ಶುಕ್ರವಾರ, ನವೆಂಬರ್ 27, 2020
18 °C
ಬಿ.ಜೆ.ಪಿ ಆಡಳಿತದಿಂದ ಜನರ ಮನಸ್ಸಿಗೆ ಘಾಸಿ: ಎಚ್.ಕೆ.ಪಾಟೀಲ ಆರೋಪ

ಪ್ರಜಾಪ್ರಭುತ್ವ ವ್ಯವಸ್ಥೆ ಧಿಕ್ಕರಿಸಿದ ಸರ್ಕಾರ: ಎಚ್‌.ಕೆ.ಪಾಟೀಲ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‘ಪ್ರಜಾಪ್ರಭುತ್ವ ವ್ಯವಸ್ಥೆ ಧಿಕ್ಕರಿಸಿ, ಸಂಸದೀಯ ಸಂಸ್ಕೃತಿಗೆ ಅಗೌರವ ತೋರಿಸಿ, ಸಂಸದೀಯ ಮೌಲ್ಯಗಳಿಗೆ ವಿರೋಧವಾಗಿ ಬಿ.ಜೆ.ಪಿ ಆಡಳಿತ ನಡೆಸುತ್ತಿದೆ. ಇದರಿಂದ ಜನರ ಮನಸ್ಸಿಗೆ ಘಾಸಿಯಾಗಿದೆ’ ಎಂದು ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನ‍ಪರಿಷತ್‌ನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರಜ್ಞಾವಂತ ಮತದಾರರು ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಮನವಿ ಮಾಡಿದರು.

‘ರೈತ ವಿರೋಧಿಯಾದ ಮೂರು ಕಾಯ್ದೆಗಳನ್ನು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಇದನ್ನು ಮತಕ್ಕೆ ಹಾಕುವಂತೆ ಕಾಂಗ್ರೆಸ್, ಡಿ.ಎಂ.ಕೆ ಹಾಗೂ ಕೆಲವರು ಪಕ್ಷೇತರ ಸಂಸದರು ಒತ್ತಾಯಿಸಿದರು. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಒಪ್ಪಲಿಲ್ಲ. ಈ ಮೂಲಕ ಸಂಸದೀಯ ಮೌಲ್ಯಕ್ಕೆ ಅಪಮಾನ ಮಾಡಿತು’ ಎಂದು ದೂರಿದರು.

‘ದೇಶದಲ್ಲಿ ಕೋವಿಡ್‌ಗೆ ಲಸಿಕೆ ಕೊಡುವ ವಿಚಾರವನ್ನೂ ಬಿ.ಜೆ.ಪಿ.ಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಷ್ಟು ನೀಚಮಟ್ಟಕ್ಕೆ ಇಳಿದಿದ್ದಾರೆ. ಲಸಿಕೆಯು ಪ್ರತಿಯೊಬ್ಬ ನಾಗರಿಕನ ಹಕ್ಕು’ ಎಂದು ಅವರು ಪ್ರತಿಪಾದಿಸಿದರು.

‘ಉತ್ತರ ಪ್ರದೇಶದ ಹಥರಾಸ್‌ನಲ್ಲಿ ಲೈಂಗಿಕ ದೌರ್ಜನ್ಯ ವಿರುದ್ಧ ನಡೆದ ಪ್ರತಿಭಟನೆಯನ್ನು ಅಲ್ಲಿನ ಬಿ.ಜೆ.ಪಿ ಸರ್ಕಾರ ಹತ್ತಿಕ್ಕಿತು. ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಸಂತ್ರಸ್ತೆಯ ಮನೆಯ ಬಳಿಗೆ ಬಿಡಲಿಲ್ಲ. ಹಿಂದಿನ ಯಾವುದೇ ಸರ್ಕಾರಗಳೂ ಈ ರೀತಿ ಮಾಡಿರಲಿಲ್ಲ’ ಎಂದು ಹೇಳಿದರು.

‘ಆಯ್ಕೆಯಾಗುವ ವಿಶ್ವಾಸ’: ‘ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಎಂ.ಕುಬೇರಪ್ಪ ಉತ್ತಮ ಹೋರಾಟಗಾರ. ಶೋಷಣೆ ವಿರುದ್ಧ ಅವರು ಸದಾ ಹೋರಾಟದಲ್ಲಿದ್ದಾರೆ. ಪ್ರಜ್ಞಾವಂತ ಮತದಾರರಿಂದ ಆಯ್ಕೆಯಾಗುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದು ಎಚ್.ಕೆ.ಪಾಟೀಲ ಹೇಳಿದರು.

ಆನಂದ ಅಸ್ನೋಟಿಕರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ವದಂತಿಯಿದೆ ಎಂದು ಪತ್ರಕರ್ತರು ಕೇಳಿದಾಗ, ‘ನನಗೆ ಈ ವಿಚಾರ ಗೊತ್ತಿಲ್ಲ. ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿಕೊಂಡವರು ಅಧ್ಯಕ್ಷರನ್ನು ಭೇಟಿಯಾಗುತ್ತಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಮುಖರಾದ ಸತೀಶ ಸೈಲ್, ಎಸ್.ಕೆ.ಭಾಗ್ವತ್, ಸಮೀರ ನಾಯ್ಕ, ಶಂಭು ಶೆಟ್ಟಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು