ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಗೋಲ್ಡ್ ಚಾರಿಯಟ್ ರೈಲು ಸಂಚಾರ: ಸುರೇಶ ಅಂಗಡಿ

ಅಂಬೇವಾಡಿ–ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಚಾಲನೆ
Last Updated 3 ನವೆಂಬರ್ 2019, 14:36 IST
ಅಕ್ಷರ ಗಾತ್ರ

ಜೊಯಿಡಾ: ಎರಡೂವರೆ ದಶಕಗಳ ಬೇಡಿಕೆಯಾಗಿದ್ದ, ಬಹುನಿರೀಕ್ಷಿತ ಅಂಬೇವಾಡಿ–ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಭಾನುವಾರ ಚಾಲನೆ ನೀಡಿದರು.

₹ 40 ಕೋಟಿ ನಷ್ಟದಲ್ಲಿದ್ದ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿತ್ತು. ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ, ರೈಲ್ವೆ ಇಲಾಖೆ ರಾಜ್ಯ ಸರ್ಕಾರದಿಂದ ಇದನ್ನು ಹಸ್ತಾಂತರಿಸಿಕೊಂಡು, ಡಿಸೆಂಬರ್, ಜನೆವರಿ ವೇಳೆಗೆ ಸಂಚಾರ ಪುನರಾರಂಭಿಸಲು ಯೋಚಿಸಿದೆ. ಈ ಭಾಗಕ್ಕೂ ಆ ಸೌಲಭ್ಯ ವಿಸ್ತರಿಸಲಾಗುವುದು ಎಂದು ಸುರೇಶ ಅಂಗಡಿ ಪ್ರಕಟಿಸಿದರು.

ಪ್ರಹ್ಲಾದ್ ಜೋಶಿ ಮಾತನಾಡಿ, ‘ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಾಣಗೊಂಡು, ಸಂಚಾರ ಪ್ರಾರಂಭವಾದರೆ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಾಗಿಲು ತೆರೆದಂತಾಗುತ್ತದೆ. ಸಮಸ್ಯೆ ನಮ್ಮ ಕೈಯಲ್ಲಿದ್ದರೆ, ಎಂದೋ ಅದನ್ನು ಬಗೆಹರಿಸಿಬಿಡುತ್ತಿದ್ದೆವು. ನಿಮ್ಮವರೇ ಬಹಳ ಕಾಲದಿಂದ ಕೋರ್ಟ್, ಕಚೇರಿಗೆ ಈ ಪ್ರಕರಣವನ್ನು ಒಯ್ದ ಕಾರಣ ರೈಲು ಮಾರ್ಗ ನಿರ್ಮಾಣವಾಗಿಲ್ಲ. ಈಗಲೂ ಅವಕಾಶ ಕೂಡಿ ಬಂದರೆ ಆದಷ್ಟು ಶೀಘ್ರ ಈ ಮಾರ್ಗ ನಿರ್ಮಾಣ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಮಹತ್ವಾಕಾಂಕ್ಷೆಯ ಧಾರವಾಡ–ಬೆಂಗಳೂರು ನಡುವಿನ ರೈಲ್ವೆ ಮಾರ್ಗದ ದ್ವಿ ಪಥ ಕಾಮಗಾರಿಯನ್ನು 2021ರ ಒಳಗೆ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ‘ಇದು ಪೂರ್ಣಗೊಂಡರೆ, ಕೇವಲ ಐದು ತಾಸಿನಲ್ಲಿ ಬೆಂಗಳೂರು ತಲುಪಬಹುದು. ರೈಲ್ವೆ ಇಲಾಖೆಯಲ್ಲಿ ಆಮೂಲಾಗ್ರ ಪರಿವರ್ತನೆ ತರಲು ಕೇಂದ್ರ ಸರ್ಕಾರ ಕಾರ್ಯಕ್ರಮ ರೂಪಿಸಿದೆ. 2014–18ರ ಅವಧಿಯಲ್ಲಿ ₹ 4 ಲಕ್ಷ ಕೋಟಿ ಹಣ ತೊಡಗಿಸಿದ್ದರೆ, 2030ರ ಒಳಗಾಗಿ ₹ 50 ಲಕ್ಷ ಕೋಟಿ ಹಣ ತೊಡಗಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ಶಾಸಕ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್, ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT