ವಿದ್ಯುದ್ದೀಪದ ಬೆಳಕಿಗೆ ಕಾದಿರುವ ಸೇತುವೆ

7
ನಿರ್ಮಾಣವಾಗಿ ಎರಡು ವರ್ಷಗಳಾದರೂ ಪೂರಕ ಕೆಲಸಗಳಾಗಿಲ್ಲ: ಆರೋಪ

ವಿದ್ಯುದ್ದೀಪದ ಬೆಳಕಿಗೆ ಕಾದಿರುವ ಸೇತುವೆ

Published:
Updated:
Deccan Herald

ಕಾರವಾರ: ತಾಲ್ಲೂಕಿನ ಸುಂಕೇರಿ ಗ್ರಾಮದ ಬಳಿ ಕಾಳಿ ನದಿಗೆ ಎರಡು ವರ್ಷಗಳ ಹಿಂದೆಯೇ ಸೇತುವೆ ನಿರ್ಮಿಸಲಾಗಿದೆ. ಆದರೆ, ಅದಕ್ಕೆ ಇನ್ನೂ ವಿದ್ಯುತ್ ದೀಪಗಳನ್ನು ಅಳವಡಿಸಿಲ್ಲ. ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಿಲ್ಲ. ಇದರಿಂದ ಇಲ್ಲಿ ಪ್ರಯಾಣ ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಹೊಸ ಸೇತುವೆ ನಿರ್ಮಾಣಕ್ಕೆ ಸುಮಾರು ₹ 9 ಕೋಟಿ ವ್ಯಯಿಸಲಾಗಿದೆ. ಆದರೆ, ಅದರ ಮೇಲೆ ಸುರಕ್ಷಿತವಾಗಿ ಸಂಚರಿಸಲು ಅಗತ್ಯವಾದ ಪೂರಕ ಕೆಲಸಗಳನ್ನು ಲೋಕೋಪಯೋಗಿ ಇಲಾಖೆಯಿಂದ ಇನ್ನೂ ನಿರ್ಮಾಣ ಮಾಡಿಲ್ಲ ಎಂದು ಕಡವಾಡ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣ ವೈಂಗಣಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘60– 70 ವರ್ಷಗಳ ಹಿಂದೆ ನಿರ್ಮಿಸಲಾದ ಹಳೆಯ ಸೇತುವೆ ಈಗ ಶಿಥಿಲಗೊಂಡಿದೆ. ಆದರೂ ಜನರು ಅದರ ಮೇಲೆಯೇ ಓಡಾಡುತ್ತಿದ್ದಾರೆ. ಹೊಸ ಸೇತುವೆಯಲ್ಲಿ ಕನಿಷ್ಠ ಸೌಕರ್ಯಗಳನ್ನೂ ನೀಡದಿರುವುದು ಇದಕ್ಕೆ ಕಾರಣ’ ಎಂದು ದೂರಿದ ಅವರು, ಸೇತುವೆ ಆರಂಭ ಮತ್ತು ಕೊನೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿರುವ ಅಪಾಯಕಾರಿ ತಿರುವುಗಳನ್ನು ತೋರಿಸಿದರು.

ಸೇತುವೆಯ ಎರಡೂ ತುದಿಗಳಲ್ಲಿ ಏಕಾಏಕಿ ತಿರುವುಗಳಿವೆ. ಒಂದುವೇಳೆ ವಾಹನ ಚಾಲಕರು ಇವುಗಳನ್ನು ಗಮನಿಸದೇ ವೇಗವಾಗಿ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ವಾಹನಗಳು 20–30 ಅಡಿಗಳಷ್ಟು ಆಳದ ನದಿಗೆ ಬೀಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಇಷ್ಟೆಲ್ಲ ಖರ್ಚು ಮಾಡಿ ಹೊಸ ಸೇತುವೆ ನಿರ್ಮಿಸಿದರೂ ಸುರಕ್ಷಿತ ಭಾವನೆಯಿಂದ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಒಂದುವೇಳೆ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದು, ಅದರ ಮೇಲೆ ದ್ವಿಚಕ್ರ ವಾಹನಗಳಲ್ಲಿ ಜನರು ಪ್ರಯಾಣಿಸುತ್ತಿದ್ದಾಗಲೇ ಹಳೆಯ ಸೇತುವೆ ಮುರಿದುಬಿದ್ದರೆ ಯಾರು ಹೊಣೆಗಾರರಾಗುತ್ತಾರೆ? ಹೊಸ ಸೇತುವೆಯಂತೂ ಇದು ಇದ್ದೂ ಇಲ್ಲದಂತಾಗಿದೆ. ಸೌಕರ್ಯ ಕೊಡಲು ವಿಳಂಬ ಮಾಡುವ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಕುಡುಕರ ಅಡ್ಡೆ: ಹೊಸ ಸೇತುವೆಯ ಮೇಲೆ ಮತ್ತು ರಸ್ತೆಯ ಅಂಚಿನಲ್ಲಿ ವಿದ್ಯುತ್ ದೀಪಗಳಿಗೆ ಕಂಬ ಅಳವಡಿಸಿ ಎರಡು ತಿಂಗಳಾದವು. ಆದರೆ, ಅವುಗಳಿಗಿನ್ನೂ ದೀಪ ಅಳವಡಿಸಿಲ್ಲ. ಇಲ್ಲಿ ರಾತ್ರಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಕುಡುಕರ ಹಾವಳಿ ಮಿತಿಮೀರಿದೆ. ಮದ್ಯದ ಶೀಶೆಗಳನ್ನು ಒಡೆದು ಹಾಕಿ ಕೇಕೆ ಹಾಕುತ್ತಾರೆ. ಹೀಗಾಗಿ ಆಸುಪಾಸಿನ ಗ್ರಾಮಸ್ಥರು ಅಲ್ಲಿ ಸಂಚರಿಸಲು ಹಿಂಜರಿಯುತ್ತಾರೆ. ಈಗಲೋ ಆಗಲೋ ಎಂಬಂತಿರುವ ಹಳೆಯ ಸೇತುವೆಯನ್ನೇ ಅವಲಂಬಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ರಾಮನಾಥ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !