಗೋಡೆ ಬಿದ್ದು ಹೋಗಿದೆ. ಇದೀಗ ಮತ್ತೆ ₹ 75000 ಖರ್ಚು ಮಾಡಿ ಕಟ್ಟಿಸಿದ್ದೇನೆ. ಇದು ಹೀಗೆ ಮುಂದುವರೆದರೆ ಮನೆ ಸಹಿತ ಬೀಳಲಿದೆ. ಸೇಫ್ಟಿಟ್ಯಾಂಕ್‌ನಿಂದಾಗಿ ಮನೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸಲಾಗುತ್ತಿಲ್ಲ. ಈ ಪ್ರದೇಶದ ಜನರ ನೆಮ್ಮದಿಗಾಗಿ ಕೂಡಲೇ ಸಂಬಂಧಿಸಿದವರು ಕ್ರಮಕ್ಕೆ ಮುಂದಾಗಬೇಕು’ ಎಂದು ಕುದರಿ ಹೇಳಿದರು.

‘ಮನೆ ಸಮೀಪವೇ ಸೇಫ್ಟಿಟ್ಯಾಂಕ್‌ ಕಟ್ಟಿದ್ದರಿಂದ ತಡೆದುಕೊಳ್ಳದಷ್ಟು ಕೆಟ್ಟ ವಾಸನೆ ಬರುತ್ತಿದೆ. ಸೊಳ್ಳೆಗಳು ಹುಟ್ಟಿಕೊಂಡು ಸಾಂಕ್ರಾಮಿಕ ರೋಗ ಹರಡುತ್ತಿವೆ. ಹಲವರು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ದ್ವಿಗುಣಗೊಳ್ಳುವ ಮೊದಲೇ ಪರಿಹಾರ ಕಂಡುಕೊಳ್ಳಲು ಒತ್ತಾಯಿಸಿ, ಇಲ್ಲಿಂದ ಕೂಗಳತೆ ದೂರದಲ್ಲಿರುವ ಪಾಲಿಕೆ ಸದಸ್ಯ ರವೀಂದ್ರ ಲೋಣಿಯವರ ಮನೆ ಎದುರು ಧರಣಿ ನಡೆಸಿದರೂ ಪ್ರಯೋಜನವಾಗಿಲ್ಲ. ಆಯುಕ್ತರಿಗೆ ಮನವಿ ಸಲ್ಲಿಸಿದರೇ ಸದಸ್ಯರಿಗೆ ಭೇಟಿಯಾಗಿ ಅಂತಾರೆ. ಯಾರೂ ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸದಿದ್ರೇ ಏನ್‌ ಮಾಡ್ಬೇಕು’ ಎನ್ನುತ್ತಾರೆ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಡಿ.ಎಲ್‌.ಚವ್ಹಾಣ, ಕುಮಾರ ಮಾಶ್ಯಾಳ, ಅಕ್ಷಯ ಬಿರಾದಾರ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !