ಬುಧವಾರ, ಸೆಪ್ಟೆಂಬರ್ 18, 2019
28 °C
ಮುಚ್ಚಿ ಹೋಗಿರುವ ಬಸಿಗಾಲುವೆ; ಅಡಿಕೆಗೆ ಕೊಳೆ ರೋಗ

ತೋಟ, ಗದ್ದೆಯಲ್ಲಿ ಹಾಸಿದ ಮರಳು

Published:
Updated:
Prajavani

ಶಿರಸಿ: ಗಂಗಾವಳಿ ಪ್ರವಾಹವು ಮರಳಿನ ಪರ್ವತವನ್ನೇ ತಂದು ಹರಡಿದೆ. ನೆರೆಪೀಡಿತ ಪ್ರದೇಶಗಳ ಕೃಷಿಭೂಮಿಗಳೆಲ್ಲವೂ ಮರಳಿನ ಹಾಸಿನಿಂದ ತುಂಬಿವೆ. ತೋಟದ ಗಡಿಗಳು, ಬಸಿಗಾಲುವೆಗಳು ಮರಳಿನ ಅಡಿ ಸೇರಿವೆ.

ಗಂಗಾವಳಿ ನದಿ ತಟದಲ್ಲಿ ಪ್ರವಾಹಕ್ಕೆ ಸಿಲುಕಿರುವ ಹೆಗ್ಗಾರ, ಕಲ್ಲೇಶ್ವರ ಭಾಗದ ಅಡಿಕೆ ತೋಟ, ಸಾಗುವಳಿ ಭೂಮಿಯಲ್ಲಿ ಒಂದೂವರೆಯಿಂದ ಮೂರು ಅಡಿಯಷ್ಟು ಮರಳು ಶೇಖರಣೆಯಾಗಿದೆ. ತೋಟದಲ್ಲಿ ಮನೆ ಕಟ್ಟಿಕೊಂಡಿದ್ದ ಹಲವರ ಮನೆಯೊಳಗೆ ನೀರು ಹೊಕ್ಕಿದ್ದರೆ, ಇನ್ನು ಕೆಲವರ ಮನೆಗಳು ನೀರಿನ ಸೆಳವಿಗೆ ಕುಸಿದು ಬಿದ್ದಿವೆ. ನೆರೆ ಇಳಿದ ಮೇಲೆ ಎಲ್ಲರೂ ಅವರ ಮನೆಗಳ ಸ್ಥಿತಿಯನ್ನು ಕಂಡು ಮರುಗಿದ್ದಾರೆ.

‘40 ಜನರು ಒಂದು ದಿನವಿಡೀ ಕೆಲಸ ಮಾಡಿ, ಮನೆಯೊಳಗೆ ಸೇರಿದ್ದ ಸುಮಾರು ಮೂರು ಲೋಡ್ ಆಗುವಷ್ಟು ಕೆಸರನ್ನು ಹೊರಹಾಕಿದೆವು. ಮನೆಯನ್ನು ಸ್ವಚ್ಛಗೊಳಿಸುವುದೇ ಬಿಡುವಿಲ್ಲದ ಕೆಲಸ. ಇದರ ನಡುವೆ ತೋಟಕ್ಕೆ ಮದ್ದು ಹೊಡೆಯಬೇಕಾದ ಅನಿವಾರ್ಯತೆ. ಕೊಳೆರೋಗ ಇಡೀ ತೋಟವನ್ನು ವ್ಯಾಪಿಸಿದೆ. ಮರದ ಬುಡದಲ್ಲಿ ಅಡಿಕೆಕಾಯಿಗಳ ರಾಶಿ ಬಿದ್ದಿದೆ. ನಮಗೆ ಬದುಕು ನೀಡುವ ಬೆಳೆಯನ್ನು ರಕ್ಷಿಸಿಕೊಳ್ಳದಿದ್ದರೆ, ಭವಿಷ್ಯ ಇನ್ನಷ್ಟು ಕಠಿಣವಾಗುತ್ತದೆ’ ಎನ್ನುತ್ತ ಕೊಳೆ ಪಂಪ್‌ ಅನ್ನು ಎತ್ತಿಕೊಂಡು ತೋಟದೆಡೆಗೆ ಸಾಗಿದರು ಪ್ರಶಾಂತ ಭಟ್ಟ.

’ತೋಟದಲ್ಲಿ ಅಡಿಕೆ ಮರದ ಬುಡದಲ್ಲಿ ಮರಳು ಸೇರಿದೆ. ಬಸಿಗಾಲುವೆಯೂ ಇಲ್ಲ. ಇದರಿಂದ ತೋಟ ಸಂಪೂರ್ಣ ಹಾಳಾಗುತ್ತದೆ. ಇದಷ್ಟು ಬೆಳೆಯನ್ನಾದರೂ ಉಳಿಸಿಕೊಳ್ಳಲು ಅಡಿಕೆಗೆ ಬೋರ್ಡೊ ಸಿಂಪರಣೆ ಮಾಡಲೇಬೇಕು. ಸುಮಾರು 70 ರೈತರ 200 ಎಕರೆಯಷ್ಟು ತೋಟಕ್ಕೆ ಕೊಳೆ ರೋಗ ಹರಡಿದೆ. ಪ್ರವಾಹದಲ್ಲಿ ಯೋಗೇಶ ಭಟ್ಟ ಅವರ ಮನೆ ಮುರಿದು ಬಿದ್ದಿದೆ. ಅವರಿಗೆ ಮನೆ ಕಟ್ಟಿಕೊಳ್ಳುವ ಜೊತೆಗೆ ತೋಟದೆಡೆಗೂ ಅಷ್ಟೇ ಲಕ್ಷ್ಯಹಾಕಬೇಕಾದ ಸಂದರ್ಭ ಎದುರಾಗಿದೆ’ ಎನ್ನುತ್ತಾರೆ ಗೋವಿಂದ ಪಟಗಾರ.

ಬೀಳುವ ಆತಂಕದಲ್ಲಿ ಮರಗಳು: ಪ್ರವಾಹದಲ್ಲಿ ಅನೇಕ ತೆಂಗು, ಅಡಿಕೆ ಮರಗಳು ಮುರಿದು ಬಿದ್ದಿವೆ. ನದಿಯ ಅಗಲ 30–50 ಅಡಿಗಳಷ್ಟು ವಿಸ್ತಾರವಾಗಿ, ತೋಟದ ಅಂಚಿನ ಮರಗಳು ಬೀಳುವ ಸ್ಥಿತಿಯಲ್ಲಿವೆ. ನದಿಯ ಅಂಚಿನಲ್ಲಿ ಭವಿಷ್ಯದಲ್ಲಿ ಭೂಕುಸಿತ, ಮಣ್ಣಿನ ಸವಕಳಿ ತಪ್ಪಿಸಲು ಅರಣ್ಯ ಇಲಾಖೆ ಕ್ರಮವಹಿಸಬೇಕು. ಮಣ್ಣು ಕುಸಿತ ತಡೆಗಟ್ಟುವ ಸಸಿಗಳನ್ನು ನಾಟಿ ಮಾಡಬೇಕು ಅಥವಾ ರೈತರಿಗೆ ವಿತರಿಸಬೇಕು’ ಎಂದು ಸುಬ್ರಾಯ ಪಟಗಾರ ಒತ್ತಾಯಿಸಿದರು.

Post Comments (+)