ದ್ವೀಪಕ್ಕೆ ಸಂಪರ್ಕ; ಸರ್ಕಾರಕ್ಕೆ ಪ್ರಸ್ತಾವ

7
’ಉಮ್ಮಳೆಜೂಗ ನಡುಗಡ್ಡೆ ಸೇತುವೆಗೆ ಜನಸಂಖ್ಯೆ ಆಧರಿಸಿ ನಿರ್ಧಾರ’

ದ್ವೀಪಕ್ಕೆ ಸಂಪರ್ಕ; ಸರ್ಕಾರಕ್ಕೆ ಪ್ರಸ್ತಾವ

Published:
Updated:
ಕಾರವಾರ ತಾಲ್ಲೂಕಿನ ವೈಲವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಮ್ಮಳೆಜೂಗ ದ್ವೀಪ ಗ್ರಾಮ

ಕಾರವಾರ: ತಾಲ್ಲೂಕಿನ ವೈಲವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಮ್ಮಳೆಜೂಗ ದ್ವೀಪಕ್ಕೆ ಯಾವುದಾದರೂ ಒಂದು ಮಾದರಿಯ ಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ದ್ವೀಪದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರ ಗಮನ ಸೆಳೆದ ‘ಪ್ರಜಾವಾಣಿ’ಗೆ ಅವರು ಪ್ರತಿಕ್ರಿಯಿಸಿ, ‘ದ್ವೀಪವಾಸಿಗಳ ಸಮಸ್ಯೆಯನ್ನು ತಿಳಿದುಕೊಂಡಿದ್ದೇನೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗುವುದು. ಅಲ್ಲಿಗೆ ಸೇತುವೆ ಅಥವಾ ತೂಗುಸೇತುವೆ ನಿರ್ಮಾಣ ಮಾಡುವುದು, ಅದು ಸಾಧ್ಯವಿಲ್ಲದಿದ್ದರೆ ವ್ಯವಸ್ಥಿತ ದೊಡ್ಡ ದೋಣಿಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಯಾವ ಮಾದರಿಯ ಸಂಪರ್ಕ ವ್ಯವಸ್ಥೆ ಎಂಬುದನ್ನು ಅಲ್ಲಿನ ಮನೆಗಳು ಮತ್ತು ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಬೇಕಿದೆ’ ಎಂದು ತಿಳಿಸಿದರು.

ಸುಮಾರು 45 ಎಕರೆ ವಿಸ್ತೀರ್ಣದ ದ್ವೀಪದಲ್ಲಿ ಭತ್ತ ಮತ್ತು ತೆಂಗು ಬೆಳೆಯಲಾಗುತ್ತಿದೆ. ಆದರೆ, ಸಂಪರ್ಕ ವ್ಯವಸ್ಥೆ ಸರಿಯಿಲ್ಲದ ಕಾರಣ ಹಲವರು ಕೃಷಿ ಚಟುವಟಿಕೆಗಳನ್ನೇ ನಿಲ್ಲಿಸಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ, ಫಸಲಿನ ಮಾರಾಟ ಹೀಗೆ ಏನೇ ಇದ್ದರೂ ಸಣ್ಣ ದೋಣಿಗಳಲ್ಲಿಟ್ಟು ಕಾಳಿ ನದಿಯನ್ನು ದಾಟಬೇಕಿದೆ. ದ್ವೀಪದ ಒಟ್ಟೂ ಅವ್ಯವಸ್ಥೆಯಿಂದ ಬೇಸತ್ತು ಹಲವಾರು ಯುವಕರು ಪಟ್ಟಣ ಸೇರಿದ್ದಾರೆ. ಬೇಸಾಯ ಚಟುವಟಿಕೆಗಳನ್ನು ಮಾಡಲು ಕೂಲಿ ಕಾರ್ಮಿಕರೂ ಸಿಗುತ್ತಿಲ್ಲ. ಇದರಿಂದಾಗಿ ಹತ್ತಾರು ಎಕರೆ ಹೊಲಗಳು ಪಾಳುಬಿದ್ದಿವೆ ಎಂದು ಸ್ಥಳೀಯ ನಿವಾಸಿ ಶರದ್ ತಾಮ್ಸೆ ಬೇಸರ ವ್ಯಕ್ತಪಡಿಸುತ್ತಾರೆ.

ವಿದ್ಯುತ್ ತಂತಿಗಳ ದುರಸ್ತಿ: ದ್ವೀಪದಲ್ಲಿ ವಿದ್ಯುತ್ ತಂತಿಗಳ ದುರವಸ್ತೆ ಕುರಿತು ಪತ್ರಿಕೆಗಳಲ್ಲಿ ಈಚೆಗೆ ವರದಿಗಳು ಪ್ರಕಟವಾಗಿದ್ದವು. ಅವುಗಳಿಂದ ಎಚ್ಚೆತ್ತುಕೊಂಡ ಹೆಸ್ಕಾಂ ಸಿಬ್ಬಂದಿ, ಜೋತುಬಿದ್ದ ತಂತಿಗಳು ಮತ್ತು ವಾಲಿದ್ದ ಕಂಬಗಳನ್ನು ಸರಿಪಡಿಸಿದ್ದಾರೆ. ಇದು ಅಲ್ಲಿನ ನಿವಾಸಿಗಳಿಗೆ ಸ್ವಲ್ಪ ನೆಮ್ಮದಿ ತಂದಿದೆ. ಆದರೆ, ದ್ವೀಪಕ್ಕೆ ಅಗತ್ಯವಿರುವ ಪರಿವರ್ತಕವನ್ನು ದೋಣಿಯಲ್ಲಿ ಸಾಗಿಸುವುದು ಕಷ್ಟ ಎಂದು ಹೆಸ್ಕಾಂ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.

ಉಮ್ಮಳೆಜೂಗ ದ್ವೀಪಕ್ಕೆ ಸೇತುವೆ ನಿರ್ಮಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಅಲ್ಲಿನ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.
ರೂಪಾಲಿ ನಾಯ್ಕ, ಶಾಸಕಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !