ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತ್ಕಾಲಿಕ ಕ್ರಮಕ್ಕೆ ಆಕ್ರೋಶ

ಅಮ್ಮಾಜಿ ಕೆರೆಯ ದಡದಲ್ಲಿ ತಾತ್ಕಾಲಿಕ ಕ್ರಮ
Last Updated 6 ಡಿಸೆಂಬರ್ 2021, 4:58 IST
ಅಕ್ಷರ ಗಾತ್ರ

ಮುಂಡಗೋಡ: ಇಲ್ಲಿನ ಅಮ್ಮಾಜಿ ಕೆರೆಯ ದಡದ ಮೇಲೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬ ಆಗ್ರಹ ಸಾರ್ವಜನಿಕರಿಂದ ಬಲವಾಗಿ ಕೇಳಿಬಂದಿತ್ತು. ಕೊನೆಗೂ ಎಚ್ಚೆತ್ತುಕೊಂಡಿರುವ ಲೋಕೋಪಯೋಗಿ ಇಲಾಖೆಯವರು ಮಣ್ಣಿನ ಚೀಲಗಳನ್ನಿಟ್ಟು, ದಡದ ಉದ್ದಕ್ಕೂ ರಿಬ್ಬನ್‌ ಕಟ್ಟಿದ್ದಾರೆ.

ಆದರೆ ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುವ ಬದಲು, ಶಾಶ್ವತ ಕೆಲಸ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಮುಂಡಗೋಡ-ಅಣಶಿ ರಾಜ್ಯ ಹೆದ್ದಾರಿಯ 46ರಲ್ಲಿ ಈ ಅಮ್ಮಾಜಿ ಕೆರೆಯಿದೆ. ಆದರೆ ಕೆರೆಯ ದಡದ ಮೇಲಿನ ರಸ್ತೆ ತಿರುವುಮುರುವುಗಳಿಂದ ಕೂಡಿದ್ದು, ಪ್ರಯಾಣಿಕರಿಗೆ ಕೆಲವೊಮ್ಮೆ ದಾರಿತಪ್ಪಿಸುತ್ತದೆ. ರಸ್ತೆಗೆ ತಾಗಿಯೇ ಇರುವ ಕೆರೆಯ ದಡದ ಮೇಲೆ ಯಾವುದೇ ಅಡೆತಡೆಗಳಿಲ್ಲ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದರೇ, ವಾಹನಗಳು ನೇರವಾಗಿ ಕೆರೆಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅಪಾಯಕಾರಿ ರಸ್ತೆಯ ಪಕ್ಕ, ಕೆರೆಯ ದಡದ ಮೇಲೆ ಕ್ರ್ಯಾಶ್‌ ಬಾರಿಯರ್‌ ಅಳವಡಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಕಾರೊಂದು ನಿಯಂತ್ರಣ ತಪ್ಪಿ ಇದೇ ಕೆರೆಯಲ್ಲಿ ಮುಳುಗಿ ದಂಪತಿ ಮೃತಪಟ್ಟಿದ್ದರು. ಅಪಘಾತಗಳನ್ನು ತಡೆಯಲಿಕ್ಕಾದರೂ, ಕೆರೆಯ ದಡದ ಮೇಲೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಚೀಲದಲ್ಲಿ ಮಣ್ಣು ತುಂಬಿ, ರಿಬ್ಬನ್‌ ಕಟ್ಟಿದರೆ ಕೆರೆಯಿದೆ ಎಂದು ತಿಳಿಸಬಹುದಷ್ಟೆ. ಆದರೆ ನಿಯಂತ್ರಣ ತಪ್ಪಿದ ವಾಹನಗಳನ್ನು ತಡೆಯಲು ಇದರಿಂದ ಆಗದು. ತಾತ್ಕಾಲಿಕ ಕೆಲಸ ಮಾಡುವ ಬದಲು, ಪ್ರಯಾಣಿಕರ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಆಟೊ ಚಾಲಕ ಉದಯ ಬೆಂಡ್ಲಗಟ್ಟಿ ಒತ್ತಾಯಿಸಿದರು.

ʼಕೆಲವು ದಿನಗಳ ಹಿಂದೆ ಭೀಕರ ಅಪಘಾತ ನಡೆದ ನಂತರ, ಈ ಕೆರೆಯ ದಡದಲ್ಲಿ ಪ್ರಯಾಣಿಸುವಾಗ ಸಹಜವಾಗಿಯೇ ಹೆದರಿಕೆ ಆಗುತ್ತದೆ. ಇಬ್ಬನಿ ಬಿದ್ದಾಗ, ಮಳೆ ಬರುವಾಗ ಅಥವಾ ಎದುರಿನ ವಾಹನದ ಹೆಚ್ಚು ಪ್ರಜ್ವಲಿಸುವ ಬೆಳಕಿನಿದಲೂ ಕೆಲವೊಮ್ಮೆ ತಿಳಿಯದೇ ರಸ್ತೆ ಪಕ್ಕಕ್ಕೆ ಹೋಗಬೇಕಾಗುತ್ತದೆ. ಇಂತಹ ಸಮಯದಲ್ಲಿ ಆಕಸ್ಮಿಕವಾಗಿ ವಾಹನಗಳು ಕೆರೆಯಲ್ಲಿ ಇಳಿಯುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಲಾರಿ ಚಾಲಕ ಹನಮಂತ ಬಂಕಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT