ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ದೊಡ್ಡ ಯೋಜನೆ ಅಗತ್ಯ: ಸಂಸದ ಅನಂತಕುಮಾರ ಹೆಗಡೆ

Last Updated 19 ಜನವರಿ 2022, 15:01 IST
ಅಕ್ಷರ ಗಾತ್ರ

ಗೋಕರ್ಣ: ‘ಅಭಿವೃದ್ಧಿಯೆಂದರೆ ಕೇವಲ ರಿಬ್ಬನ್ ಕತ್ತರಿಸುವುದಲ್ಲ. ಅಭಿವೃದ್ಧಿ ಆಗಬೇಕಾದರೆ ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಯೋಜನೆಗಳು ಕಾರ್ಯಾರಂಭ ಆಗಬೇಕು. ಜಿಲ್ಲೆಯ ಅಭಿವೃದ್ಧಿಗೆ ಹೊಸ ದಿಕ್ಕಿನ, ಹೊಸ ಚಿಂತನೆ ನಡೆಸೋಣ’ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಸಮೀಪದ ಗಂಗೆಕೊಳ್ಳದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆಯ ಮೂರನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜಕೀಯದ ಮೇಲೆ ನಿಂತು ಅಭಿವೃದ್ಧಿಯಾಗಬೇಕೇ ಹೊರತು, ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬಾರದು. ಒತ್ತಾಸೆಯಿಂದ ಅಭಿವೃದ್ಧಿಯ ಕೆಲಸಗಳಿಗೆ ಗಮನಕೊಡಬೇಕು. ರಾಜಕಾರಣದ ತೀರ್ಮಾನದಿಂದ ಅಲ್ಲ’ ಎಂದು ಹೇಳಿದರು.

‘ಅಭಿವೃದ್ಧಿಗೆ ತೊಡಕು ಸಹಿಸುವುದಿಲ್ಲ’:

‘ಪ್ರತಿಭಟನೆಯ ನೆಪದಲ್ಲಿ ಅಭಿವೃದ್ಧಿಗೆ ತೊಡಕು ಉಂಟು ಮಾಡುವುದನ್ನೂ ಸಹಿಸುವುದಿಲ್ಲ. ಕಾಲ ಬದಲಾಗಿದೆ. ಈಗಿನ ಪ್ರಧಾನಮಂತ್ರಿಯ ಯೋಜನೆಯಲ್ಲಿ ಯಾರಿಗೂ ಬಿಡಿ ಕಾಸು ಕೊಡುವ ಪ್ರಮೇಯವೇ ಇಲ್ಲ’ ಎಂದು ಅನಂತಕುಮಾರ ಹೆಗಡೆ ಹೇಳಿದರು.

‘ಜಿಲ್ಲೆಯಲ್ಲಿ ಬಂದರು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಉತ್ತಮ ರಸ್ತೆ ಅಭಿವೃದ್ಧಿಯಿಂದ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಯಲು ಸಾಧ್ಯ. ಇದರಿಂದ ಸ್ಥಳೀಯರ ಆರ್ಥಿಕ ಮಟ್ಟವೂ ಉತ್ತಮಗೊಳ್ಳುವುದು’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ‘ನನ್ನ ಕ್ಷೇತ್ರದಲ್ಲಿ ₹ 3.47 ಕೋಟಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದು ಸಂತೋಷದ ವಿಷಯ. ಇದಕ್ಕೆಲ್ಲಾ ಸಂಸದರ ಇಚ್ಛಾಶಕ್ತಿಯೇ ಕಾರಣ. ಇನ್ನೂ ಹೆಚ್ಚಿನ ಅಭಿವೃದ್ಧಿಯ ಭರವಸೆಯನ್ನೂ ನೀಡಿದ್ದಾರೆ. ಗಂಗೆಕೊಳ್ಳದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಶಾಲೆಯಿಂದ ಈ ಭಾಗದ ಚಿತ್ರಣವೇ ಬದಲಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿ.ಜೆ.ಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಂಜುನಾಥ ಜನ್ನು, ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಶ್ರೀ ಅಂಕೋಲೆಕರ್, ತೊರ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದು ಕವರಿ, ಹನೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಗೌಡ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಹೇಮಂತ ಗಾಂವಕರ್, ವಕ್ತಾರ ನಾಗರಾಜ ನಾಯಕ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ ನಾಯ್ಕ, ನಾಗರಾಜ ತಾಂಡೇಲ್, ದಯಾನಂದ ಮೆಹ್ತ, ಕುಮಟಾ ಎ.ಪಿ.ಎಂ.ಸಿ ಅಧ್ಯಕ್ಷ ರಮೇಶ ಪ್ರಸಾದ, ಪ್ರಮುಖ ನಾಗರಾಜ ನಾಯ್ಕ ತೊರ್ಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT