ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂದೋಟದಲ್ಲಿ ಚಿಣ್ಣರ ಆಟ

ಭದ್ರಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಂಗಳದಲ್ಲಿ ಕಂಗೊಳಿಸುವ ಉದ್ಯಾನ
Last Updated 1 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಶಿರಸಿ: ನಿತ್ಯ ಬೆಳಿಗ್ಗೆ ಶಾಲೆಗೆ ಬರುವುದೆಂದರೆ ಈ ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ. ಸ್ಕೂಲ್ ಬ್ಯಾಗ್‌ ಅನ್ನು ಕೊಠಡಿಯೊಳಗಿಟ್ಟು ಉದ್ಯಾನಕ್ಕೆ ನುಗ್ಗುವ ಪುಟಾಣಿಗಳು, ತಾವೇ ನೆಟ್ಟು ಬೆಳೆಸಿದ ಗಿಡಕ್ಕೆ ನೀರೆರೆಯುತ್ತಾರೆ. ಅರಳಿದ ಹೂಗಳೊಡನೆ ಮಾತಾಡುತ್ತಾರೆ. ಚಿಕ್ಕ–ದೊಡ್ಡ, ಕೆಂಪು–ಹಳದಿ ಹೂಗಳನ್ನು ಹೋಲಿಕೆ ಮಾಡಿ, ಸಂಭ್ರಮಿಸುತ್ತಾರೆ.

ತಾಲ್ಲೂಕಿನ ಭದ್ರಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವಿಶೇಷತೆಗಳಿವೆ. ಒಂದು ಉದ್ಯಾನ, ಇನ್ನೊಂದು ಇಂಗ್ಲಿಷ್ ಕಾರ್ನರ್. ಶಾಲೆಯ ಮಕ್ಕಳು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪಾಲಕರು, ಊರವರೆಲ್ಲ ಸೇರಿ ಶಾಲೆಯ ಅಂಗಳವನ್ನೇ ಉದ್ಯಾನವನ್ನಾಗಿ ರೂಪಿಸಿದ್ದಾರೆ. ಅಲ್ಲಿ ತರಹೇವಾರಿ ಹೂಗಳು ಅರಳುತ್ತವೆ, ಅವುಗಳ ನಡುವೆ ಔಷಧ ಸಸ್ಯಗಳು ಕಂಪು ಸೂಸುತ್ತವೆ.

ಹೂ ಗಿಡಗಳನ್ನು ನಾಟಿ ಮಾಡುವಾಗ ಊರವರು ಬಂದು, ಗೊಬ್ಬರ, ಸಗಣಿ ಹಾಕಿ ಮಣ್ಣನ್ನು ಹದಗೊಳಿಸಿಕೊಡುತ್ತಾರೆ. ಪುಟ್ಟ ಮಕ್ಕಳು ಅದರೊಳಗೆ ಗಿಡ ನೆಟ್ಟು ಆರೈಕೆ ಮಾಡುತ್ತಾರೆ. ‘35ಕ್ಕೂ ಹೆಚ್ಚು ಜಾತಿಯ ಹೂವಿನ ಗಿಡಗಳು ಉದ್ಯಾನದಲ್ಲಿವೆ. ಚಿಕ್ಕ ಮಕ್ಕಳಿಗೆ ನೀರನ್ನು ಎತ್ತಿತರಲು ಕಷ್ಟವೆಂದು, ಪೈಪ್‌ ಹಾಕಿ ವ್ಯವಸ್ಥೆಯನ್ನು ಸುಲಭಗೊಳಿಸಿದ್ದೇವೆ. ಶಾಲೆಗೆ ಬಂದರವೇ ಮಕ್ಕಳು ಮೊದಲು ಓಡುವುದು ಉದ್ಯಾನಕ್ಕೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮುಖ್ಯ ಶಿಕ್ಷಕ ಅರುಣ ನಾಯ್ಕ.

‘ಮಳೆಗಾಲದಲ್ಲಿ ತರಕಾರಿ ಗಿಡಗಳನ್ನು ಬೆಳೆದು ಬಿಸಿಯೂಟಕ್ಕೆ ಬಳಸುತ್ತೇವೆ. ಕಳೆದ ವರ್ಷ ಸವತೆಕಾಯಿ, ಬೀನ್ಸ್, ಉದ್ದ ಬೀನ್ಸ್, ಟೊಮೆಟೊ, ಸೊಪ್ಪು ಬೆಳೆದಿದ್ದೆವು. ಬೇಸಿಗೆ ಹತ್ತಿರ ಬರುತ್ತಿದ್ದಂತೆ ನೀರಿನ ಸಮಸ್ಯೆ ಎದುರಾಗುತ್ತದೆ. ಸಿಗುವ ನೀರು, ಊಟ ಮತ್ತು ಉದ್ಯಾನಕ್ಕೆ ಬಳಕೆಯಾಗುತ್ತದೆ’ ಎಂದು ಅವರು ತಿಳಿಸಿದರು.

‘ಕೂಲಿಕಾರ ಕುಟುಂಬದವರೇ ಹೆಚ್ಚಾಗಿರುವ ಊರಿನಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆಯಿದೆ. ಮಕ್ಕಳು ವಿದ್ಯಾವಂತರಾಗಬೇಕೆಂಬ ಹಂಬಲದಿಂದ ಶ್ರಮಜೀವಿಗಳು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಈ ಮಕ್ಕಳನ್ನು ಮುಂದಿನ ಸ್ಪರ್ಧೆಗೆ ಅಣಿಗೊಳಿಸುವ ಜತೆಗೆ ಅವರಿಗೆ ಇಂಗ್ಲಿಷ್ ಭಾಷೆ ಕಲಿಕೆ ಸುಲಭಗೊಳಿಸುವ ನಿಟ್ಟಿನಲ್ಲಿ ಇಂಗ್ಲಿಷ್ ಕಾರ್ನರ್ ರೂಪಿಸಿದ್ದೇನೆ. ಮಕ್ಕಳು ಆಡುತ್ತ, ನಲಿಯುತ್ತ ಭಾಷೆಯನ್ನು ಕಲಿಯುತ್ತಾರೆ’ ಎನ್ನುತ್ತಾರೆ ಸಹ ಶಿಕ್ಷಕಿ ರಂಜನಾ ಹೆಗಡೆ.

’ಅನೇಕ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು 300ಕ್ಕೂ ಹೆಚ್ಚು ಕಲಿಕೋಪಕರಣಗಳನ್ನು ತಯಾರಿಸಲಾಗಿದೆ. ನೀತಿ ಕಥೆ, ವಾಕ್ಯ ಪ್ರಕಾರಗಳು, ಪಾಠ, ವ್ಯಾಕರಣ ಭಾಗಗಳನ್ನು ಚಿತ್ರದ ಮೂಲಕ ಕಲಿಸುವುದರಿಂದ ಮಕ್ಕಳು ಅರಿವಿಲ್ಲದೇ, ಹೊಸ ಭಾಷೆಯೊಂದನ್ನು ಅಂತರ್ಗತ ಮಾಡಿಕೊಳ್ಳುತ್ತಾರೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT