ಉ.ಕ ಕ್ಷೇತ್ರದಲ್ಲಿ 15.34 ಲಕ್ಷ ಮತದಾರರು

ಸೋಮವಾರ, ಮಾರ್ಚ್ 25, 2019
31 °C
ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಲು ಕ್ರಮ: ಜಿಲ್ಲಾಧಿಕಾರಿ

ಉ.ಕ ಕ್ಷೇತ್ರದಲ್ಲಿ 15.34 ಲಕ್ಷ ಮತದಾರರು

Published:
Updated:
Prajavani

ಕಾರವಾರ: ಜಿಲ್ಲೆಯಲ್ಲಿ ಏ.23ಕ್ಕೆ ನಡೆಯಲಿರುವ ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ. ಮತದಾನ ಪ್ರಮಾಣ ಹೆಚ್ಚಳಕ್ಕೆ ವಿವಿಧ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಈ ಬಾರಿ 15.34 ಲಕ್ಷ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು. 

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲ ಮತದಾರರ ಭಾವಚಿತ್ರಗಳಿರುವ ಪಟ್ಟಿಯನ್ನು ಈ ಬಾರಿ ಬಳಸಲಾಗುತ್ತದೆ. ಚುನಾವಣೆಯ ದಿನ ಕೇವಲ ವೋಟರ್ ಸ್ಲಿಪ್‌ಗಳನ್ನು ವಿತರಿಸಲಾಗುತ್ತದೆ. ಮತದಾನಕ್ಕೆ ಮತದಾರರ ಗುರುತಿನ ಚೀಟಿಯನ್ನೇ ತರಬೇಕಾಗಿಲ್ಲ. ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ, ಬ್ಯಾಂಕ್ ಅಥವಾ ಅಂಚೆ ಕಚೇರಿ ನೀಡುವ ಭಾವಚಿತ್ರವುಳ್ಳ ಪಾಸ್‌ಬುಕ್, ಪಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಆಧಾರ್ ಕಾರ್ಡ್ ಹೀಗೆ ಚುನಾವಣಾ ಆಯೋಗ ಗುರುತಿಸಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತರಬಹುದು. ಆದರೆ, ಮತದಾರರ ಪಟ್ಟಿಯಲ್ಲಿ ಹೆಸರು ಕಡ್ಡಾಯವಾಗಿ ಇರಬೇಕು’ ಎಂದು ತಿಳಿಸಿದರು. 

ವಾಹನದ ವ್ಯವಸ್ಥೆ: ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅಂಗವಿಕಲರು ಹೆಚ್ಚಿರುವ ಮತಗಟ್ಟೆಯನ್ನು ಮಾದರಿಯನ್ನಾಗಿ ಗುರುತಿಸಲಾಗಿದ್ದು, ನೀಲಿ ಬಣ್ಣ ಬಳಿಯಲಾಗುತ್ತದೆ. ಒಟ್ಟು 12,913 ಅಂಗವಿಕಲ ಮತದಾರರನ್ನು ನೋಂದಣಿ ಮಾಡಲಾಗಿದೆ. ಅವರಿಗೆ ಮತಗಟ್ಟೆಗೆ ಬಂದು ಹೋಗಲು ವಾಹನದ ವ್ಯವಸ್ಥೆ ಮಾಡಲಾಗುವುದು. ಅಂಧರಿಗೆ ಬ್ರೈಲ್ ಲಿಪಿಯ ಸೌಲಭ್ಯ ನೀಡಲಾಗುವುದು.‌ ಗಾಲಿ ಕುರ್ಚಿ ಮತ್ತು ರ‍್ಯಾಂಪ್ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಎರಡರಂತೆ ಒಟ್ಟು 12 ‘ಸಖಿ’ ಮತಗಟ್ಟೆಗಳಿರುತ್ತವೆ. ಇವುಗಳಿಗೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಿದರು. 

ಈ ಬಾರಿಯ ಚುನಾವಣೆಗೆ ವಿ.ವಿ.ಪ್ಯಾಟ್‌ಗಳನ್ನು ಬಳಸುವ ಕಾರಣ ಒಬ್ಬ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಪ್ರತಿ ಮತಗಟ್ಟೆಗೆ ತಲಾ ನಾಲ್ವರಂತೆ ಒಟ್ಟು 7,472 ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯ 92 ಮತದಾನ ಕೇಂದ್ರಗಳಿಗೆ ಯಾವುದೇ ಮಾದರಿಯ ದೂರವಾಣಿ/ ಮೊಬೈಲ್ ಸಂಪರ್ಕವಿಲ್ಲ. ಸಾಧ್ಯವಿರುವ ಪ್ರದೇಶಗಳಿಗೆ ನಿಸ್ತಂತು ಸಂಪರ್ಕ ಬಳಸಲಾಗುವುದು. ಉಳಿದೆಡೆ ತಲಾ ಇಬ್ಬರು ರನ್ನರ್‌ಗಳನ್ನು ನಿಯುಕ್ತಿಗೊಳಿಸಲು ಉದ್ದೇಶಿಸಲಾಗಿದೆ ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ ಮಾತನಾಡಿ, ‘286 ಸೂಕ್ಷ್ಮ ಮತ್ತು 78 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅವುಗಳಿಗೆ ಕೇಂದ್ರ ಅರೆಸೈನಿಕ ಪಡೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು. ಅಪರಾಧ ಹಿನ್ನೆಲೆಯ 317 ಜನರನ್ನು ಗುರುತಿಸಲಾಗಿದ್ದು, 314 ಜನರ ಮೇಲೆ 1,119 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅವರ ಪೈಕಿ 180 ಜನರಿಂದ ಭದ್ರತಾ ಠೇವಣಿ ಪಡೆದು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಗೂಂಡಾ ಕಾಯ್ದೆ: ತೀವ್ರ ಅಪರಾಧ ಹಿನ್ನೆಲೆಯಿರುವ ಒಬ್ಬರ ಮೇಲೆ ಗೂಂಡಾ ಕಾಯ್ದೆ ಹಾಗೂ ಐವರನ್ನು ಗಡಿಪಾರು ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ. ಮಾಜಾಳಿ ಮತ್ತು ಅನಮೋಡ ಸೇರಿದಂತೆ ಒಟ್ಟು 30 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದೂ ಹೇಳಿದರು.

ಜಿಲ್ಲೆಯಲ್ಲಿ ಪರವಾನಗಿ ಹೊಂದಿರುವ 8,579 ಬಂದೂಕುಗಳಿದ್ದು, ಅವುಗಳನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ಜಮೆ ಮಾಡಲು ಆದೇಶಿಸಲಾಗಿದೆ. 2,000 ಬಂದೂಕುಗಳು ಈಗಾಗಲೇ ಠಾಣೆಯಲ್ಲಿ ಜಮೆಯಾಗಿವೆ ಎಂದರು. 

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘144 ಸೆಕ್ಟರ್ ಅಧಿಕಾರಿಗಳು, 36 ಫ್ಲೈಯಿಂಗ್ ಸ್ಕ್ವಾಡ್, 29 ಚೆಕ್‌ಪೋಸ್ಟ್‌ಗಳಿಗೆ 174 ಎಸ್‌ಎಸ್‌ಟಿ ತಂಡಗಳು ಹಾಗೂ ತಲಾ ಆರು ಅಕೌಂಟಿಂಗ್ ಟೀಮ್ ಮತ್ತು ವಿ.ವಿ.ಟಿ, ಹಾಗೂ 21 ವಿ.ಎಸ್‌.ಟಿ ತಂಡಗಳನ್ನು ರಚಿಸಲಾಗಿದೆ’ ಎಂದು ಅಂಕಿ ಅಂಶಗಳನ್ನು ನೀಡಿದರು.

‘ಮಾಹಿತಿ ನೀಡುವುದು ಒಳಿತು’: ಖಾಸಗಿ ಹಾಗೂ ರಾಜಕೀಯೇತರ ಕಾರ್ಯಕ್ರಮಗಳ ಆಯೋಜನೆಗೆ ಅನುಮತಿ ಪಡೆಯಬೇಕಿಲ್ಲ. ಆದರೆ, ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಒಳಿತು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಸಮಾರಂಭಗಳ ಸಂದರ್ಭದಲ್ಲಿ ಯಾವುದೇ ಗೊಂದಲ ಆಗದಿರಲು ಇದು ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ: ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲು ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ರಾಜಕೀಯ ಪಕ್ಷಗಳು ಹಮ್ಮಿಕೊಳ್ಳುವ ಸಭೆ ಸಮಾರಂಭ, ರ‍್ಯಾಲಿ, ವಾಹನ ಬಳಕೆಗೆ 24 ಗಂಟೆಯೊಳಗೆ ಅನುಮತಿ ನೀಡಲು ‘ಸುವಿಧಾ’ ತಂತ್ರಾಂಶದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಡಾ.ಹರೀಶಕುಮಾರ್ ಹೇಳಿದರು.

ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಶುಲ್ಕರಹಿತ ದೂರವಾಣಿ ಸಂಖ್ಯೆ 1950 ಮತ್ತು ವಾಟ್ಸ್‌ ಆ್ಯಪ್: 94835 11015 ಮೂಲಕ ನೀಡಬಹುದು. ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ‘ಸಿ– ವಿಜಿಲ್’ ಆ್ಯಪ್‌ನಲ್ಲಿ ಪಡೆಯಬಹುದು. ಅಲ್ಲೇ ದೂರನ್ನೂ ದಾಖಲಿಸಬಹುದು. ಇದು ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೀಶ್ವರ್ ಇದ್ದರು. 

ಅಂಕಿ ಅಂಶಗಳು

* ಉತ್ತರ ಕನ್ನಡ ಲೋಕಸಭಾ ಕ್ಷೇತ್ರ 6 

* ವಿಧಾನಸಭಾ ಕ್ಷೇತ್ರಗಳು 1,435

* ಉ.ಕ.ದಲ್ಲಿರುವ ಮತಗಟ್ಟೆಗಳು 485

ಖಾನಾಪುರ, ಕಿತ್ತೂರು ಕ್ಷೇತ್ರದಲ್ಲಿ ಮತಗಟ್ಟೆಗಳು

1,108

ಸೇವಾ ಮತದಾರರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !