ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಸಸಿಗೆ ಕಂಬಳಿಹುಳ ದಾಳಿ

ಕಾರವಾರ: ಗೋಯರ್ ಸುತ್ತಮುತ್ತ ಅಲ್ಲಲ್ಲಿ ಹಳದಿಯಾದ ಸಸಿಗಳು
Last Updated 21 ಸೆಪ್ಟೆಂಬರ್ 2021, 16:24 IST
ಅಕ್ಷರ ಗಾತ್ರ

ಕಾರವಾರ: ಈ ವರ್ಷ ಭತ್ತದ ಕೃಷಿಕರಿಗೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತಿದೆ. ಅತಿವೃಷ್ಟಿಯ ನಡುವೆಯೂ ಕಷ್ಟಪಟ್ಟು ನಾಟಿ ಮಾಡಿದ ಭತ್ತದ ಸಸಿಗಳಿಗೆ ಕಂಬಳಿಹುಳಗಳ ಕಾಟ ಶುರುವಾಗಿದೆ. ಭತ್ತದ ಎಲೆಗಳ ರಸ ಹೀರುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಗೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಯರ್ ಗ್ರಾಮದಲ್ಲಿ ಹತ್ತಾರು ಎಕರೆ ಹೊಲಗಳಲ್ಲಿ ಕಂಬಳಿಹುಳಗಳು ಕಾಣಿಸಿಕೊಂಡಿವೆ. ಭತ್ತದ ಸಸಿಗಳ ಮೇಲೆ ಸಾಲಾಗಿ ಕುಳಿತು, ಅವುಗಳ ರಸವನ್ನು ಹೀರುತ್ತಿವೆ. ಇದರಿಂದ ಭತ್ತದ ಗಿಡದ ಸಮರ್ಪಕ ಬೆಳವಣಿಗೆಗೆ ಸಮಸ್ಯೆಯಾಗುವ ಸಾಧ್ಯತೆಯಿದೆ ಎನ್ನುವುದು ರೈತರ ಕಳವಳವಾಗಿದೆ.

‘ಪದೇಪದೇ ಮಳೆ, ಬಿಸಿಲಿನ ವಾತಾವರಣ ಕಂಡುಬಂದಾಗ ಕಂಬಳಿಹುಳಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಪ್ರತಿವರ್ಷ ಸ್ವಲ್ಪ ಪ್ರಮಾಣದಲ್ಲಿ ಇರುತ್ತಿದ್ದವು. ಆದರೆ, ಈ ವರ್ಷ ಸಾವಿರಾರು ಸಂಖ್ಯೆಯಲ್ಲಿವೆ. ಭತ್ತದ ಪೈರು ಬಿಡುವ ದಿನಗಳಲ್ಲಿ ಮತ್ತಷ್ಟು ಕಾಣಿಸಿಕೊಳ್ಳುತ್ತವೆ. ಅದಕ್ಕೆ ಕೀಟನಾಶಕ ಸಿಂಪಡಿಸುತ್ತೇವೆ’ ಎಂದು ಗ್ರಾಮದ ರೈತರು ಹೇಳುತ್ತಾರೆ.

‘ಹೊಲದಲ್ಲಿ ಸೊಂಪಾಗಿ ಬೆಳೆದಿರುವ ಸಸಿಗಳು ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಎಲೆಗಳು ಸಂಪೂರ್ಣವಾಗಿ ಒಣಗುತ್ತಿವೆ. ಮಳೆಗಾಲದ ಆರಂಭದಲ್ಲಿ ಬಿತ್ತನೆ ಮಾಡಲು ಮಳೆಯ ಅಡ್ಡಿಯಾಯಿತು. ನಂತರವೂ ಮಳೆ ಮುಂದುವರಿದ ಕಾರಣ ಗಿಡಗಳು ಚೇತರಿಕೆ ಕಾಣಲಿಲ್ಲ. ಅಂತೂ ಇಂತೂ ಬೆಳೆದ ಗಿಡಗಳಿಗೆ ಈಗ ಹುಳಗಳು ತುಂಬಿಕೊಂಡಿವೆ’ ಎಂದೂ ವಿವರಿಸುತ್ತಾರೆ.

ಹೊನ್ನಾವರ ತಾಲ್ಲೂಕಿನ ವಿವಿಧೆಡೆಯೂ ಭತ್ತಕ್ಕೆ ಇಂಥದ್ದೇ ಸಮಸ್ಯೆ ಎದುರಾಗಿದೆ. ತಾಲ್ಲೂಕಿನ ಹಳದಿಪುರ, ಕರ್ಕಿ, ಚಂದಾವರ ಸುತ್ತಮತ್ತ ಸಸಿಗಳು ಹಳದಿ ಬಣ್ಣಕ್ಕೆ ತಿರುಗಿವೆ. ಶಿರಸಿ ತಾಲ್ಲೂಕಿನ ಹಲವು ಗ್ರಾಮಗಳಲ್ಲೂ ರೋಗ ಕಂಡುಬಂದಿದೆ. ಹೊಲಗಳಲ್ಲಿ ಈ ವೇಳೆಗಾಗಲೇ ಭತ್ತದ ತೆನೆಗಳು ಮೂಡಿರಬೇಕಿತ್ತು. ಸೊರಗಿದ ಸಸಿಗಳಿಗೆ ರೈತರು ಆರೈಕೆ ಮಾಡುತ್ತಿದ್ದು, ಇನ್ನಷ್ಟೇ ಚೇತರಿಕೆ ಕಾಣಬೇಕಿದೆ.

ಕೀಟನಾಶಕ ಸಿಂಪಡಿಸಲು ಸಲಹೆ:

‘ಭತ್ತದ ಸಸಿಗಳಿಗೆ ಹುಳಗಳ ಕಾಟಕ್ಕೆ ಕೀಟನಾಶಕ ಸಿಂಪಡಿಸಬೇಕು. ರೈತರು ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದ್ದಾರೆ.

‘ಭತ್ತದ ಸಸಿಗಳು ಸಂಪೂರ್ಣವಾಗಿ ಹಳದಿಯಾಗಲು ಪೋಷಕಾಂಶಗಳ ಕೊರತೆ ಕಾರಣವಾಗಿರಬಹುದು. ಸೆಗಣಿ ಗೊಬ್ಬರ ನೀಡಿದ 35 ದಿನಗಳ ನಂತರ ಸ್ವಲ್ಪ ಪ್ರಮಾಣದಲ್ಲಿ ಯೂರಿಯಾ ಗೊಬ್ಬರನ್ನು ನೀಡಬೇಕು. ಸಸಿಗಳನ್ನು ನಾಟಿ ಮಾಡಿದ ಬಳಿಕ ಆರೈಕೆ ಮಾಡಬೇಕು. ಸಾರಜನಕ, ಜಿಂಕ್ ಕೊರತೆಯಾದರೆ ಗಿಡಗಳು ಹಳದಿ ಬಣ್ಣವಾಗುತ್ತವೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT