ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರಾವಳಿ ಪ್ಯಾಕೇಜ್’ ಮಲೆನಾಡಿಗೆ ವಿಸ್ತರಿಸಲು ಚಿಂತನೆ

ರೈತರಿಗೆ ಭರವಸೆ ನೀಡಿದ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ
Last Updated 18 ಜೂನ್ 2019, 11:11 IST
ಅಕ್ಷರ ಗಾತ್ರ

ಶಿರಸಿ: ಭತ್ತ ಬೆಳೆಯುವ ರೈತರಿಗೆ ಸಹಾಯಧನ ನೀಡುವ ಸಂಬಂಧ ಅನುಷ್ಠಾನಗೊಳಿಸಿರುವ ಕರಾವಳಿ ಪ್ಯಾಕೇಜ್ ಅನ್ನು ಮಲೆನಾಡಿನ ಪ್ರದೇಶಕ್ಕೂ ವಿಸ್ತರಿಸಲು ಚಿಂತನೆ ನಡೆಸಲಾಗುವುದು ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಭರವಸೆ ನೀಡಿದರು.

ಮಂಗಳವಾರ ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣ ವಿತರಿಸಿ, ನಂತರ ರೈತರೊಂದಿಗೆ ಅವರು ಸಂವಾದ ನಡೆಸಿದರು. ಕರಾವಳಿಯಲ್ಲಿ ಅಧಿಕ ಮಳೆ ಸುರಿದರೆ, ಭತ್ತದ ಬೆಳೆ ಕೊಚ್ಚಿಕೊಂಡು ಹೋಗುತ್ತದೆ. ಈ ಕಾರಣಕ್ಕೆ ಅನೇಕ ರೈತರು ಭತ್ತ ಬೆಳೆಯುವುದನ್ನು ಕೈಬಿಟ್ಟಿದ್ದಾರೆ. ಈ ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಹೆಕ್ಟೇರ್‌ಗೆ ₹ 7500 ಸಹಾಯಧನ ನೀಡುವ ಕರಾವಳಿ ಪ್ಯಾಕೇಜ್ ನೀಡಲಾಗಿದೆ ಎಂದರು.

ಜಿ.ಆರ್.ಹೆಗಡೆ ಬೆಳ್ಳೆಕೇರಿ ಅವರು, ‘ಭತ್ತ ಬೆಳೆಯುವವರು ಕಡಿಮೆಯಾಗುತ್ತಿದ್ದಾರೆ. ಕೇರಳ ಮಾದರಿಯಲ್ಲಿ ರಾಜ್ಯದ ಭತ್ತ ಬೆಳೆಗಾರರಿಗೆ ಸಹಾಯಧನ ನೀಡಬೇಕು’ ಎಂದು ವಿನಂತಿಸಿದಾಗ, ಸಚಿವರು ಈ ಮೇಲಿನಂತೆ ಉತ್ತರಿಸಿದರು. ಉದ್ಯೋಗ ಖಾತ್ರಿ ಯೋಜನೆಯನ್ನು ಭತ್ತ ಕೃಷಿಗೆ ವಿಸ್ತರಿಸಬೇಕು ಎಂದು ರೈತರು ಒತ್ತಾಯಿಸಿದರು.

ಬೆಂಬಲ ಬೆಲೆಯಡಿ ರೈತರ ಹೆಸರು ನೋಂದಣಿ ಮಾಡಿಕೊಂಡಿದ್ದರೂ, ಭತ್ತ ಖರೀದಿ ಮಾಡುತ್ತಿಲ್ಲ. ಇದಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು. ಮಲೆನಾಡಿನಲ್ಲಿ ಶೇ 75ರಷ್ಟು ರೈತರು ಮಾನವಶಕ್ತಿ ಬಳಕೆ ಮಾಡಿ, ಭತ್ತ ನಾಟಿ ಮಾಡುವುದರಿಂದ, ಯಂತ್ರೋಪಕರಣಕ್ಕೆ ನೀಡುವ ಸಹಾಯಧನವನ್ನು ಇದಕ್ಕೂ ವಿಸ್ತರಿಸಬೇಕು. ಕೃಷಿಗೆ ಅನುಕೂಲವಾಗುವಂತೆ ಕೆರೆಗಳ ಹೂಳೆತ್ತಬೇಕು. ಕೃಷಿಕರ ಕ್ಷೇತ್ರ ನಿಗದಿಪಡಿಸಿ, ಸೌಲಭ್ಯ ನೀಡುವ ಬದಲು, ಎಲ್ಲರಿಗೂ ಎಲ್ಲ ಸೌಲಭ್ಯ ನೀಡಬೇಕು. ನೀರಾವರಿಗೆ ನೀಡುವ ಪೈಪ್ ಗುಣಮಟ್ಟದಿಂದ ಇರಬೇಕು ಎಂದು ರೈತರು ಸಚಿವರ ಬಳಿ ವಿನಂತಿಸಿದರು.

ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ಆರಂಭಿಸುವ ಸಂಬಂಧ ಸಹಕಾರಿ ಸಚಿವರ ಜೊತೆ ಚರ್ಚಿಸಲಾಗುವುದು. ರೈತರು ಹೈಬ್ರೀಡ್ ಜಾತಿಯ ಭತ್ತ ಬೆಳೆಯಲು ಅಧಿಕಾರಿಗಳು ಪ್ರೇರೇಪಿಸಬೇಕು. ನೀರಾವರಿ ಪೈಪ್‌ಗಳು ಗುಣಮಟ್ಟದ್ದಾಗಿಲ್ಲವೆಂದಾದಲ್ಲಿ, ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ರೈತರು ಸಬ್ಸಿಡಿಯಡಿ ಪೈಪ್ ಖರೀದಿಸಲು, ಸರ್ಕಾರ ಏಳು ಕಂಪನಿಗಳನ್ನು ನಿಗದಿಪಡಿಸಿದೆ. ಕಳಪೆ ಗುಣಮಟ್ಟದ ಪೈಪ್ ಪೂರೈಸಿದಲ್ಲಿ, ಅಂತಹ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಇದಕ್ಕೂ ಪೂರ್ವ ಸಚಿವರು ಸೋಂದಾ ಕತ್ರಿಯಲ್ಲಿರುವ ಸಂಸ್ಕರಣಾ ಘಟಕ, ಹುಲೇಕಲ್‌ನಲ್ಲಿ ಕೃಷಿ ಹೊಂಡ ವೀಕ್ಷಿಸಿದರು. ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ, ಕೃಷಿಕ ಸಮಾಜದ ಎಸ್.ಎನ್. ಭಟ್ಟ, ಸಚಿವರ ವಿಶೇಷಾಧಿಕಾರಿ ಎ.ಬಿ.ಪಾಟೀಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಇದ್ದರು. ಇಲಾಖೆ ಉಪನಿರ್ದೇಶಕ ಟಿ.ಎಚ್.ನಟರಾಜ ನಿರೂಪಿಸಿದರು.

ನಂತರ ಸಚಿವರು ಕದಂಬ ಮಾರ್ಕೆಟಿಂಗ್‌ಗೆ ಭೇಟಿ ನೀಡಿ, ಅಲ್ಲಿನ ಕಾಳುಮೆಣಸು ಸಂಸ್ಕರಣಾ ಘಟಕ ವೀಕ್ಷಿಸಿದರು. ಸಾವಯವ ಕೃಷಿಕರ ಜೊತೆ ಸಂವಾದ ನಡೆಸಿದರು.

ಎರಡು ತಾಸು ವಿಳಂಬ

ನಿಗದಿಯಂತೆ ಬೆಳಿಗ್ಗೆ 9.30ಕ್ಕೆ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ರೈತರೊಂದಿಗೆ ಸಂವಾದ ನಡೆಸಬೇಕಿತ್ತು. ಸಚಿವರು ಹುಲೇಕಲ್ ಭಾಗಕ್ಕೆ ಹೋಗಿದ್ದರಿಂದ, ಎರಡು ತಾಸು ವಿಳಂಬವಾಗಿ ಕಾರ್ಯಕ್ರಮ ಆರಂಭವಾಯಿತು. ‘ಇಷ್ಟು ತಡವಾಗುತ್ತದೆ ಎಂದಾದರೆ ರೈತರಿಗೆ ಮೊದಲೇ ತಿಳಿಸಬೇಕಿತ್ತು. ನಮಗೆ ನಮ್ಮ ಕೃಷಿ ಕೆಲಸಗಳಿರುತ್ತವೆ’ ಎಂದು ಕೆಲವು ರೈತರು ಸಚಿವರ ಬಳಿ ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT