ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ಸಿಬ್ಬಂದಿ ಸೇವೆ ಕಡಿತ: ಪರದಾಟ

ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ 12 ಹೊರಗುತ್ತಿಗೆ ಸಿಬ್ಬಂದಿ ಕೆಲಸಕ್ಕೆ ಕುತ್ತು
Last Updated 9 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಕುಮಟಾ:ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 12ನೌಕರರಸೇವೆಯನ್ನು ಕಡಿತಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆಯಿದೆ.

ಇಲ್ಲಿ ನಿತ್ಯವೂ ಸುಮಾರು 500 ಹೊರ ರೋಗಿಗಳು, 400 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.100 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿಎರಡು ವರ್ಷಗಳಿಂದ ಎಲ್ಲ ಸೌಲಭ್ಯಗಳಿವೆ.ಆಸ್ಪತ್ರೆಯಲ್ಲಿ ಈಗ ಎಲ್ಲ ವಿಭಾಗಗಳ ವೈದ್ಯರ ಹುದ್ದೆ ಭರ್ತಿಯಾಗಿದೆ. ತುರ್ತು ಚಿಕಿತ್ಸಾ ಘಟಕ (ಐಸಿಯು), ಡಯಾಲಿಸಿಸ್ ಘಟಕ, ಅಪೌಷ್ಟಿಕ ಮಕ್ಕಳ ಚಿಕಿತ್ಸಾ ಘಟಕದಂತಹ ವಿಶೇಷ ವೈದ್ಯಕೀಯ ಸೇವೆಯಿದೆ. ಆದರೆ, ಆರ್ಥಿಕ ಮಿತವ್ಯಯದ ಹಿನ್ನೆಲೆಯಲ್ಲಿ ಸರ್ಕಾರ 12 ಜನ ಹೊರಗುತ್ತಿಗೆ ನೌಕರರ ಸೇವೆಯನ್ನು ಮುಂದುವರಿಸದಂತೆ ಆದೇಶ ಹೊರಡಿಸಿದೆ.ಅವರಲ್ಲಿ ಎಂಟು ಜನ ಈಗಾಗಲೇಕೆಲಸ ಕಳೆದುಕೊಂಡಿದ್ದಾರೆ.

‘ಹಿಂದೆಲ್ಲ ಆಸ್ಪತ್ರೆಯಲ್ಲಿ ರೋಗಿಗಳನ್ನು ಸ್ಟ್ರೆಚರ್ ಮೇಲೆ ತಳ್ಳಿಕೊಂಡು ಹೋಗಲು ತಕ್ಷಣ ಸಿಬ್ಬಂದಿ ಬಂದು ಬಿಡುತ್ತಿದ್ದರು. ಈಗ ಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ನಮ್ಮ ತಂದೆಯವರನ್ನು ವಾರ್ಡ್‌ಗೆ ಕರೆದುಕೊಂಡು ಹೋಗುವ ಸಿಬ್ಬಂದಿ ಬರಲು ಅರ್ಧ ಗಂಟೆ ಕಾಯಬೇಕಾಯಿತು’ ಎಂದು ಮಧುಕೇಶ್ವರ ಪಟಗಾರ ಎನ್ನುವವರು ತಮ್ಮ ಅನುಭವ ಹಂಚಿಕೊಂಡರು.

ಪ್ರತಿ ತಿಂಗಳು ಆಸ್ಪತ್ರೆಯಲ್ಲಿ ಸುಮಾರು 70 ಹೆರಿಗೆಗಳು ಆಗುತ್ತಿದ್ದು, ಇವುಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗುವ ಪ್ರಕರಣಗಳು ಸುಮಾರು 25. ಸುಮಾರು 30 ದೊಡ್ಡ ಹಾಗೂ 80 ಸಣ್ಣ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಅಪಘಾತಕ್ಕೆ ಸಂಬಂಧಿಸಿದ ಸುಮಾರು 300 ಪ್ರಕರಣಗಳು ದಾಖಲಾಗುತ್ತವೆ.

ಬೇರೆ ವಿಭಾಗದ ಸಿಬ್ಬಂದಿಬಳಕೆ:‘ಆಸ್ಪತ್ರೆಗೆ ಬರುವ ಗಾಯಾಳುಗಳನ್ನು ವಾರ್ಡ್‌ಗಳಿಗೆ, ಹಾಸಿಗೆಗೆ, ಆಂಬುಲೆನ್ಸ್‌ಗೆ ವರ್ಗಾಯಿಸಲು ಬೇಕಾದ, ಶುಚಿ ಕಾರ್ಯಕ್ಕೆ ಬಳಕೆಯಾಗುತ್ತಿದ್ದ ಹೆಚ್ಚಿನ ಸಿಬ್ಬಂದಿಯನ್ನು ಸರ್ಕಾರಿ ಆದೇಶದಂತೆ ತೆಗೆಯಲಾಗಿದೆ. ತುರ್ತು ಸಂದರ್ಭದಲ್ಲಿ ಬೇರೆ ವಿಭಾಗದ ಸಿಬ್ಬಂದಿ ಈ ಎಲ್ಲ ಕಾರ್ಯ ಮಾಡುವಂಥ ಸ್ಥಿತಿ ಉಂಟಾಗಿದೆ. ಆಸ್ಪತ್ರೆಗೆ ಎಲೆಕ್ಟ್ರಿಷಿಯನ್,ಭದ್ರತಾ ಸಿಬ್ಬಂದಿಯ ಅಗತ್ಯವಿದೆ. ಸ್ಥಳೀಯ ಶಾಸಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ’ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT